ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕುಡುಪು ಬಳಿ ಅಕ್ರಮ ಗೋಸಾಗಾಟ ಲಾರಿ ಪಲ್ಟಿ: ಐವರಿಗೆ ಗಾಯ

Vishwanath S
Updated On : 10 Oct 2013, 11:08 am

ಮಂಗಳೂರು: ಕೋಣಗಳನ್ನು ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಬಜರಂಗದಳ ಕಾರ್ಯಕರ್ತರಿಂದ ತಪ್ಪಿಸಿಕೊಳ್ಳುವ ವೇಳೆ ಅಪಘಾತವಾಗಿ ಐದು ಮಂದಿ ಗಾಯ ಗೊಂಡಿದ್ದಾರೆ. ಅಪಘಾತಗೊಂಡ ವಾಹನದಿಂದ ಹೊರಬರುತ್ತಿದ್ದವರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ.
 ಬುಧವಾರ ಬೆಳಗ್ಗೆ 7.30ಕ್ಕೆ ಕೋಣಗಳ ಸಾಗಾಟ ಮಾಡುತ್ತಿದ್ದ ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ಕುಡುಪು ಬಳಿ ಬೈಕ್‌ನಲ್ಲಿ ಅಡ್ಡ ಹಾಕಿದರು. ಆದರೆ ಲಾರಿ ಚಾಲಕ ಇದನ್ನು ಲೆಕ್ಕಿಸದೆ ಬೈಕಿಗೆ ಡಿಕ್ಕಿ ಹೊಡೆದು ಮುಂದಕ್ಕೆ ಸಾಗಿದ್ದಾನೆ. ಇದನ್ನು ನೋಡಿದ ಸ್ಥಳೀಯರು, ಕಾರ್ಯಕರ್ತರು ಲಾರಿ ಚಾಲಕನನ್ನು ವಾಹನಗಳ ಮೂಲಕ ಬೆನ್ನಟ್ಟಿದ್ದಾರೆ. ಬೆದರಿದ ಚಾಲಕ ಕುಡುಪು ಕಟ್ಟೆ ಕುಂಭಶ್ರೀ ಕಲ್ಯಾಣ ಮಂಟಪ ಬಳಿ ಹತೋಟಿ ತಪ್ಪಿ ಲಾರಿ ಚರಂಡಿಗೆ ಇಳಿದು ಧರೆಗೆ ಡಿಕ್ಕಿ ಹೊಡೆದಿದೆ.
 ಲಾರಿಯೊಳಗೆ ಇದ್ದ ಕೋಣಗಳ ಜತೆ ಮೂರು ಮಂದಿ, ಸ್ಥಳೀಯರ ಕೈಗೆ ಸಿಕ್ಕಿದ್ದಾರೆ. ಗಾಯಗೊಂಡು ರಕ್ತ ಬರುತ್ತಿದ್ದರೂ ಲೆಕ್ಕಿಸದೆ ಮುಖ ಮೂತಿ ನೋಡದೆ ಬಾರಿಸಿದ್ದಾರೆ. ಪೊಲೀಸರಿಗೆ ಮಾಹಿತಿ ಸಿಕ್ಕಿ ಸ್ಥಳಕ್ಕೆ ಆಗಮಿಸಿದ್ದು, ಕೋಣ ಸಾಗಾಟ ಮಾಡುತ್ತಿದ್ದವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಎರಡು ಕೇಸ್: ವಾಹನದಲ್ಲಿದ್ದವರು ಮಂಗಳೂರಿನ ಸಮೀರ್, ಹನೀಫ್ ಅಬ್ದುಲ್ ರಹಿಮಾನ್. ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಣ ಸಾಗಾಟ ನಡೆಸಿದ ಐವರ ವಿರುದ್ಧ ಮತ್ತು ತಡೆದ ಬಜರಂಗದಳ ಕಾರ್ಯಕರ್ತರು, ಸ್ಥಳೀಯರ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಳಗ್ಗೆ 7.30ಕ್ಕೆ ಲಾರಿ ಅಪಘಾತ ಆದಾಗ ಮೂವರನ್ನು ಹೊರಗೆಳೆದು ಥಳಿಸಿ, ಪೊಲೀಸರ ಕೈಗೆ ಒಪ್ಪಿಸಿದ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹತ್ತು ಗಂಟೆಗೆ ಕ್ರೇನ್ ಸಹಾಯದಿಂದ ಲಾರಿಯನ್ನು ಎಳೆಯುತ್ತಿರುವ ಸಂದರ್ಭ ಲಾರಿಯ ಅಡಿಯಲ್ಲಿ ಗಾಯಗೊಂಡ ವ್ಯಕ್ತಿ ನರಳುತ್ತಿರುವ ದೃಶ್ಯ ಕಾಣ ಸಿಕ್ಕಿದೆ. ತಕ್ಷಣ ಆತನನ್ನು ರಿಕ್ಷಾದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಮ್ಮೆ ಕ್ರೇನ್ ಮೂಲಕ ಲಾರಿ ಎಳೆದಾಗ ಮತ್ತೊಬ್ಬ ಕಾಣ ಸಿಕ್ಕಿದ್ದಾನೆ. ಆತನನ್ನು ಇನ್ನೊಂದು ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ನೋವು ನುಂಗಿ ಅಡಗಿ ಕುಳಿತರು!: ಉದ್ರಿಕ್ತರ ಕೈಗೆ ಸಿಕ್ಕಿ ಏಟು ತಿನ್ನುವುದಕ್ಕಿಂತ ಲಾರಿ ಅಡಿಯಲ್ಲಿ ನೋವು ನುಂಗಿ ಬದುಕುವುದೇ ಲೇಸು ಎಂದು ಎರಡುವರೆ ಗಂಟೆ ಕಾಲ ಲಾರಿ ಕೆಳಗೆ ತುಟಿ ಪಿಟಿಕ್ ಎನ್ನದೆ ನೋವು ಸಹಿಸಿಕೊಂಡು ಕುಳಿತಿದ್ದರು. ಸುತ್ತಮುತ್ತಲೂ ಸ್ಥಳೀಯ ಉದ್ರಿಕ್ತ ಜನರು ಇದ್ದದ್ದು ಒಂದು ಕಾರಣವಾದರೆ ಮೈಮೇಲೆ ಗಾಯವಾಗಿದ್ದರಿಂದ ಎದ್ದು ಓಡಲೂ ತ್ರಾಣ ಇಲ್ಲವಾಗಿತ್ತು. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
5 ಕೋಣ ಕಾಣೆ: ಲಾರಿಯಲ್ಲಿ 19 ಕೋಣಗಳಿದ್ದವು. ಆದರೆ ಪೊಲೀಸರ ಲೆಕ್ಕಕ್ಕೆ ಸಿಕ್ಕಿದ್ದು 14 ಮಾತ್ರ. ಐದು ಕೋಣಗಳನ್ನು ಸ್ಥಳೀಯರೇ ಒಯ್ದಿರುವ ಸಂಶಯ ವ್ಯಕ್ತವಾಗಿದೆ. ಪೊಲೀಸರು ಮಾತ್ರ ಮೂಕ ಪ್ರೇಕ್ಷಕರಾಗಿದ್ದರು.
ಉತ್ತರ ಕರ್ನಾಟಕದಿಂದ ಗೋವುಗಳನ್ನು ತಂದು ಕೇರಳಕ್ಕೆ ಸಾಗಿಸಲಾಗುತ್ತಿತ್ತು. ಲಾರಿ ಉಡುಪಿ ನೋಂದಣಿ ಹೊಂದಿದೆ. ಲಾರಿ ಹೊರ ಭಾಗ ಬೈ ಹುಲ್ಲು, ಟ್ಯೂಬ್‌ಗಳಿಂದ ಮುಚ್ಚಿದ್ದು, ಕೋಣಗಳು ಕಾಣುತ್ತಿರಲಿಲ್ಲ.
 ಮನೆ ಮಂದಿಗೆ ತಳವಾರ್ ತೋರಿಸಿ ಕೊಟ್ಟಿಗೆಗೆ ನುಗ್ಗಿ ಕಳವು ಮಾಡುವ ಖದೀಮರು ಹಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಕೂಡಾ ಅಕ್ರಮ ಗೋಸಾಗಾಟ ಮಾಡುವಾಗ ಸಿಕ್ಕವರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸುತ್ತಿದ್ದಾರೆ.
ಪೊಲೀಸ್, ಸರ್ಕಾರ, ಬಜರಂಗದಳ!: ಅನೇಕ ವರ್ಷಗಳಿಂದ ಅಕ್ರಮ ಗೋಸಾಗಾಟ ಎಗ್ಗಿಲ್ಲದೆ ನಡೆಯುತ್ತಿದೆ. ಈಗೀಗ ಮನೆ, ಕೊಟ್ಟಿಗೆಗೆ ನುಗ್ಗಿ ದನ, ಕರುಗಳನ್ನು ಕದ್ದೊಯ್ಯುತ್ತಿದ್ದಾರೆ. ಸರ್ಕಾರ ನೀತಿ, ಪೊಲೀಸರ ಪಕ್ಷಪಾತ, ಬಜರಂಗದಳದ ದಾಳಿಗಳಿಂದ ಗೋ ಸಾಕುವವರು ಮಾತ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
 ಅಕ್ರಮ ಗೋಸಾಗಾಟ ತಡೆಯಲು ಪೊಲೀಸರಿಗೂ ಸಾಧ್ಯವಿದೆ. ಗಡಿ ಪ್ರದೇಶದಲ್ಲಿ ಬಂದೋ ಬಸ್ತ್ ಮಾಡಿದರೆ ಅಕ್ರಮ ಸಾಗಾಟಗಾರರು ಸಿಕ್ಕಿ ಬೀಳುವುದು ಖಚಿತ. ಆದರೆ ಆಡಳಿತ ಪಕ್ಷದ ಜನಪ್ರತಿನಿಧಿಗಳು ಕೋಣ ಸಾಗಾಟಕ್ಕೆ ನಿರ್ಬಂಧಿಸದಂತೆ ತಾಕೀತು ಮಾಡಿದ್ದಾರೆ. ಕೇರಳಕ್ಕೆ ಸಾಗುವ ತಲಪಾಡಿ ಚೆಕ್‌ಪೋಸ್ಟ್‌ನಲ್ಲಿ ಇಂಥ ಹತ್ತಾರು ಲಾರಿಗಳು ಪ್ರತಿನಿತ್ಯ ಲಂಚ ನೀಡಿ ಹೋಗುತ್ತಿದ್ದಾರೆ. ಪೊಲೀಸರು ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಆಡಳಿತದಲ್ಲಿ ಹೆಚ್ಚೇನು ಸುದ್ದಿ ಮಾಡದ ಬಜರಂಗದಳ ಕಾರ್ಯಕರ್ತರು ಕಾಂಗ್ರೆಸ್ ಆಡಳಿತದಲ್ಲಿ ಅಕ್ರಮ ಗೋಸಾಗಾಟ ವಿರುದ್ಧ ಸಿಡಿದು ನಿಂತಿದ್ದಾರೆ!
ತೊರೆಗೆ ಬಿದ್ದ ಬಸ್: 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ
ಬಂಟ್ವಾಳ: ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದಾಗಿ ಖಾಸಗಿ ಬಸ್ಸೊಂದು ಕಿರು ತೊರೆಗೆ ಉರುಳಿ ಬಿದ್ದು 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡ ಘಟನೆ ಸಿದ್ದಕಟ್ಟೆ ಬಳಿಯ ಕುದ್ಕೋಳಿ ಎಂಬಲ್ಲಿ ಬುಧವಾರ ನಡೆದಿದೆ. ಗಾಯಾಳುಗಳನ್ನು ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನೆ ವಿವರ: ಬಿ.ಸಿ.ರೋಡ್‌ನಿಂದ ಮೂಡುಬಿದಿರೆ, ಕಾರ್ಕಳಕ್ಕೆ ತೆರಳುವ ಮಹಾಗಣೇಶ್ ಎಂಬ ಖಾಸಗಿ ಬಸ್ಸು ಕುದ್ಕೋಳಿ ಕಿರು ಸೇತುವೆ ಸಮೀಪಿಸುತ್ತಿದ್ದಂತೆ ಇಳಿಜಾರು ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿತು. ರಸ್ತೆಯಲ್ಲಿಯೇ ಎರಡು ಸುತ್ತು ತಿರುಗಿದ ಬಸ್ಸು ಬಲಭಾಗದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಸೇತುವೆ ತಡೆಬೇಲಿ ಮುರಿದು ಕೆಳಗೆ ಉರುಳಿ ಬಿತ್ತು.
ಘಟನೆಯ ತೀವ್ರತೆಗೆ ಬಸ್ಸು ಸಂಪೂರ್ಣ ನಜ್ಜುಗುಜ್ಜಾಗಿದೆ. ವಿದ್ಯುತ್ ಕಂಬ ಬುಡ ಸಮೇತ ಕಿತ್ತು ಬಂದಿದೆ. ಮೂಡುಬಿದಿರೆ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಗೇರು ಬೀಜ ಫ್ಯಾಕ್ಟರಿಗೆ ತೆರಳುವ ಯುವತಿಯರು, ಉದ್ಯೋಗಕ್ಕೆ ತೆರಳುವವರು ಸೇರಿದಂತೆ ಹಲವು ಮಂದಿ ಪ್ರಯಾಣಿಕರು ಬಸ್ಸಲ್ಲಿದ್ದರು. ಗಂಭೀರ ಗಾಯಗೊಂಡಿದ್ದ ಪ್ರಯಾಣಿಕರನ್ನು ಸ್ಥಳದಲ್ಲಿದ್ದ ರಿಕ್ಷಾ ಚಾಲಕರು ಸೇರಿದಂತೆ ಸಾರ್ವನಿಕರು ಸ್ಥಳೀಯ ಆಸ್ಪತ್ರೆಗಳಿಗೆ ಸಾಗಿಸಲು ನೆರವಾದರು. ಬಂಟ್ವಾಳ ಗ್ರಾಮಾಂತರ ಎಸ್ಸೈ ನಾಗರಾಜ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ. ಈ ದುರ್ಘಟನೆಗೆ ಚಾಲಕನ ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಸ್ಸು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯುತ್ತಿದ್ದಂತೆ ಚಾಲಕ ಹೊರಕ್ಕೆ ಜಿಗಿದಿದ್ದಾನೆ.
ಸ್ವಲ್ಪದರಲ್ಲೇ ತಪ್ಪಿತು ಭಾರಿ ಅಪಾಯ: ಬಸ್ಸು ಉರುಳಿ ಬಿದ್ದ ತೊರೆಯಲ್ಲಿ ನೀರು ಹರಿಯುತ್ತಿತ್ತು. ಆದರೆ ಮಳೆ ಪ್ರಮಾಣ ಕಡಿಮೆ ಇದ್ದ ಕಾರಣ ನೀರಿನ ಹರಿವು ಕಡಿಮೆ ಇದ್ದು ಹೆಚ್ಚಿನ ಅಪಾಯ ತಪ್ಪಿದೆ. ವಿದ್ಯುತ್ ಕಂಬ ಬುಡಸಮೇತ ಕಿತ್ತು ಬಂದಿದ್ದರೂ ತಕ್ಷಣ ವಿದ್ಯುತ್ ಸಂಪರ್ಕ ಕಡಿತಕೊಂಡು ಭಾರಿ ಅನಾಹುತ ತಪ್ಪಿದೆ. ಅಪಘಾತದಲ್ಲಿ ಗಾಯಗೊಂಡಿರುವ ಬಸ್ ಪ್ರಯಾಣಿಕ ಕೊಯಿಲ ಮಾವಂತೂರು ನಿವಾಸಿ ಶ್ರೀಧರ ಗೌಡ ನೀಡಿದ ದೂರಿನಂತೆ ಬಸ್ ಚಾಲಕನ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರ ಅಕ್ರಮ ಸಾಗಾಟ: ವಶ
ಪುತ್ತೂರು: ಮರ ಅಕ್ರಮ ಸಾಗಾಟ ಪ್ರಕರಣ ಪತ್ತೆ ಹಚ್ಚಿದ ಅರಣ್ಯ ಇಲಾಖೆ ಅಧಿಕಾರಿಗಳು, ಲಾರಿ ಸಹಿತ ಸುಮಾರು ರು. 3 ಲಕ್ಷ ಮೌಲ್ಯದ ಸೊತ್ತುಗಳನ್ನು ಮಂಗಳವಾರ ರಾತ್ರಿ ವಶಕ್ಕೆ ಪಡೆದುಕೊಂಡಿದ್ದಾರೆ, ಆರೋಪಿಗಳು ಪರಾರಿಯಾಗಿದ್ದಾರೆ. ಸುಳ್ಯ ತಾಲೂಕಿನ ಅಮರ ಪಡ್ನೂರು ಗ್ರಾಮದ ಗಣಿಪ್ಪಿಲ ಎಂಬಲ್ಲಿ ಅಕ್ರಮವಾಗಿ ಬೀಟೆ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಅಧಿಕಾರಿಗಳು ಟಾಟಾ 407 ಲಾರಿ, ಮರದ ದಿಮ್ಮಿ ಹಾಗೂ ಮರ ಕೊಯ್ಯುವ ಯಂತ್ರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪುತ್ತೂರು ವಲಯ ಅರಣ್ಯ ಅಧಿಕಾರಿ ಪಿ. ಶ್ರೀಧರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜಾಲ್ಸೂರು ಶಾಖೆ ಉಪವಲಯ ಅರಣ್ಯ ಅಧಿಕಾರಿ ಲೋಕೇಶ್ ಎಸ್.ಎನ್., ಅರಣ್ಯ ರಕ್ಷಕರಾದ ವೆಂಕಟೇಶ್, ರಾಮಚಂದ್ರ, ರಂಗಸ್ವಾಮಿ, ಜಗದೀಶ, ಅಶೋಕ, ರಾಮಯ್ಯ ಭಾಗವಹಿಸಿದ್ದರು. ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಓ.ಪಾಲಯ್ಯ ಹಾಗೂ ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾದಿಕಾರಿ ಅಬ್ಬಾಸ್ ಎ.ಎಸ್ ಮಾರ್ಗದರ್ಶನದಲ್ಲಿ ಪುತ್ತೂರು ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ್ ತನಿಖೆ ಕೈಗೊಂಡಿದ್ದಾರೆ.
ಶ್ರೀಗಂಧ ತುಂಡು ಸಾಗಾಟ: ಮೂರು ಮಂದಿ ಬಂಧನ
ಪುತ್ತೂರು: ಶ್ರೀಗಂಧ ತುಂಡುಗಳ ಅಕ್ರಮ ಸಾಗಾಟ ಪ್ರಕರಣವನ್ನು ಮಂಗಳವಾರ ರಾತ್ರಿ ಪತ್ತೆ ಹಚ್ಚಿದ ಪೊಲೀಸರು, ಸುಮಾರು ರು. 1 ಲಕ್ಷ ಮೌಲ್ಯದ ಗಂಧದ ತುಂಡು ಸಹಿತ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೂಡಿಗೆರೆಯ ಅಬ್ದುಲ್ ರಹಿಮಾನ್, ಬೆಳ್ತಂಗಡಿಯ ಈಸುಬು ಮತ್ತು ಮಂಗಳೂರು ಕೃಷ್ಣಾಪುರದ ಜುನೈದ್ ಬಂಧಿತರು. ಖಚಿತ ವರ್ತಮಾನದ ಮೇರೆಗೆ ಅರಣ್ಯ ಪೊಲೀಸ್ ತಂಡ ಮತ್ತು ನಗರ ಪೊಲೀಸರು ಕಾರ್ಯಾಚರಣೆ ನಡೆಸಿದ ವೇಳೆ ಆರೋಪಿಗಳು ಇಲ್ಲಿನ ಬೊಳುವಾರು ಬೈಪಾಸ್‌ನಲ್ಲಿ ಮಾಲು ಸಮೇತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕಾರ್ಯಾಚರಣೆಯಲ್ಲಿ ಅರಣ್ಯ ಪೊಲೀಸ್ ಎಸ್‌ಐ ಉಮೇಶ್ ಉಪ್ಪಳಿಗೆ ಮತ್ತು ನಗರ ಠಾಣೆಯ ಎಸ್‌ಐ ರಫೀಕ್, ಸಿಬ್ಬಂದಿಗಳಾದ ರಾಧಾಕೃಷ್ಣ, ಉದಯ, ನಾರಾಯಣ ಮತ್ತಿತರರು ಪಾಲ್ಗೊಂಡಿದ್ದರು.
ಕಟೀಲು ದೇವಳದಲ್ಲಿ ಇಂದಿನ ಸಾಂಸ್ಕೃತಿಕ ವೈವಿಧ್ಯ
ಮೂಲ್ಕಿ: ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ನವರಾತ್ರಿ ಅಂಗವಾಗಿ ಅ.10 ರಂದು ಬೆಳಗ್ಗೆ ಬಜಪೆಯ ಶಾಂತಿ ಕಲಾ ಕೇಂದ್ರದಿಂದ ಭಜನಾ ಕಾರ್ಯಕ್ರಮ, ಸಂಜೆ ಬಾನ್ಸುರಿ ಕಟೀಲು ತಂಡದಿಂದ ಭಕ್ತಿ ಗಾಯನ, ಸಂಜೆಯಿಂದ ರಾತ್ರಿವರೆಗೆ ಅತಿಥಿ ಕಲಾವಿದರಿಂದ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಡಲಿದೆ. ಮೂಲ್ಕಿಯ ಬಪ್ಪನಾಡಿನ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಇಂದು ಬೆಳಗ್ಗೆ ಚಂಡಿಕಾಯಾಗ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ನೃತ್ಯ ರೂಪಕ ನಡೆಯಲಿದೆ.
ಇಂದು ಪುತ್ತೂರು ದೇವಸ್ಥಾನದಲ್ಲಿ ಕುಂಕುಮ ಜಪ
ಪುತ್ತೂರು: ಸಂಪ್ಯ ಸಮೀಪದ ಉದಯಗಿರಿ ಎಂಬಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಲಾದ ಅನ್ನಪೂರ್ಣೇಶ್ವರಿ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮ ಪೂರ್ಣಗೊಂಡಿದ್ದು, ದೇವಸ್ಥಾನ ನಿರ್ಮಾಣದ ಹಿನ್ನಲೆಯಲ್ಲಿ ಅ.10ರಂದು ಕುಂಕುಮ ಜಪ ಕಾರ್ಯಕ್ರಮದ ಹಮ್ಮಿಕೊಳ್ಳಲಾಗಿದೆ. ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ದೇವಸ್ಥಾನ ನಿಮರಾಣ ಸಮಿತಿಯ ಸಂಚಾಲಕ ಪ್ರೀತಂ ಪುತ್ತೂರಾಯ ತಿಳಿಸಿದ್ದಾರೆ.
ಇಂದಿನಿಂದ ಶಾರದಾ ಮಹೋತ್ಸವ
ಮೂಲ್ಕಿ: ಇಲ್ಲಿನ ಹಿಂದೂ ಯುವ ಸೇನೆ ಘಟಕದ ಆಶ್ರಯದಲ್ಲಿ 15ನೇ ವರ್ಷದ ಸಾರ್ವಜನಿಕ ಶ್ರೀ ಶಾರದ ಮಹೋತ್ಸವವು 10ರಿಂದ 12ರವರೆಗೆ ಮೂಲ್ಕಿಯ ಪುನರೂರು ಕಾಂಪ್ಲೆಕ್ಸ್ ಬಳಿಯ ಶಿವಾಜಿ ಮಂಟಪದಲ್ಲಿ ಜರಗಲಿದೆ.  ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ ಆಶೀರ್ವಚನ ನೀಡಲಿದ್ದು, ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಂದ್ರಶೇಖರ ಸುವರ್ಣ ಮತ್ತು ಉದ್ಯಮಿ ಪ್ರಕಾಶ್ ಶೆಣೈಯವರನ್ನು ಸನ್ಮಾನಿಸಲಾಗುವುದು.
ಮಂಗಳೂರು: ಇಂದು 'ಫೆಸ್ಟ್ ಮೆಗ್ಮಾ-13'
ಮಂಗಳೂರು: ನಗರದ ಪಾಂಡೇಶ್ವರದ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ರಾಷ್ಟ್ರ ಮಟ್ಟದ ಅಂತರ್ ಕಾಲೇಜು ಸ್ನಾತಕೋತ್ತರ ಮೆನೇಜ್‌ಮೆಂಟ್ 'ಫೆಸ್ಟ್ ಮೆಗ್ಮಾ-2013' ಅ.10ರಂದು ನಡೆಯಲಿದೆ ಎಂದು ಕಾಲೇಜು ಪ್ರಾಂಶುಪಾಲ ಡಾ.ಪಿ.ಎಸ್.ಐತಾಳ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿಂದಿ ಪ್ರಚಾರ ಸಭಾದಲ್ಲಿ ದುರ್ಗಾ ಪೂಜೆ
ಮಂಗಳೂರು: ನಗರದ ಲಾಲ್‌ಬಾಗ್‌ನ ಹಿಂದಿ ಪ್ರಚಾರ ಭವನದಲ್ಲಿ ಆಚರಿಸುವ ದುರ್ಗಾ ಪೂಜಾ ಅ.10ರಿಂದ 14ರ ವರೆಗೆ ನಡೆಯಲಿದೆ. 10ರಂದು ಸಂಜೆ 6.30ಕ್ಕೆ ಜಿಲ್ಲಾಧಿಕಾರಿ ಪ್ರಕಾಶ್ ದುರ್ಗಾ ಪೂಜೆ ಉದ್ಘಾಟಿಸುವರು. ಪ್ರತಿದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 14ರಂದು ಸಂಜೆ 6ರಿಂದ ನಗರದಲ್ಲಿ ಶೋಭಾ ಯಾತ್ರೆ ನಡೆಯಲಿದೆ ಎಂದು ಪ್ರ.ಕಾರ್ಯದರ್ಶಿ ಅಶಿಸ್ ಕುಮಾರ್ ರಾಯ್ ತಿಳಿಸಿದ್ದಾರೆ.
ನಾಟೆಕಲ್: ಕೆರೆಗೆ ಬಿದ್ದು ಬಾಲಕ ಸಾವು
ಮಂಗಳೂರು: ಕೊಣಾಜೆ ನಾಟೆಕಲ್ ಉರುಮನೆ ಬಳಿ ಕೆರೆಗೆ ಬಿದ್ದು ಸುಫೈಲ್ (13) ಮೃತಪಟ್ಟಿದ್ದಾನೆ.  ಶಾಲೆಗೆ ಮಧ್ಯಂತರ ರಜೆ ಸಿಕ್ಕಿದ ಹಿನ್ನೆಲೆಯಲ್ಲಿ ಐವರು ಮಕ್ಕಳು ಬುಧವಾರ ಬೆಳಗ್ಗೆ ಕೆರೆ ಬಳಿ ಆಟವಾಡಲು ತೆರಳಿದ್ದಾರೆ. ಸುಫೈಲ್ ಹಗ್ಗದಲ್ಲಿ ಆಟವಾಡುತ್ತಿರುವಾಗ ಹಗ್ಗ ತುಂಡಾಗಿ ಕೆರೆಗೆ ಬಿದ್ದಿದ್ದಾನೆ. ಬಿದ್ದಾಗ ಕೆರೆಯಲ್ಲಿದ್ದ ಕಲ್ಲು ತಲೆಗೆ ಏಟಾಗಿದೆ. ಇದನ್ನು ನೋಡಿ ಹೆದರಿದ ಉಳಿದ ಮಕ್ಕಳು ಮನೆಗೆ ಓಡಿದ್ದಾರೆ. ಮನೆಯವರಲ್ಲಿ ಯಾರೂ ವಿಚಾರ ತಿಳಿಸಿಲ್ಲ. ಸಂಜೆಯಾದರೂ ಮಗ ಏಕೆ ಬಂದಿಲ್ಲ ಎಂದು ಹೆತ್ತವರು ಹುಡುಕಾಡಿದ್ದಾರೆ. ಜತೆಯಲ್ಲಿ ತೆರಳಿದ ಮಕ್ಕಳನ್ನು ಪ್ರಶ್ನಿಸಿದ್ದಾರೆ. ಬಳಿಕ ಪೊಲೀಸರ ಸಹಕಾರದಿಂದ ಮಕ್ಕಳು ಬಾಲಕ ಬಿದ್ದು ಸತ್ತಿರುವ ವಿಚಾರ ತಿಳಿಸಿದ್ದಾರೆ.
ಸುರತ್ಕಲ್: ಮನೆಗೆ ನುಗ್ಗಿ ಮಹಿಳೆಗೆ ಹಲ್ಲೆ !
ಮಂಗಳೂರು: ಸುರತ್ಕಲ್ ಕುಳಾಯಿ ವಿಷ್ಣುಮೂರ್ತಿ ದೇವಸ್ಥಾನ ಬಳಿ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿ ಮಹಿಳೆಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ರಾತ್ರಿ 8ಗಂಟೆ ಸುಮಾರಿಗೆ  ವ್ಯಕ್ತಿಯೊಬ್ಬ ಮನೆಗೆ ನುಗ್ಗಿದ್ದು, ಮಹಿಳೆ ಪ್ರತಿ ರೋಧಿಸಿದ್ದಾಳೆ. ಆಯುಧದಿಂದ ಕೈಗೆ ಹೊಡೆದ ಕಳ್ಳ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಯಾವುದೇ ಸೊತ್ತು ಕಳವಾಗಿಲ್ಲ. ಕಳವಿಗೆ ಯತ್ನ ನಡೆಸಿದ್ದಾನೊ ಅಥವಾ ಇನ್ಯಾವುದೋ ದ್ವೇಷಕ್ಕೆ ಹಲ್ಲೆ ನಡೆಸಿದ್ದಾನೊ ಎಂಬ ಬಗ್ಗೆ ಸುರತ್ಕಲ್‌ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement