ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ತುಳು ಭಾಷೆಗೆ ನಿರ್ಬಂಧ
ಬಂಟ್ವಾಳ: ತುಳುನಾಡಿನ ಎಲ್ಲೆಡೆ ಭಾಷಾಭಿಮಾನ ಉಕ್ಕಿ ಹರಿಯುತ್ತಿದ್ದರೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮಾತ್ರ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮದಿಂದ ತುಳು ಭಾಷೆಯನ್ನು ದೂರವಿಟ್ಟಿದೆ.
ಪ್ರತಿಭಾ ಕಾರಂಜಿಯ ಹೆಸರಿನಲ್ಲಿ ಕಳೆದ ಹಲವು ವರ್ಷಗಳಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಶಿಕ್ಷಣ ಇಲಾಖೆ ಆಯೋಜಿಸುತ್ತಿದೆ. ಈ 29 ಸ್ಪರ್ಧೆಗಳ ಜೊತೆ ಜನಪದ ಗೀತೆ, ನೃತ್ಯ ಸ್ಪರ್ಧೆಗಳು ಇವೆ. ಆದರೆ, ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಶಾಲೆಗಳಿಗೆ ನೀಡಿರುವ ಸುತ್ತೋಲೆಯಲ್ಲಿ ಜನಪದ ಗೀತೆ ಹಾಗೂ ಜನಪದ ನೃತ್ಯಗಳಿಗೆ ಕನ್ನಡ ಭಾಷೆಯನ್ನು ಮಾತ್ರ ಆಯ್ದುಕೊಳ್ಳಲು ಸೂಚಿಸಿದೆ.
ನಿರ್ಬಂಧ...: ಮುಂದಿನ ಡಿಸಂಬರ್ನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಕಳೆದ ಅ. 31ರಂದು ಬೆಳ್ತಂಗಡಿಯಲ್ಲಿ ನಡೆದ ಪೂರ್ವ ತಯಾರಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳಂತೆ ಜಿಲ್ಲಾ ಉಪನಿರ್ದೇಶಕರು ಈ ಆದೇಶ ಹೊರಡಿಸಿದ್ದಾರೆ.
ಈ ಆದೇಶದಿಂದಾಗಿ ತುಳು ಜನಪದ ಕುಣಿತಗಳಿಗೆ ನಿರ್ಬಂಧ ಹೇರಿದಂತಾಗಿದೆ. ಈ ಹಿನ್ನೆಲೆಯಲ್ಲಿ ಇನ್ನು ಮಂದೆ ವಿದ್ಯಾರ್ಥಿ ತಂಡಗಳು ಉತ್ತರ ಕರ್ನಾಟಕ ಮೂಲದ ಜನಪದ ನೃತ್ಯಕ್ಕೆ ಮೊರೆಹೋಗಬೇಕಾಗಿದೆ. ತುಳು ಹಾಡುಗಳನ್ನು ಕನ್ನಡಕ್ಕೆ ಭಾಷಾಂತರಿಸಿ ನೃತ್ಯ ಪ್ರದರ್ಶಿಸಲೂ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ.
ಈಗಾಗಲೇ ಜಿಲ್ಲೆಯಲ್ಲಿ ಶಾಲಾ ಮಟ್ಟ ಹಾಗೂ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಮುಗಿದಿದ್ದು, ಬ್ಲಾಕ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಿಗೆ ಸಿದ್ಧತೆ ನಡೆಯುತ್ತಿದೆ.
ಯಾಕೆ ಹೀಗೆ..?: ಎರಡು ವರ್ಷದ ಹಿಂದೆ ಉತ್ತರ ಕರ್ನಾಟಕ ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ದ.ಕ. ಜಿಲ್ಲೆಯಲ್ಲಿ ಪ್ರಥಮ ಸ್ಥಾನಗಳಿಸಿದ್ದ ತುಳು ಜನಪದ ನೃತ್ಯವನ್ನು ವಿದ್ಯಾರ್ಥಿ ತಂಡ ಪ್ರದರ್ಶಿಸಿತ್ತು. ಆದರೆ, ಅಲ್ಲಿನ ತೀರ್ಪುಗಾರರು ಈ ನೃತ್ಯವನ್ನು, ತಂಡವನ್ನು ಅವಮಾನ ಗೊಳಿಸಿದ್ದರಂತೆ. ಹೀಗಾಗಿ ರಾಜ್ಯಮಟ್ಟವನ್ನು ದೃಷ್ಟಿಯಲ್ಲಿರಿಸಿಕೊಂಡು ಜಿಲ್ಲಾ ಮಟ್ಟದಲ್ಲಿ ತುಳು ಭಾಷೆಯ ಜನಪದ ಗೀತೆ ಹಾಗೂ ಜನಪದ ನೃತ್ಯಗಳನ್ನು ದೂರವಿಡಲಾಗಿದೆ ಎನ್ನುವುದು ಶಿಕ್ಷಣ ಇಲಾಖೆ ಸಮರ್ಥನೆ.
ಖರ್ಚೂ ಅಧಿಕ...: ಜನಪದ ನೃತ್ಯ ಸ್ಪರ್ಧೆಗಳಿಗೆ ಭಾಗವಹಿಸುವ ಶೇ.75 ರಷ್ಟು ತಂಡಗಳು ತುಳು ಮೂಲದ ಜನಪದ ನೃತ್ಯಗಳನ್ನೇ ಆಯ್ದುಕೊಳ್ಳುತ್ತಿತ್ತು. ಯಾಕೆಂದರೆ ತುಳುನಾಡಿನ ತೀರಾ ಜನಪದ ಸ್ವರೂಪದಲ್ಲೇ ನೃತ್ಯಗಳನ್ನು ಪ್ರದರ್ಶಿಸುವ ತಂಡಗಳಿಗೆ ಸ್ಪರ್ಧೆಗೆ ಬಳಸುವ ವೇಷಭೂಷಣಗಳಿಗೂ ಕಡಿಮೆ ವೆಚ್ಚವಾಗುತ್ತದೆ. ಆದರೆ, ತುಳುನಾಡಿನದ್ದಲ್ಲದ ಜನಪದ ಪ್ರಕಾರಗಳಿಗೆ ವೇಷ ಭೂಷಣಗಳಿಗೆ ಖರ್ಚೂ ಅಧಿಕ.
ಇಲಾಖೆಯ ಇಂತಹಾ ನಿರ್ಧಾರಗಳಿಂದ ಮರೆಯಾಗುತ್ತಿರುವ ತುಳುನಾಡಿನ ಆಚರಣೆ, ಸಂಪ್ರದಾಯಗಳ ಜೊತೆಯಲ್ಲಿ ಈ ಜನಪದ ಕುಣಿತಗಳೂ ಕಾಣದಂತೆ ಮಾಯವಾಗುವ ಆತಂಕವಿದೆ. ಇಷ್ಟಕ್ಕೂ ಇಲ್ಲಿ ಆಗಬೇಕಿರುವುದು ತುಳು ಭಾಷೆಗೆ ನಿರ್ಬಂಧವಲ್ಲ. ತುಳು ಜನಪದ ಪ್ರಾಕಾರಗಳಿಗೂ ರಾಜ್ಯಮಟ್ಟದಲ್ಲಿ ಮಾನ್ಯತೆ ಸಿಗುವಂತೆ ನೋಡಿಕೊಳ್ಳಬೇಕು, ತೀರ್ಪುಗಾರರರಿಗೆ ತುಳುನಾಡಿನ ಹಿರಿಮೆಯನ್ನು ಅರ್ಥಮಾಡಿಸಬೇಕು.
ಈ ಬಗೆಯಲ್ಲಿ ಕಾರ್ಯನಿರ್ವಹಿಸಬೇಕಾದ ಇಲಾಖೆ ಅದನ್ನು ಮರೆತು ತುಳು ಭಾಷೆಯನ್ನೇ ನಿರ್ಬಂಧಿಸ ಹೊರಟಿದೆ.
- ಮೌನೇಶ ವಿಶ್ವಕರ್ಮ