'ಮಂಗಳೂರು ವಿವಿ ಉಪನ್ಯಾಸಕರ ನೇಮಕ ಪಾರದರ್ಶಕವಾಗಿದೆ'
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ ಉಪನ್ಯಾಸಕರ ನೇಮಕ ಪ್ರಕ್ರಿಯೆ ಯುಜಿಸಿ ಕಾಯ್ದೆಯಂತೆ ಪಾರದರ್ಶಕವಾಗಿ ನಡೆದಿದೆ. ಈ ಕುರಿತು 15 ದಿನದೊಳಗೆ ಎಲ್ಲ ದಾಖಲಾತಿಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ.ಟಿ.ಸಿ. ಶಿವಶಂಕರಮೂರ್ತಿ ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಎಪಿಐ ಪಾಯಿಂಟ್ಸ್‌ನ್ನು ಲೆಕ್ಕಾಚಾರ ಮಾಡೋದು ಕುಲಪತಿಯಲ್ಲ, ಇವರು ನೇಮಕಾತಿಯ ಬಗ್ಗೆ ಪರಿಶೀಲನೆ ಮಾತ್ರ ನಡೆಸುತ್ತಾರೆ. ಎಪಿಐ ಪಾಯಿಂಟ್ಸ್‌ನ್ನು ನೋಡಿಕೊಳ್ಳುವುದು ನೇಮಕಾತಿ ಸಮಿತಿಯ ವಿಷಯ ವಿಶೇಷ ತಜ್ಞರು. ಇವರು 400 ಮಾರ್ಕ್ಸ್ ಅನುಗುಣವಾಗಿ ಉಪನ್ಯಾಸಕರ ದಾಖಲೆಯನ್ನು ಪರಿಶೀಲನೆ ನಡೆಸುತ್ತಾರೆ. ನಂತರ ಇವರನ್ನು ಸಂದರ್ಶನಕ್ಕೆ ನೇಮಕಗೊಳಿಸುತ್ತಾರೆ.
1999 ರಿಂದಲೇ ಬಾಕಿಯಿರುವ ಬ್ಯಾಕ್‌ಲಾಗ್ ಹುದ್ದೆಯನ್ನು ಭರ್ತಿಗೊಳಿಸುವಂತೆ ಸದನ ಸಮಿತಿ ತನಗೆ ಮತ್ತು ರಿಜಿಸ್ಟ್ರಾರ್‌ಗೆ ಆದೇಶ ಮಾಡಿದ್ದು, ಇದರಲ್ಲಿ ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದರು.
ಅ. 26 ರಿಂದ ನ. 7ರವರೆಗೆ ಉಪನ್ಯಾಸಕರ ಸಂದರ್ಶನ ನಡೆಸಲಾಗಿತ್ತು. ನ. 8 ರಂದು ಬೆಳಗ್ಗೆ 11ಕ್ಕೆ ಸಿಂಡಿಕೇಟ್ ಸಭೆ ನಡೆಸಿದ್ದು, 12.30ಕ್ಕೆ ಇದಕ್ಕೆ ಅನುಮೋದಿಸಿ ಸಂಜೆ 5ಕ್ಕೆ ಒಪ್ಪಿಗೆ ಆದೇಶ ಕಳುಹಿಸಿಲಾಗಿದೆ.
ಒಟ್ಟು 21 ಮಂದಿ ಸಹಪ್ರಾಧ್ಯಾಪಕರ ಸಂದರ್ಶನ ನಡೆಸಲಾಗಿದೆ. ಇದರಲ್ಲಿ 18 ಮಂದಿ ನೇಮಕಗೊಂಡು ಕೆಲಸಕ್ಕೆ ಹಾಜರಾಗಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯದಲ್ಲಿ ದಾಖಲೆಯಿದೆ ಎಂದರು.
ಯುಜಿಸಿ ಪ್ರಕಾರ ಉಪನ್ಯಾಸಕರು ಕಡ್ಡಾಯವಾಗಿ 10 ವರ್ಷ ಉಪನ್ಯಾಸ ಅನುಭವ ಮತ್ತು ಸಂಶೋಧನೆ ನಡೆಸಿದ ಪ್ರಬಂಧಗಳನ್ನು ಮಂಡಿಸಬೇಕು. ಇಂಥವರು ಮಾತ್ರ ಅರ್ಹರೆಂದು ಇದರಲ್ಲಿ ತಿಳಿಸಲಾಗಿದೆ. ಆದ್ದರಿಂದ ಕೇವಲ 20-30 ವರ್ಷ ಉಪನ್ಯಾಸ ಅನುಭವ ಹೊಂದಿರುವ ಉಪನ್ಯಾಸಕರಲ್ಲಿ ಸಂಶೋಧನೆ ದಾಖಲೆ ಇಲ್ಲವಾದಲ್ಲಿ ಅರ್ಹತೆ ಪಡೆದಿರುವುದಿಲ್ಲ ಎಂದರು.