ಯುರೋಪ್ ಪ್ರಯಾಣವೆಂದು ನಂಬಿಸಿ ಕೋರ್ಟ್ ಮೆಟ್ಟಿಲೇರಿಸಿದ ಟ್ರಾವೆಲ್ ಏಜೆನ್ಸಿ
ಮೂಲ್ಕಿ: ಮಂಗಳೂರಿನಿಂದ ಯೂರೋಪ್ಗೆ ನಿಮ್ಮನ್ನು ಕರೆದೊಯ್ಯುತ್ತೇವೆ ಇಂತಿಷ್ಟು ಹಣ ಕಟ್ಟಿ ಎಂದು ಪ್ರವಾಸಿಗರಿಂದ ಲಕ್ಷಾಂತರ ರುಪಾಯಿ ಮುಂಗಡ ಪಡೆದು ಕೊನೆಗೆ ಪ್ರವಾಸಿಗರನ್ನೇ ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾದ ಲಯನ್ಸ್ ಕ್ಲಬ್ನ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಇತ್ತೀಚೆಗೆ ಯೂರೋಪ್ ದೇಶದ ಜರ್ಮನಿಯಲ್ಲಿ ಆಯೋಜಿಸಲಾಗಿತ್ತು. ಇದಕ್ಕಾಗಿ ಮೂಲ್ಕಿ ಲಯನ್ಸ್ ಕ್ಲಬ್ನ ಹಿರಿಯ ಸದಸ್ಯರಾದ ಹರೀಶ್ ಪುತ್ರನ್, ಪ್ರಬೋಧ ಕುಡ್ವಾ, ಸುರೇಶ್ ಬಂಗೇರ ಅವರು ಮಂಗಳೂರಿನಲ್ಲಿರುವ ಟ್ರಾವೆಲ್ ಏಜೆನ್ಸಿ ಸಂಪರ್ಕಿಸಿದ್ದರು.
ಯೂರೋಪ್ ಪ್ರವಾಸದ ಒಂದು ಟಿಕೇಟಿಗೆ ಎರಡು ಲಕ್ಷಕ್ಕೂ ಹೆಚ್ಚು ಎಂದು ಹೇಳಿ ಪ್ರವಾಸಿಗರಿಂದ ಮುಂಗಡವಾಗಿ 50 ಸಾವಿರವನ್ನು ವಸೂಲಿ ಮಾಡಿತ್ತಲ್ಲದೇ, ಐದು ತಿಂಗಳು ಮೊದಲೇ ನೀಡಬೇಕು ಎಂದು ಷರತ್ತು ವಿಧಿಸಿ ಹಣ ಪಡೆದಿತ್ತು. ಸುಮಾರು 44 ಮಂದಿ ಮುಂಗಡ ಹಣ ನೀಡಿ ಟಿಕೇಟ್ ಪಡೆದಿದ್ದರು.
ಇವರಲ್ಲಿ ಮೂಲ್ಕಿಯ ಮೂರು ಮಂದಿ ಮುಂಗಡವಾಗಿ 50 ಸಾವಿರ ನೀಡಿ ಪ್ರವಾಸಕ್ಕೆ ತಯಾರಿ ನಡೆಸಿದ್ದರು. ಆದರೆ ಸಮ್ಮೇಳನ ನಡೆದ ಸಂದರ್ಭದಲ್ಲಿ ಅವರಿಗೆ ಹೋಗಲು ಅಸಾಧ್ಯವಾದ್ದರಿಂದ ಪ್ರವಾಸವನ್ನು ಮೂರು ತಿಂಗಳು ಮೊದಲೇ ರದ್ದು ಪಡಿಸಿ ಮುಂಗಡವಾಗಿ ಕಟ್ಟಿದ ಹಣವನ್ನು ವಾಪಸ್ ನೀಡುವಂತೆ ಟ್ರಾವೆಲ್ ಏಜೆನ್ಸಿಯಲ್ಲಿ ವಿಚಾರಿಸಿದಾಗ ವಂಚನೆ ಬಯಲಿಗೆ ಬಂದಿದೆ. ಹಣ ನೀಡಲು ನಿರಾಕರಿಸಿದ್ದಲ್ಲದೆ ಹಣ ವಾಪಸ್ ಕೇಳಿದವರೊಂದಿಗೆ ಏಜೆನ್ಸಿಯ ಸಿಬ್ಬಂದಿ ಉಡಾಫೆಯಿಂದ ವರ್ತಿಸಿದರು ಎಂದು ಎಂದು ಪ್ರವಾಸ ರದ್ದು ಮಾಡಿರುವ ಹರೀಶ್ ಪುತ್ರನ್ ಆರೋಪಿಸಿದ್ದಾರೆ.
ಪ್ರವಾಸಿಗರಿಗೆ ಆಸೆ ಆಮೀಷಗಳನ್ನು ನೀಡುವ ಈ ಟ್ರಾವೆಲ್ ಏಜೆನ್ಸಿ ವಿರುದ್ಧ ಮೂಲ್ಕಿಯ ಮೂವರು ನ್ಯಾಯಾಲಯದ ಮೆಟ್ಟಿಲೇರಿದ್ದು ಏಜೆನ್ಸಿ ತಮ್ಮಿಂದ ಹಣ ಪಡೆದ ದಾಖಲೆಯ ಸಹಿತ ತಮ್ಮ ವಾದವನ್ನು ವಕೀಲರ ಮೂಲಕ ಸಲ್ಲಿಸಿದ್ದಾರೆ. ಮುಂಗಡ ಹಣ ವಾಪಸ್ ನೀಡುವುದರೊಂದಿಗೆ ತಮಗೆ ಮಾನಸಿಕ ಕಿರಿ ಕಿರಿ ನೀಡಿದ ಏಜೆನ್ಸಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.