ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಎಂಡೋ ಪೀಡಿತ ಬಾಲಕಿ ಸಾವು

Lingaraj Badiger
Updated On : 11 Oct 2013, 11:49 am

ಬೆಳ್ತಂಗಡಿ: ಎಂಡೋ ಸಲ್ಫಾನ್ ಕೀಟನಾಶಕ ಸಿಂಪಡಣೆ
ಅಡ್ಡ ಪರಿಣಾಮ ಕಂಡುಬಂದ ಪರಿಸರದಲ್ಲಿ ಜನಿಸಿದ ವಿಕಲಾಂಗ ಬಾಲೆ ಮೃತಪಟ್ಟ ಶಿರ್ಲಾಲಿನಲ್ಲಿ ನಡೆದಿದೆ. ಶಿರ್ಲಾಲು ಗ್ರಾಮದ ಜಯಶ್ರೀ ನಿಲಯದ ಗೋಪಾಲ ಪೂಜಾರಿ, ರತ್ನಾವತಿ ದಂಪತಿಯ ಪುತ್ರಿ ಶಾನ್ಯ (ನಾಲ್ಕೂವರೆ ವರ್ಷ) ಮೃತಳು.
ಇವರಿಗೆ ಮಾನ್ಯ ಮತ್ತು ಶಾನ್ಯ ಎಂಬ ಇಬ್ಬರು ಹೆಣ್ಣುಮಕ್ಕಳು. ಇಬ್ಬರೂ ಜನ್ಮತಃ ವಿಕಲಾಂಗರು. 7 ವರ್ಷದ ಮಾನ್ಯಳದ್ದು ಪ್ರಾಯಕ್ಕೆ ತಕ್ಕಂತೆ ಬೆಳವಣಿಗೆಯಾಗದ ದೇಹ. ಈಕೆಗೆ ಮನವರಿಕೆ ಮಾಡಿಕೊಳ್ಳುವ, ಮಾರುತ್ತರ ಕೊಡುವ ಶಕ್ತಿ ಇಲ್ಲ. ಈಕೆಯ ನಂತರ ಹುಟ್ಟಿದವಳು ಶಾನ್ಯ. ಈಕೆಗೆ ಸೊಂಟದಿಂದ ಕೆಳಗೆ ಬಲವೇ ಇಲ್ಲ. ಮಂಗಳವಾರ ಮುಂಜಾನೆ ಸುಮಾರು ಒಂದೂವರೆ ಗಂಟೆಗೆ ವೇದನೆ ಪಡುತ್ತಿದ್ದ ಶಾನ್ಯ ಇಹಲೋಕ ತ್ಯಜಿಸಿದಳು.
ತಾಯಿ ಮನೆ ಕೊಕ್ಕಡ: ಮಕ್ಕಳ ತಾಯಿ ರತ್ನಾವತಿ ಹುಟ್ಟಿ ಬೆಳೆದ ಊರು ಕೊಕ್ಕಡ. ಇವರ ಮನೆ ಸನಿಹದಲ್ಲೇ ಬೃಹತ್ ಗೇರು ತೋಟವಿದೆ. ಇವರು ಎಂಡೋ ಸಿಂಪಡಣೆಯನ್ನು ಪ್ರತಿ ವರ್ಷ ನೋಡಿಕೊಂಡು ಬೆಳೆದವರು. ರತ್ನಾವತಿಯ ಅಕ್ಕನನ್ನು ಶಿಬಾಜೆಗೆ ಮದುವೆ ಮಾಡಿಕೊಡಲಾಗಿದೆ. ಅವರು ಎರಡು ಬಾರಿ ಗರ್ಭವತಿಯಾದಾಗಲೂ ವೈದ್ಯಕೀಯ ಪರೀಕ್ಷೆ ಮಾಡಿದಾಗ ಎರಡೂ ಮಕ್ಕಳು ವಿಕಲಾಂಗರಾಗಿದ್ದಾರೆ ಎಂದು ಗೊತ್ತಾಯಿತು. ಬಳಿಕ ಅವರು ಗರ್ಭಪಾತ ಮಾಡಿಸಿದ್ದರು. ರತ್ನಾವತಿಯ ಮಾವನ ಮಗಳನ್ನು ಉದನೆಗೆ ಮದುವೆ ಮಾಡಿಕೊಡಲಾಗಿದೆ. ಆಕೆಯ ಮಗಳು ಕೂಡಾ ವಿಕಲಾಂಗೆಯಾಗಿದ್ದಾಳೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement