ಅನೈತಿಕ ಚಟುವಟಿಕೆಗೆ ಬಂದ ಜೋಡಿ ಪರಾರಿ
ಮೂಲ್ಕಿ: ಇಲ್ಲಿನ ಪಡುಪಣಂಬೂರು ಗ್ರಾಮದ ಬೆಳ್ಳಾಯರು ಗ್ರಾಮದ ಹುಡ್ಕೋ ಕಾಲನಿಯ ಮನೆಯೊಂದರಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಜೋಡಿಯೊಂದು ಸಾರ್ವಜನಿಕರನ್ನು ನೋಡಿ ಪರಾರಿಯಾದ ಘಟನೆ ನಡೆದಿದೆ. ಇಲ್ಲಿನ ಹುಡ್ಕೋ ಕಾಲನಿಯಲ್ಲಿ ಹೆಚ್ಚಿನ ಮನೆಗಳಲ್ಲಿ ಜನರು ವಾಸಿಸುತ್ತಿರಲಿಲ್ಲ. ಇಂತಹ ಮನೆಯೊಂದನ್ನು ಆಯ್ದುಕೊಂಡ ಜೋಡಿಯೊಂದು ಮನೆಯ ಬೀಗ ಪಡೆದು ರಾತ್ರಿಯಾಗುತ್ತಿದ್ದಂತೆ ಇಲ್ಲಿ ಬಂದು ಠಿಕಾಣಿ ಹೂಡುತ್ತಿತ್ತು ಎನ್ನಲಾಗಿದೆ. ಬೈಕ್‌ನಲ್ಲಿ ಬರುತ್ತಿದ್ದ ಈ ಜೋಡಿ ಬಗ್ಗೆ ಸ್ಥಳಿಯರು ಶಂಕೆಗೊಂಡು ರೆಡ್ ಹ್ಯಾಂಡ್ ಆಗಿ ಹಿಡಿಯಲು ಕಾಯುತ್ತಿದ್ದರು. ಬುಧವಾರ ರಾತ್ರಿಯೂ ಈ ಜೋಡಿ ಮೆಲ್ಲನೆ ಖಾಲಿಯಿದ್ದ ಈ ಮನೆಗೆ ಪ್ರವೇಶಿಸುವ ಹಂತದಲ್ಲಿ ಸಾರ್ವಜನಿಕರು ತಮ್ಮನ್ನು ಕಾಯುತ್ತಿರುವುದು ಕೊನೆ ಕ್ಷಣದಲ್ಲಿ ತಿಳಿದು ಪರಾರಿಯಾಯಿತು ಎನ್ನಲಾಗಿದೆ. ಪೊಲೀಸರಿಗೆ ಈ ವಿಷಯವನ್ನು ಸಾರ್ವಜನಿಕರು ತಿಳಿಸಿದ್ದರೂ ಅವರು ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಮರ್ದಾಳ ದರ್ಗಾ ಕಾಣಿಕೆ ಡಬ್ಬಿ ಕಳವು
ಉಪ್ಪಿನಂಗಡಿ: ಮರ್ದಾಳ ಜುಮ್ಮಾ ಮಸೀದಿಯ ನೆಕ್ಕಿತ್ತಡ್ಕ ದರ್ಗಾ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಕಾಣಿಕೆ ಡಬ್ಬಿ ಕಳವು ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಅಲ್ಲದೆ, ಸಮೀಪದ ಮಸೀದಿಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಲಾಗಿದೆ. ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.