ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪ್ರತಿ ಜಿಲ್ಲೆಯಲ್ಲಿ 'ಪರಿಶೀಲನಾ ಸಭೆ'

Vishwanath S
Updated On : 10 Oct 2013, 11:11 am

ಮಂಗಳೂರು: ಮಹಿಳೆಯರು, ಮಕ್ಕಳು, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಕುಂದುಕೊರತೆ ಆಲಿಸಲು, ಇಲಾಖೆಗಳು ಕೈಗೊಂಡಿರುವ ಕ್ರಮ ಪರಿಶೀಲಿಸಲು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಪ್ರತಿ ಜಿಲ್ಲೆಗೆ ಭೇಟಿ ನೀಡಿ 'ಪರಿಶೀಲನಾ ಸಭೆ' ನಡೆಸಲಿದೆ ಎಂದು ಸಮಿತಿ ಅಧ್ಯಕ್ಷೆ, ಶಾಸಕಿ ಶಕುಂತಳಾ ಶೆಟ್ಟಿ ಹೇಳಿದ್ದಾರೆ.
 ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿರುವ ಕಾರ್ಯಕ್ರಮ, ಯೋಜನೆಗಳು ರಾಜ್ಯದ ಉದ್ದಗಲಕ್ಕೂ ತಳಮಟ್ಟದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಂಡಿದೆಯೇ ಹಾಗೂ ಅನುಷ್ಠಾನಗೊಳ್ಳುತ್ತಿದೆಯೇ ಎಂಬುದನ್ನು ಪರಿಶೀಲಿಸಲಿದೆ. ಮಹಿಳೆಯರ ಮೇಲೆ ನಡೆದ ವಿವಿಧ ರೂಪದ ದೌರ್ಜನ್ಯಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಕೈಗೊಂಡ ಕ್ರಮಗಳನ್ನು ಅಧಿಕಾರಿ ಹಾಗೂ ಸಿಬ್ಬಂದಿಗಳ ಸಮಕ್ಷಮ ಪರಿಶೀಲಿಸಲಿದೆ. ಇದಕ್ಕಾಗಿ ಎಲ್ಲ ಜಿಲ್ಲೆಗಳನ್ನು ವಿಭಾಗವಾರು ವಿಂಗಡಿಸಿ ಪ್ರತಿ ವಿಭಾಗಕ್ಕೂ ಕನಿಷ್ಠ ಒಂದು ತಿಂಗಳ ಮುಂಚೆ ಸಮಿತಿಯ ಪ್ರಶ್ನೋತ್ತರ ರವಾನಿಸಲಾಗುತ್ತದೆ ಎಂದರು.
 ಮೊದಲ ಹಂತದಲ್ಲಿ ಬೆಳಗಾವಿಗೆ ಭೇಟಿ ನೀಡಿ ಸುವರ್ಣ ವಿಧಾನಸೌಧದಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಾಪುರ, ಧಾರವಾಡ ಮತ್ತು ಗದಗ ಜಿಲ್ಲೆಗಳ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ಸಮಕ್ಷಮ ಪರಿಶೀಲನಾ ಸಭೆ ನಡೆಸಲಾಗಿದೆ. ಈ ಸಭೆಯ ಪರಿಣಾಮ ಮಹಿಳಾ, ಮಕ್ಕಳ ಮೇಲಿನ ಪ್ರಕರಣಗಳ ಕುಂದುಕೊರತೆ ಇತ್ಯರ್ಥಕ್ಕೆ ಸರ್ಕಾರ ತ್ವರಿತಗತಿ ಕೋರ್ಟ್ ಸ್ಥಾಪಿಸುತ್ತಿದೆ ಎಂದರು.
ಇಂದು ಮಂಗಳೂರಲ್ಲಿ 5 ಜಿಲ್ಲೆಗಳ ಸಭೆ: ಮಂಗಳೂರಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ದ.ಕ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ ಪರಿಶೀಲನಾ ಸಭೆ ಅ. 10ರಂದು ನಡೆಸಲಾಗುವುದು. ಇದರಲ್ಲಿ ಗೃಹ, ಅಬಕಾರಿ, ಕಂದಾಯ, ಆರೋಗ್ಯ, ಶಿಕ್ಷಣ ಹಾಗೂ ಕಾರ್ಮಿಕ ಇಲಾಖೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳುವರು. ದೌರ್ಜನ್ಯಕ್ಕೆ, ಅನ್ಯಾಯಕ್ಕೆ ಒಳಗಾಗಿ ನ್ಯಾಯಕ್ಕಾಗಿ ಎಲ್ಲ ವ್ಯವಸ್ಥೆ, ಪ್ರಾಧಿಕಾರಗಳಲ್ಲಿ ಪ್ರಯತ್ನಿಸಿ ವಿಫಲವಾದ ಮಹಿಳೆಯರು, ಅವರ ಪ್ರತಿನಿಧಿಗಳು, ಸಂಘ ಸಂಸ್ಥೆಗಳು ಕೂಡ ಸಮಿತಿಯನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಲು ಅವಕಾಶವಿದೆ ಎಂದು ಹೇಳಿದರು.
 ಬೆಳ್ತಂಗಡಿ ಸೌಜನ್ಯ ಕೊಲೆ ಪ್ರಕರಣ ಬಗ್ಗೆ ವಿಧಾನಸಭೆಯಲ್ಲಿ ತಾನು ಹಾಗೂ ಬೆಳ್ತಂಗಡಿ ಶಾಸಕರು ವಿಷಯ ಪ್ರಸ್ತಾಪಿಸಿದ್ದೇವೆ. ಆದರೆ ಈ ಸಮಿತಿಗೆ ಯಾವುದೇ ದೂರು ಬಂದಿಲ್ಲ. ಸಮಿತಿಗೆ ಸ್ವತಂತ್ರ ಅಧಿಕಾರ ಇಲ್ಲದಿರುವುದರಿಂದ ಪ್ರಕರಣಗಳನ್ನು ಪರಿಶೀಲಿಸಿ ಕ್ರಮಕ್ಕೆ ಶಿಫಾರಸ್ಸು ಮಾಡಬಹುದೇ ವಿನಃ ಬೇರೆ ಅಧಿಕಾರ ಇಲ್ಲ. ಗುರುವಾರ ನಡೆಯುವ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಲಾಗುವುದು ಎಂದರು.
 ಸಮಿತಿ ಸದಸ್ಯ ಶಾಸಕರಾದ ಗಣೇಶ್ ಕಾರ್ಣಿಕ್, ಎಸ್.ಆರ್. ಲೀಲಾ, ಸೋಮಶೇಖರ, ರಾಮಕೃಷ್ಣ, ತಿಪ್ಪೇಸ್ವಾಮಿ, ಶಿವಣ್ಣ, ಅಶೋಕ್, ರಾಮಕ್ಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement