ಬಾಲವನ ಕಲಾವಿದರ ತಪೋಭೂಮಿಯಾಗಲಿ
ಪುತ್ತೂರು: ಡಾ. ಶಿವರಾಮ ಕಾರಂತರ ಬಾಲವನವು ರಂಗಭೂಮಿ ಕಲಾವಿದರಿಗೆ ತಪೋಭೂಮಿಯಾಗಬೇಕಾಗಿದ್ದು, ಇಂತಹ ಪರಿಸರದಲ್ಲಿ ಕಲಾವಿದರ ತಪಸ್ಸು ನಡೆದರೆ ಕಾರಂತರ ಆಶಯಗಳನ್ನು ಗೌರವಿಸಿದಂತಾಗುತ್ತದೆ. ಬಾಲವನ ಕರಾವಳಿಯ ರಂಗಾಯಣವಾಗಲಿ ಎಂದು ಬೆಂಗಳೂರಿನ ರಂಗ ನಿರ್ದೇಶಕ ಚಿದಂಬರ ರಾವ್ ಜಂಬೆ ಆಶಯ ವ್ಯಕ್ತಪಡಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತರ ಬಾಲವನ ಸಮಿತಿ ಮತ್ತು ಪುತ್ತೂರು ಸಹಾಯಕ ಆಯಕ್ತರ ಕಚೇರಿ ವತಿಯಿಂದ ಗುರುವಾರ ಪುತ್ತೂರಿನ ಡಾ. ಶಿವರಾಮ ಕಾರಂತ ಬಾಲವನದಲ್ಲಿ ನಡೆದ ಡಾ. ಶಿವರಾಮ ಕಾರಂತರ ಜನ್ಮ ದಿನಾಚರಣೆ ಹಾಗೂ ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಲವನ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಬಾಲವನದಲ್ಲಿ ಡಾ. ಕಾರಂತರ ನಾಟಕಗಳನ್ನು ಆಧರಿಸಿದ ನಾಟಕೋತ್ಸವ ನಡೆಯಬೇಕು. ಈ ನಿಟ್ಟಿನಲ್ಲಿ ರಾಜ್ಯವ್ಯಾಪಿ ಬಾಲವನದ ಪರಿಚಯವಾಗಬೇಕು ಎಂದ ಜಂಬೆ, ಬಾಲವನವು ಕನ್ನಡದ ಶಾಂತಿನಿಕೇತನ ಎಂದು ಬಣ್ಣಿಸಿದರು.
ರಂಗಭೂಮಿ ಮೂಲಕ ಶಿಕ್ಷಣ: ಪ್ರಸ್ತುತ ಶಿಕ್ಷಣವು ಮಕ್ಕಳಿಗೆ ಭಾರವಾಗುತ್ತಿದ್ದು, ಅಂಕ ಆಧರಿತ ಶಿಕ್ಷಣ ವ್ಯವಸ್ಥೆಯಿಂದಾಗಿ ಶಿಕ್ಷಕರು ಮತ್ತು ಪೋಷಕರ ಒತ್ತಡದಿಂದಾಗಿ ಮಕ್ಕಳು ಆತಂಕಕ್ಕೆ ಒಳಗಾಗುತ್ತಿದ್ದಾರೆ. ರಂಗಭೂಮಿಯ ಮೂಲಕ ಶಿಕ್ಷಣ ನೀಡುವುದರಿಂದ ಮಕ್ಕಳಲ್ಲಿ ಸೃಜನಶೀಲತೆ ಮತ್ತು ಸ್ವಂತಿಕೆ ಬೆಳೆಯುತ್ತದೆ. ಅದಕ್ಕಾಗಿ ಬಾಲವನದಲ್ಲಿ ರಂಗಶಿಕ್ಷಣ ನೀಡುವ ಕೆಲಸವಾಗಬೇಕು. ಈ ಬಗ್ಗೆ ಕನ್ನಡದ ಮನಸ್ಸುಗಳು ಸೇರಿಕೊಂಡು ಕಾರ್ಯೋನ್ಮುಖರಾಬೇಕು ಎಂದರು.
ಸನ್ಮಾನಿತರ ಬಗ್ಗೆ ಅಭಿನಂದನಾ ಮಾತುಗಳನ್ನಾಡಿದ ರಂಗಕರ್ಮಿ ಐ.ಕೆ. ಬೊಳುವಾರು, ಜಂಬೆಯವರು ಗುರು- ಶಿಷ್ಯ ಪರಂಪರೆ ಮೂಲಕ ಶಿಕ್ಷಣ ನೀಡಿದವರು. ಇಂದಿನ ಅತ್ಯತ್ತಮ ನಟರೆಲ್ಲ ಜಂಬೆಯವರ ಶಿಷ್ಯರಾಗಿದ್ದಾರೆ. ರಂಗಭೂಮಿಗೆ ಗಾಂಭೀರ್ಯ ತರುವ ಪ್ರಯತ್ನ ಜಂಬೆ ಅವರಿಂದಾಗಿದೆ ಎಂದರು.
ಉಡುಪಿ ಯಕ್ಷಗಾನ ಕೇಂದ್ರದ ನಿರ್ದೇಶಕ ಹೇರಂಜೆ ಕೃಷ್ಣ ಭಟ್, ಡಾ. ಶಿವರಾಮ ಕಾರಂತರ ಸಂಸ್ಮರಣೆ ಮಾಡಿದರು.
ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪುರಸಭಾಧ್ಯಕ್ಷೆ ವಾಣಿಶ್ರೀಧರ್, ಸುಳ್ಯದ ಕೆವಿಜಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಜ್ಞಾನೇಶ್ ಬಾಲವನ ಈಜುಕೊಳ ಸಮಿತಿ ಅಧ್ಯಕ್ಷ ಸವಣೂರು ಸೀತಾರಾಮ ರೈ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರೆ. ವಿಜಯ ಹಾರ್ವಿನ್ ಇದ್ದರು.
ಬಾಲವನ ಸಮಿತಿ ಕಾರ್ಯದರ್ಶಿ ತಹಸೀಲ್ದಾರ್ ಕುಳ್ಳೇ ಗೌಡ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಬಿ.ಚಂದ್ರಹಾಸ ರೈ ವಂದಿಸಿದರು. ಪ್ರೊ.ಬಿ.ಜೆ. ಸುವರ್ಣ ನಿರೂಪಿಸಿದರು. ಪುತ್ತೂರು ಕರ್ನಾಟಕ ಸಂಘ ಅಧ್ಯಕ್ಷರಾದ ಬಿ.ಪುರಂದರ ಭಟ್, ಭಾವನ ಸಮಿತಿ ಸದಸ್ಯರಾದ ಎಸ್.ಕೆ. ಆನಂದ್, ಮಂಜುಳಾ ಭಾಸ್ಕರ್, ಗೌರಿಮಾಧವ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಮಾನಂದ ನಾಯಕ್, ಪುರಸಭೆ ಮುಖ್ಯಾಧಿಕಾರಿ ಸುಧಾಕರ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ಅತಿಥಿಗಳನ್ನು ಗೌರವಿಸಿದರು.
ಈ ಸಂದರ್ಭ ಬೊಳುವಾರು ಸಾಂಸ್ಕೃತಿಕ ಕಲಾಕೇಂದ್ರ ನಡೆಸಿದ ಕಾರಂತರ ಕುರಿತ ಭಾವಚಿತ್ರ ರಚನೆ ಹಾಗೂ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು. ಕಲಾಕೇಂದ್ರದ ಸಂಚಾಲಕ ಚಿದಾನಂದ ಕಾಸರಗೋಡು ನಿರ್ವಹಿಸಿದರು.