ಅಭಿವೃದ್ಧಿ ಹೆಸರಲ್ಲಿ ಮರನಾಶ: ಪ್ರೊ. ದಳವಾಯಿ ವಿಷಾದ
ಮಣಿಪಾಲ: ಅಭಿವೃದ್ಧಿ ಹೆಸರಿನಲ್ಲಿ ಸಾಲುಸಾಲು ಮರಗಳನ್ನು ಕಡಿಯಲಾಗುತ್ತಿದೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಮರಳುಗಾಡು ನಿರ್ಮಾಣವಾಗುವ ದಿನ ದೂರ ಇಲ್ಲ ಎಂದು ಬೆಳಗಾವಿ ರಾಣಿ ಚೆನ್ನಮ್ಮ ವಿವಿ ಕನ್ನಡ ಶಾಸ್ತ್ರೀಯ ಅಧ್ಯಯನ ಪೀಠ ನಿರ್ದೇಶಕ ಪ್ರೊ. ರಾಜಪ್ಪ ದಳವಾಯಿ ಕಳವಳ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಮಾಧವ ಪೈ ಮೆಮೋರಿಯಲ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ವತಿಯಿಂದ ಬುಧವಾರ ನಡೆದ ರಾಜ್ಯ ಮಟ್ಟದ 'ಪರಿಸರ ಚಳುವಳಿಗಳು ಮತ್ತು ಮಾಧ್ಯಮ' ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರದಲ್ಲಿರುವ ಗಿಡ ಮರಗಳು ಕಣ್ಮರೆಯಾಗುತ್ತಿರುವ ಜೊತೆಗೆ ಅದನ್ನು ನಂಬಿಕೊಂಡಿರುವ ಅಮೂಲ್ಯ ಜೀವ ಸಂಕುಲವೇ ನಾಶವಾಗುತ್ತಿದೆ, ಇದನ್ನು ಮರುನಿರ್ಮಿಸಲು ಸಾಧ್ಯವಿಲ್ಲ. ಇಂದು ಪರಿಸರದ ರಕ್ಷಣೆಗಾಗಿ ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದರೆ ಇದಕ್ಕಿಂತ ದೊಡ್ಡ ದುರಂತ ಬೇರಾವುದಿಲ್ಲ ಎಂದವರು ಆತಂಕ ವ್ಯಕ್ತಪಡಿಸಿದರು.
ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಶಿವಾನಂದ ಕಳವೆ ದಿಕ್ಸೂಚಿ ಭಾಷಣ ಮಾಡಿ, 70 ದಶಕಗಳ ಹಿಂದಿನ ಹಾಗೂ ಇಂದು ಇರುವ ಪರಿಸರಕ್ಕೂ ಬಹಳ ವ್ಯತ್ಯಾಸವಿದೆ. ಅಂದು ಹಿರಿಯರು ಪರಿಸರದ ಜೊತೆಗೆ ಒಡನಾಟ ಬೆಳೆಸಿಕೊಂಡಿದ್ದರು. ಆದರೆ ಇಂದು ಯುವ ಪೀಳಿಗೆಗೆ ಇಂಟರ್ನೆಟ್, ಮೊಬೈಲ್ ಫೋನ್ಗಳೇ ಒಡನಾಡಿಗಳು. ಇದು ಹೀಗೆ ಮುಂದುವರಿದರೆ ಮುಂದಿನ ಜನಾಂಗಕ್ಕೆ ಪರಿಸರ ಹೀಗಿತ್ತು ಎಂದು ಹೇಳಬೇಕಾದ ಪರಿಸ್ಥಿತಿ ಸೃಷ್ಟಿಯಾಗಬಹುದು ಎಂದು ವಿಷಾದ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ. ದಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಿಯುಸಿಎಲ್ ಅಧ್ಯಕ್ಷ ಪಿ.ಬಿ. ಡೇಸಾ ಇದ್ದರು. ಶಿಕ್ಷಕಿ ಜಯಲಕ್ಷ್ಮೀ ಇದ್ದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡೊಂಬಯ್ಯ ಇಡ್ಕಿದು ಸ್ವಾಗತಿಸಿದರು. ಶಿಕ್ಷಕ ಶ್ರೀನಿವಾಸ ವೈದ್ಯ ನಿರೂಪಿಸಿದರು. ಜೆಸಿಐ ಮಣಿಪಾಲ ಹಿಲ್ ಸಿಟಿ ಅಧ್ಯಕ್ಷ ಪ್ರಕಾಶ್ ಬಿ. ವಂದಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದ ಪತ್ರಕರ್ತ ಬಾಲಕೃಷ್ಣ ಪುತ್ತಿಗೆ 'ಪರಿಸರ ಸಮಸ್ಯೆಗಳು ಮತ್ತು ವಿವಾದ' ಕುರಿತು, ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರದ ನಿರ್ದೇಶಕರಾದ ಶಿವಾನಂದ ಕಳವೆ 'ಪರಿಸರ ರಕ್ಷಣೆ ಮತ್ತು ಕಾಳಜಿಗಳು', ರಂಗ ನಿರ್ದೇಶಕ ಜಗನ್ 'ಬೀದಿ ನಾಟಕದ ಮೂಲಕ ಪರಿಸರ ರಕ್ಷಣೆ' ಹಾಗೂ ಪತ್ರಕರ್ತ ಹರೀಶ್ ಆದೂರು 'ಪ್ರಸ್ತಾವಿತ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ವಿಷಯದ ಬಗ್ಗೆ ಮಾಹಿತಿ ನೀಡಿದರು.