ಸೌಜನ್ಯ ಪ್ರಕರಣ ಸಿಬಿಐಗೆ ಒಪ್ಪಿಸಿ
ಮಂಗಳೂರು: ಉಜಿರೆ ಕಾಲೇಜ್ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಕೊಲೆ ನಡೆದು ವರ್ಷ ಸಂದರೂ ನೈಜ ಆರೋಪಿಗಳ ಬಂಧನವಾಗಿಲ್ಲ. ಸತ್ಯಾಸತ್ಯತೆ ಬಯಲಿಗೆಳೆಯಲು ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಜನವಾದಿ ಮಹಿಳಾ ಸಂಘಟನೆ ಮತ್ತು ಡಿವೈಎಫ್‌ಐ, ಎಸ್‌ಎಫ್‌ಐ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಬುಧವಾರ ನಡೆಸಿದವು.
ಬೆಳ್ತಗಂಡಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಬೃಹತ್ ಜಾಥಾ ನಡೆಯಿತು. ಜನವಾದಿ ಸಂಘಟನೆ ರಾಷ್ಟ್ರೀಯ ಉಪಾಧ್ಯಕ್ಷೆ, ರಾಜ್ಯಸಭೆ ಸದಸ್ಯೆ ಟಿ.ಎನ್. ಸೀಮಾ ಮಾತನಾಡಿ, ಪೊಲೀಸರು ತನಿಖೆ ನಡೆಸದೆ ಮಾನಸಿಕ ಅಸ್ವಸ್ಥನನ್ನು ಆರೋಪಿ ಎಂದು ಘೋಷಿಸಿದರು. ಪ್ರಭಾವಿ ವ್ಯಕ್ತಿಗಳಿಂದಾಗಿ ಪೊಲೀಸರು ಸರಿಯಾದ ತನಿಖೆ ನಡೆಸಿಲ್ಲ. ರಾಜ್ಯದಲ್ಲಿ ವರ್ಷದಲ್ಲಿ 11 ಮಹಿಳಾ ದೌರ್ಜನ್ಯ ನಡೆದಿದೆ. ಇವುಗಳಲ್ಲಿ ಕೆಲವೇ ಕೆಲವು ಮಂದಿ ಆರೋಪಿಗಳ ಬಂಧನವಾಗಿದೆ. ಉಳಿದಂತೆ ಆರೋಪಿಗಳು ಪ್ರಭಾವ ಬಳಸಿ ರಾಜಾರೋಶವಾಗಿ ತಿರುಗಾಡುತ್ತಿದ್ದಾರೆ. ಸರ್ಕಾರಗಳು ಮಹಿಳೆಯರನ್ನು ಬರೀ ಬಾಯಿ ಮಾತಿನಲ್ಲಿ ರಕ್ಷಿಸುತ್ತಿವೆ ಎಂದರು.
ಹಲವಾರು ಕನಸು ಹೊತ್ತ 17 ವರ್ಷದ ಸೌಜನ್ಯಳನ್ನು ದುರುಳರು ಚಿವುಟಿ ಹಾಕಿದರು. ದಿಲ್ಲಿ ಪ್ರಕರಣ ಬಳಿಕ ಜನರು ಸಿಡಿದೆದ್ದು ದೇಶಾದ್ಯಂತ ಪ್ರತಿಭಟನೆ ನಡೆಸಿದರು. ಆದ್ದರಿಂದ ಬಂಧನ ಸಾಧ್ಯವಾಯಿತು. ಸೌಜನ್ಯ ಪ್ರಕರಣವನ್ನು ಪೊಲೀಸರು ಇನ್ನಾದರೂ ಗಂಭೀರವಾಗಿ ಪರಿಗಣಿಸದೆ ಇದ್ದರೆ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಎಂದರು.
ಕೇರಳ ಸಂಸದ ಕರುಣಾಕರನ್ ಮೂಲಕ ಮುಂದಿನ ಸಂಸತ್ ಅಧಿವೇಶನದಲ್ಲಿ ಸೌಜನ್ಯ ಪ್ರಕರಣ ಪ್ರಸ್ತಾಪಿಸಿ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿಗೂ ಸೌಜನ್ಯ ಅತ್ಯಾಚಾರ ಪ್ರಕರಣ ಬಗ್ಗೆ ತಿಳಿಸಲಾಗುವುದು. ನ್ಯಾಯ ಒದಗಿಸಿಕೊಡಲು ಒತ್ತಾಯಿಸಲಾಗುವುದು ಎಂದು ಪ್ರತಿಭಟನೆಕಾರರಿಗೆ ಭರವಸೆ ನೀಡಿದರು.
ಜನವಾದಿ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ.ಲೀಲಾ ಮಾತನಾಡಿ, ಮಂಗಳೂರಿಗೆ ಬಂದಾಗ ಉಳ್ಳಾಲದ ರಾಣಿ ಅಬ್ಬಕ್ಕನನ್ನು ಅತ್ಯಂತ ಹೆಮ್ಮೆಯಿಂದ ನೆನೆಯುತ್ತೇವೆ. ಇಂಥ ದಿಟ್ಟ ರಾಣಿಯ ಊರಲ್ಲಿ ಹೆಣ್ಣಿಗಾದ ಅನ್ಯಾಯದ ಬಗ್ಗೆ ಸೂಕ್ತ ತನಿಖೆ ನಡೆಸಲು ಹೋರಾಟ ನಡೆಸುವ ಪರಿಸ್ಥಿತಿ ಬಂದಿರುವುದು ಖೇದಕರ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಂಡಸರಿಗೆ ಹೋಲಿಸಿದರೆ ಮಹಿಳೆಯರ ಸಂಖ್ಯೆಯೇ ಹೆಚ್ಚು. ಆದ್ದರಿಂದ ಉತ್ತರಕರ್ನಾಟಕದವರಿಗೆ ಈ ಜಿಲ್ಲೆಗಳೆಂದರೆ ಗೌರವ ಭಾವನೆ ಇತ್ತು. ಆದರೆ ಇತ್ತೀಚೆಗೆ ನಡೆಯುವ ಇಂಥ ಘಟನೆಗಳು ಜಿಲ್ಲೆ ಜನತೆ ತಲೆ ತಗ್ಗಿಸುವಂತೆ ಮಾಡಿದೆ ಎಂದರು.
ಸೌಜನ್ಯ ತಾಯಿ ಕುಸುಮ ಮಾತನಾಡಿ, ಪರೀಕ್ಷೆ ಬರೆಯಲು ತೆರಳಿದ್ದ ನನ್ನ ಮಗಳನ್ನು ಅತ್ಯಾಚಾರ ಗೈದು ಕೊಲೆ ನಡೆಸಿದ ದುರುಳರನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಈ ಬಗ್ಗೆ ನಾವು ಎಷ್ಟು ಬಾರಿ ಪೊಲೀಸರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದರು.
ಸಮತಾ ವೇದಿಕೆ ಎನ್.ಪ್ರಭ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್‌ಕಾಟಿಪಳ್ಳ, ದಯಾನಂದ ಶೆಟ್ಟಿ, ಎಸ್‌ಎಫ್‌ಐ ರೇಣುಕಾ, ವಿಚಾರವಾದಿ ವೇದಿಕೆ ನರೇಂದ್ರ ನಾಯಕ್, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಮರ್ಲಿನ್, ಬಿ.ಎಂ.ಭಟ್, ಕೆ.ಎಸ್.ಲಕ್ಷ್ಮೀ, ಅತ್ರಾಡಿ ಅಮೃತಾ ಶೆಟ್ಟಿ, ಸೌಜನ್ಯ ಹೆತ್ತವರಾದ ಕುಸುಮ, ಚಂದಪ್ಪ ಗೌಡ ಇದ್ದರು.