ನೇತ್ರಾವತಿ ತಿರುವು ಯೋಜನೆಗೆ ಕಾಂಗ್ರೆಸ್ ಶಾಸಕ ವಿರೋಧ
ಬೆಳ್ತಂಗಡಿ: ಕರಾವಳಿ ಜಿಲ್ಲೆಯ ಜನತೆಗೆ ಬರಡು ಭೂಮಿ ನೀಡಿ ನೇತ್ರಾವತಿ ನದಿ ತಿರುವು ಯೋಜನೆ ಅನುಷ್ಠಾನ ಮಾಡಿದರೆ ಆಡಳಿತ ಪಕ್ಷದ ಶಾಸಕನಾಗಿದ್ದರೂ ಪ್ರತಿಭಟಿಸುವುದರಲ್ಲಿ ಹಿಂದೇಟು ಹಾಕುವುದಿಲ್ಲ ಎಂದು ಬೆಳ್ತಂಗಡಿ ಶಾಸಕ ವಸಂತ ಬಂಗೇರ ಘೋಷಿಸಿದ್ದಾರೆ. ಬುಧವಾರ ಉಪ್ಪಿನಂಗಡಿಯ ನಾಡ ಕಚೇರಿ ಬಳಿ, ನೇತ್ರಾವತಿ ನದಿ ತಿರುವು ಯೋಜನೆಯ ವಿರೋಧಿ ಹೋರಾಟ ಸಮಿತಿಯ ಆಶ್ರಯದಲ್ಲಿ ನಡೆದ ಯೋಜನೆಯ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಕರಾವಳಿ ಜಿಲ್ಲೆಯಲ್ಲಿ ಸತತ ಮಳೆಯಾಗುತ್ತದೆ ಎಂದು ನೇತ್ರಾವತಿ ನದಿ ತಿರುಗಿಸುವುದರಲ್ಲಿ ಅರ್ಥವಿಲ್ಲ. ನದಿ ನೀರು ಸಮುದ್ರ ಸೇರುವ ಬಗ್ಗೆ ನೀರು ಪೋಲಾಗುವ ಧ್ವನಿ ಅರ್ಥಹೀನ. ಮೀನುಗಾರಿಕೆಗೆ ಪೂರಕವಾಗಿ ಸಮುದ್ರಕ್ಕೂ ನೀರು ಸೇರಬೇಕಾದ ಅಗತ್ಯ ಇದೆ ಎಂದು ಬಂಗೇರ ಪ್ರತಿಪಾದಿಸಿದರು. ಜಿಲ್ಲೆಯ ಧಾರಣಾ ಸಾಮರ್ಥ್ಯ ಅಧ್ಯಯನ ಮಾಡದೆ ಯೋಜನೆಗಳನ್ನು ಅನುಷ್ಠಾನಿಸ ಹೊರಟರೆ ಜಿಲ್ಲೆಯ ಜನತೆಯನ್ನು ಬಲಿಕೊಟ್ಟ ಸ್ಥಿತಿ ಉದ್ಬವಿಸುತ್ತದೆ. ನದಿ ತಿರುವು ಯೋಜನೆಯಾಗಲಿ, ನಿಡ್ದೋಡಿ ಉಷ್ಣ ವಿದ್ಯುತ್ ಯೋಜನೆಯಾಗಲಿ ಜಿಲ್ಲೆಯ ಜನತೆಗೆ ಪೂರಕವಾದ ಯೋಜನೆಗಳಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಜನತೆ ಭಾವಶೂನ್ಯ: ಹಾಸನದ ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎ. ಕಿಶೋರ್ ಕುಮಾರ್ ಮಾತನಾಡಿ, ಇಡೀ ಕರಾವಳಿ ಜಿಲ್ಲೆಗೆ ಸಂಚಕಾರ ಮೂಡಿಸುವ ನದಿ ತಿರುವು ಯೋಜನೆ ಬಗ್ಗೆ ಇದೀಗ ಅಲ್ಲಲ್ಲಿ ಸಣ್ಣಪುಟ್ಟ ಪ್ರತಿಭಟನೆಯ ಕೂಗು ಕೇಳಿಸಿಕೊಳ್ಳುತ್ತಿರುವುದು ನಿರಾಸೆ ಮಧ್ಯೆ ವಿಶ್ವಾಸ ಮೂಡಿಸಿದೆ ಎಂದು ತಿಳಿಸಿದರು.