ಆವೆಮಣ್ಣಿನ ಕಲಾಕೃತಿ ರಚನೆ ಕಾರ್ಯಾಗಾರ
ಮಣಿಪಾಲ: ವಿಶ್ವ ದೃಷ್ಟಿ ರಕ್ಷಣೆ ದಿನಾಚರಣೆ ಅಂಗವಾಗಿ ಮಣಿಪಾಲ್ ಸ್ಯಾಂಡ್ ಹಾರ್ಟ್ ಕಲಾವಿದರು ಗೋಳಿಯಂಗಡಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಸಿದ ಒಂದು ದಿನದ ಅವೆಮಣ್ಣಿನ ಕಲಾ ಶಿಬಿರದಲ್ಲಿ ನೇತ್ರದಾನ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದಕ್ಕಾಗಿ ಅವೆಮಣ್ಣಿನ ಕಲಾಕೃತಿ ರಚನಾ ಕಾರ್ಯಾಗಾರ ನಡೆಸಿಕೊಟ್ಟರು. ಕಾರ್ಯಾಗಾರದಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮಲ್ಲಿ ಅಡಗಿರುವ ಸೃಜನಶೀಲತೆಯನ್ನು ಕಲಾಕೃತಿಗಳ ಮೂಲಕ ಹೊರಹಾಕಿದರು. ಕಾರ್ಯಕ್ರಮದುದ್ದಕ್ಕೂ ವಿದ್ಯಾರ್ಥಿಗಳಿಗೆ ನೇತ್ರದಾನದ ಮಹತ್ವದ ಬಗ್ಗೆ ತಿಳಿಸಿ ಎಲ್ಲರೂ ನೇತ್ರದಾನ ಮಾಡುವಂತೆ ಪ್ರೇರೇಪಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಸ್ಯಾಂಡ್ ಹಾರ್ಟ್ ಕಲಾವಿದರಾದ ವೆಂಕಿ ಪಲಿಮಾರು, ಶ್ರೀನಾಥ್ ಮಣಿಪಾಲ್, ರವಿ ಹಿರೇಬೆಟ್ಟು, ಪವನ್ ರಾಜ್, ಅಕ್ಷಯ್ ರಾಜ್, ಲಾರೆನ್ ಇನ್ನಿತರರು ತರಬೇತಿ ನೀಡಿದರು. ಉಡುಪಿಯ ಜಿಲ್ಲಾ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಶಾಲೆಯ ಮುಖ್ಯ ಶಿಕ್ಷಕ ರವಿಚಂದ್ರ ಕಾರಂತ್ ಇದ್ದರು.