ಕಿರೆಂ ಚರ್ಚ್ ವಾರ್ಷಿಕ ಹಬ್ಬ, ಅಭಿನಂದನೆ
ಮೂಲ್ಕಿ: ದಾಮಸ್ ಕಟ್ಟೆಯ ಕಿರೆಂ ಚರ್ಚ್ನ ವಾರ್ಷಿಕ ಹಬ್ಬದ ಸಂದರ್ಭದಲ್ಲಿ ಹಿಂದಿನ ಸಂಪ್ರದಾಯದಂತೆ ಟಿಪ್ಪು ಸುಲ್ತಾನನ ಅವಧಿಯಲ್ಲಿ ಚರ್ಚ್ ಮೇಲೆ ಟಿಪ್ಪು ಸುಲ್ತಾನ್ ದಾಳಿ ನಡೆಸಿದ ಸಂದರ್ಭದಲ್ಲಿ ಚರ್ಚ್ ಅನ್ನು ರಕ್ಷಣೆಗೈದ ಐಕಳ ಬಾವಾ, ತಾಳಿಪಾಡಿ ಗುತ್ತು ಮತ್ತು ಏಳಿಂಜೆ ಅಂಗಡಿ ಗುತ್ತು ಅವರನ್ನು ಗೌರವಿಸುವ ಪದ್ಧತಿಯಂತೆ ಚರ್ಚ್ನ ಧರ್ಮಗುರು ಪಾವ್ಲ್ ಪಿಂಟೋ ಅವರು ಐಕಳಬಾವಾದ ರಘುಚಂದ್ರ ಶೆಟ್ಟಿ, ಜಯಪಾಲ ಶೆಟ್ಟಿ, ತಾಳಿಪಾಡಿ ಗುತ್ತಿನ ಸುಕುಮಾರ್ ಶೆಟ್ಟಿ, ವಿಶಾಲ್ ಶೆಟ್ಟಿ ಹಾಗೂ ಏಳಿಂಜೆ ಅಂಗಡಿಗುತ್ತಿನ ಶಂಭು ಶೆಟ್ಟಿ, ಪ್ರಸಾದ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿಗೆ ಎಲೆ ಅಡಕೆ, ಬಾಳೆಗೊನೆ ನೀಡಿ ಗೌರವಿಸಿದರು. ಚರ್ಚ್ನ ಜೆರೋಮ್ ಡಿ' ಸೋಜ, ಪಾಲನಾ ಮಂಡಳಿ ಉಪಾಧ್ಯಕ್ಷ ರಾಬರ್ಟ್ ರೊಡ್ರಿಗಸ್ ಇದ್ದರು.
ಡಿ.1ರಂದು ಅನಾಥಾಶ್ರಮಗಳ ಒಲಂಪಿಕ್ಸ್
ಮಂಗಳೂರು: ಅನಾಥಾಶ್ರಮಗಳ ಮಕ್ಕಳ ಕ್ರೀಡಾಕೂಟ ಒಲಂಪಿಕ್ಸ್ -2013 ಮಂಗಳೂರು ರೋಟರಿ ಕ್ಲಬ್ ಸೆಂಟ್ರಲ್ ಮತ್ತು ಶ್ರೀ ಶಾಸ್ತಾವು ಭೂತನಾಥೇಶ್ವರ ಕ್ಷೇತ್ರ ಜಂಟಿಯಾಗಿ ಆಯೋಜಿಸಿದೆ. 10 ಅನಾಥಾಲಯದ 600 ಮಕ್ಕಳ ಹಳ್ಳಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಡಿ.1ರಂದು ಬಡಗಎಡಪದವು ಭೂತನಾಥೇಶ್ವರ ಕ್ಷೇತ್ರ ಆವರಣದಲ್ಲಿ ನಡೆಯಲಿದೆ ಎಂದು ಕ್ರೀಡಾಕೂಟ ಅಧ್ಯಕ್ಷ ಡಾ.ದೇವದಾಸ್ ರೈ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. 1996ರಿಂದ ಅನಾಥ ಮಕ್ಕಳ ಒಲಂಪಿಕ್ಸ್ ನಡೆಸುತ್ತಿದ್ದು, ಮಧ್ಯೆ 3 ವರ್ಷ ನಡೆಸಲಾಗಲಿಲ್ಲ. ಇದು 15ನೇ ಒಲಂಪಿಕ್ಸ್. ಭೂತನಾಥೇಶ್ವರ ಟ್ರಸ್ಟ್ ವಿಜಯನಾಥ ವಿಠಲ ಶೆಟ್ಟಿ ಶೇ.90 ಪ್ರಾಯೋಜಕತ್ವ ವಹಿಸಲು ಒಪ್ಪಿದ್ದಾರೆ. ಕಾರ್ಯಕ್ರಮ 3 ಲಕ್ಷ ವೆಚ್ಚದಲ್ಲಿ ನಡೆಸಲಾಗುತ್ತಿದೆ. ಅನಾಥಾಶ್ರಮದಲ್ಲಿ ಹೆತ್ತವರ ಪ್ರೀತಿಯಿಂದ ವಂಚಿತರಾದ ಮಕ್ಕಳಿಗೆ ಹರ್ಷ ನೀಡುವುದೇ ಕಾರ್ಯಕ್ರಮ ಉದ್ದೇಶ. ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್, ನಿಯೋಜಿತ ರೋಟರಿ ಗವರ್ನರ್ ಡಾ.ಭಾಸ್ಕರ್, ವಿಜಯನಾಥ ವಿಠಲ ಶೆಟ್ಟಿ, ಮೀನುಗಾರಿಕೆ ಸಚಿವ ಅಭಯಚಂದ್ರ ಜೈನ್, ರೋಟರಿ ಉಪಗವರ್ನರ್ ಡಾ.ಅರವಿಂದ ಭಟ್, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸಮಾರಂಭದಲ್ಲಿ ಭಾಗವಹಿಸುವರು ಎಂದರು. ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ರಾಜಗೋಪಾಲ ರೈ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೇಮನಾಥ ಶೆಟ್ಟಿ, ಸಂತೋಷ್ ಶೇಟ್, ಭಾಸ್ಕರ ಅರಸ್ ಇದ್ದರು.
ಬೀದಿ ದನಗಳು: ಕ್ರಮಕ್ಕೆ ಪೊಲೀಸ್ ಸೂಚನೆ
ಸುಳ್ಯ: ಬೀದಿ ದನಗಳು ಹಾಗೂ ಬ್ಯಾನರ್ ಬಂಟಿಂಗ್ಗಳ ಹಾವಳಿಯಿಂದ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಅವುಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಸುಳ್ಯ ಪಟ್ಟಣ ಪಂಚಾಯಿತಿಗೆ ಪೊಲೀಸ್ ಇಲಾಖೆ ಪತ್ರ ಬರೆದಿದೆ. ಬೀದಿ ದನಗಳನ್ನು ಕಳವು ಮಾಡಿ ಸಾಗಾಟ ಮಾಡುವುದು ನಡೆಯುತ್ತಿದ್ದು, ಇದು ಕೋಮು ಸಂಘರ್ಷಕ್ಕೆ ಕಾರಣವಾಗುತ್ತಿದೆ. ಕಿಡಿಗೇಡಿಗಳು ಬ್ಯಾನರ್ ಬಂಟಿಂಗ್ಗಳನ್ನು ಹಾನಿ ಮಾಡುವ ಕೃತ್ಯ ನಡೆಸುತ್ತಿದೆ. ಅಲ್ಲದೆ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಹಾಗಾಗಿ ಅವುಗಳನನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ. ಆದರೆ, ಪತ್ರ ಬರೆದು ವಾರ ಕಳೆದರೂ ಸ್ಥಳೀಯಾಡಳಿತ ಮಾತ್ರ ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದಾಗ ಪತ್ರ ಬಂದಿದೆ. ಅದು ಹೆಲ್ತ್ ಇನ್ಸ್ಪೆಕ್ಟರ್ ಅವರಲ್ಲಿದೆ ಎಂದು ಉತ್ತರಿಸಿದ್ದಾರೆ.
ಡಿ.14ರಂದು ತುಳುನಾಡ್ದ ಬೀರೆರ್ ಕಲಾ ಪ್ರದರ್ಶನ
ಬಂಟ್ವಾಳ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ನ ವಿಜಯ ರಜತ ಸಂಭ್ರಮ-2014ರ ಅಂಗವಾಗಿ ನಡೆಯುವ ತುಳುನಾಡ್ದ ಜಾತ್ರೆ ಬಲೇ ತೇರ್ ಒಯಿಪುಗ ಕಾರ್ಯಕ್ರಮದ ಪೂರ್ವಭಾವಿಯಾಗಿ ತುಳುನಾಡ್ದ ಬೀರೆರ್ ಕಲಾ ಸಾಂಸ್ಕೃತಿಕ ವೈವಿಧ್ಯ ಪ್ರದರ್ಶನ ಡಿ.14ರಂದು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಸಭಾಂಗಣದಲ್ಲಿ ನಡೆಯಲಿದೆ ಎಂದು ತುಳು ತೇರ್ ಬಂಟ್ವಾಳ ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ ತಿಳಿಸಿದ್ದಾರೆ.
ಜಾನಪದ, ಸಾಂಸ್ಕೃತಿಕ ಕ್ಷೇತ್ರದ ವೀರರಿಗೆ ಮಾತ್ರ ಪ್ರದರ್ಶನ ಸೀಮಿತವಾಗದೇ ತುಳುನಾಡಿನಲ್ಲಿ ಸಾಮಾಜಿಕ, ಶೈಕ್ಷಣಿಕ, ಸ್ವಾತಂತ್ರ್ಯ ಚಳುವಳಿ, ಸಹಕಾರಿ, ಧಾರ್ಮಿಕ ಮೊದಲಾದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ತುಳುನಾಡಿನ ಪ್ರಗತಿಗಾಗಿ ದುಡಿದಿರುವ ವೀರರನ್ನು ಈ ಪ್ರದರ್ಶನದ ಮೂಲಕ ನೆನೆಯಬೇಕು ಎನ್ನುವುದು ಈ ಸ್ಪರ್ಧೆಯ ಉದ್ದೇಶವಾಗಿದೆ.
ತುಳುನಾಡ್ದ ಬೀರೆರ್ ಎಂಬ ವಿಷಯದಲ್ಲಿ ಗರಿಷ್ಠ 7 ನಿಮಿಷದ ಸಾಂಸ್ಕೃತಿಕ ಪ್ರದರ್ಶನ ನೀಡಬೇಕು. ವೈಯಕ್ತಿಕ ಹಾಗೂ ಗುಂಪು ವಿಭಾಗದಲ್ಲಿ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. ಪ್ರಥಮ, ದ್ವಿತೀಯ, ತೃತೀಯ ಬಹುಮಾನವಿದೆ. ಸ್ಪರ್ಧೆ ಡಿ.14ರಂದು ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ. ಸ್ಪರ್ಧಾಳುಗಳು ಬೆಳಗ್ಗೆ 9.30ಕ್ಕೆ ಸಭಾಂಗಣದಲ್ಲಿ ಹಾಜರಿರಬೇಕು. ಹೆಸರನ್ನು ಡಿ.10ರೊಳಗೆ ನೋಂದಾಯಿಸಬೇಕಿದ್ದು, ನೋಂದಣಿಗಾಗಿ ಮಂಜು ವಿಟ್ಲ (9611475406) ಅಥವಾ ಗೋಪಾಲ ಅಂಚನ್ ( 9449104318) ಅವರನ್ನು ಸಂಪರ್ಕಿಸಿ.