ವಿವಾದತ್ಮಕ ಕಟ್ಟಡ ನಿರ್ಮಾಣ ಕಾಮಗಾರಿ ತಡೆಗೆ ಪಿಡಿಒ ನಿರ್ಲಕ್ಷ್ಯ ಆರೋಪ: ವರ್ತಕರ ಧರಣಿ
ಉಪ್ಪಿನಂಗಡಿ: ವಿವಾದತ್ಮಕ ಕಟ್ಟಡ ಕಾಮಗಾರಿ ತಡೆಗಟ್ಟುವಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುಂದಾಗುತ್ತಿಲ್ಲ ಎಂದು ಆರೋಪಿಸಿ ಉಪ್ಪಿನಂಗಡಿ ಜಿಎಸ್‌ಬಿ ಸಮುದಾಯದವರು ಬುಧವಾರ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.
ಉಪ್ಪಿನಂಗಡಿ ಹಳೆ ಬಸ್ ನಿಲ್ದಾಣದ ಬಳಿಯ ರತ್ನ ಎಂಬವರು ಶಾಶ್ವತ ಮೂಲ ಗೇಣಿಯಾಧಾರಿತ ಅನುಭವಿಸಿಕೊಂಡು ಬರುತ್ತಿರುವ ಭೂಮಿಯಲ್ಲಿ ಕಟ್ಟಡ ನಿರ್ಮಾಣ ತಡೆಗಟ್ಟಲು ಉಪ್ಪಿನಂಗಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಆಡಳಿತ ಮಂಡಳಿ ಮೂರು ಬಾರಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿತ್ತು. ತಡೆಯಾಜ್ಞೆ ತೆರವುಗೊಂಡ ಬಳಿಕ, ದ.ಕ. ಜಿಲ್ಲಾಧಿಕಾರಿ ಭೂ ಪರಿವರ್ತನೆ ರದ್ದುಗೊಳಿಸಿದ ಆದೇಶವನ್ನೂ ಉಚ್ಚ ನ್ಯಾಯಾಲಯವು ಅಮಾನ್ಯಗೊಳಿಸಿದೆ ಎಂದು ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಟ್ಟಡ ಕಾಮಗಾರಿ ಕೆಲ ದಿನಗಳಿಂದ ಪುನರಾಂಭಗೊಂಡಿತ್ತು.
ಆದರೆ, ಜಿಲ್ಲಾಧಿಕಾರಿ ಆದೇಶ ರದ್ದುಗೊಂಡ ನ್ಯಾಯಾಲಯದ ತೀರ್ಪಿನ ಪೂರ್ಣ ದಾಖಲೆ ಕೈ ಸೇರದೆ ಕಟ್ಟಡ ಕಾಮಗಾರಿ ನಡೆಸಬಾರದು ಎಂದು ದೇವಾಲಯದ ಆಡಳಿತ ಮಂಡಳಿ ಅಗ್ರಹಿಸಿತ್ತು.
ಈ ಆಗ್ರಹದಂತೆ ಕಾಮಗಾರಿ ಮುಂದುವರಿದಾಗ ಪ್ರಕರಣದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಶಾಮೀಲಾತಿ ಇದೆ ಎಂದು ಆರೋಪಿಸಿ ಮಂಗಳವಾರ ದಿಢೀರ್ ಪ್ರತಿಭಟನೆ ಕೈಗೊಂಡು ಕಾಮಗಾರಿ ನಿಲ್ಲಿಸಲಾಗಿತ್ತು.
ನಂತರ ಬೆಳವಣಿಗೆಯಲ್ಲಿ ಬುಧವಾರ ಎಲ್ಲಾ ಜಿಎಸ್‌ಬಿ ಸಮುದಾಯದ ವರ್ತಕರು ಅಂಗಡಿಗಳನ್ನು ಬಂದ್ ಮಾಡಿ ಪಿಡಿಒ ವರ್ಗಾವಣೆಗೆ ಹಾಗೂ ಕಟ್ಟಡ ಸಂಖ್ಯೆ ರದ್ಧತಿಗೆ ಅಗ್ರಹಿಸುವ ನಿರ್ಧಾರ ಕೈಗೊಳ್ಳಲಾಯಿತು.
ಬುಧವಾರ ಅಂಗಡಿಗಳನ್ನು ಬಂದ್ ಮಾಡಿ ಪಂಚಾಯಿತಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿ, ಪಿಡಿಒ, ಪಂಚಾಯಿತಿ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿದರು.
ಸಂಜೆ ವೇಳೆ ಧರಣಿ ನಿರತರನ್ನು ಭೇಟಿ ಮಾಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಜಯ ಗೌಡ ಬಿ.ಎಸ್., ಪ್ರತಿಭಟನಾ ನಿರತರ ಮನವಿ ಸ್ವೀಕರಿಸಿ, ಪಿಡಿಒ ವಿರುದ್ಧದ ಆಪಾದನೆಯ ತನಿಖೆಗಾಗಿ ಮೇಲಾಧಿಕಾರಿಗಳಿಗೆ ವಿನಂತಿಸಲಾಗುವುದು. ಕಟ್ಟಡದ ಬಗ್ಗೆ ಇರುವ ವಿವಾದವನ್ನು ದೇವಾಲಯದ ಅರ್ಜಿಯ ಹಿನ್ನೆಲೆಯಲ್ಲಿ ಡಿ. 2ರಂದು ವಿಚಾರಣೆ ನಡೆಯಲಿದೆ. ಅಲ್ಲಿ ಅದರ ತೀರ್ಮಾನವಾಗಲಿದೆ ಎಂದರು.
ಬಳಿಕ ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಳ್ಳಲಾಯಿತು.
ಪ್ರತಿಭಟನೆಯಲ್ಲಿ ಸಮುದಾಯದ ಮುಂದಾಳುಗಳಾದ ಉಪೇಂದ್ರ ಪೈ, ವಾಸುದೇವ ಪ್ರಭು, ಗಣೇಶ್ ಶೆಣೈ, ಸುಜೀರ್ ಗಣಪತಿ ನಾಯಕ್, ರವಳನಾಥ್ ಪ್ರಭು, ಗಣೇಶ್ ಭಟ್, ಶಾಂತರಾಮ ಶೆಣೈ, ಅನಂತ ಶೆಣೈ, ಯು. ರಾಜೇಶ್ ಪೈ, ಪ್ರಕಾಶ ಭಟ್, ಪ್ರಭಾತ್ ಭಟ್ ಇದ್ದರು.