ಬೊಲೆರೊ- ಬೈಕ್ ಡಿಕ್ಕಿ: ಸವಾರ ಗಾಯ
ವಿಟ್ಲ: ಮಾಣಿಯ ನೇರಳಕಟ್ಟೆ ಬಳಿ ರಸ್ತೆಗೆ ಏಕಾಏಕಿ ನುಗ್ಗಿದ ಬೊಲೆರೋ ವಾಹನ ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದು ಸವಾರ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಪುತ್ತೂರು, ಮಾಣಿ ರಸ್ತೆಯ ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆಯಲ್ಲಿರುವ ಆಡಿಟೋರಿಯಮ್ ಪಕ್ಕ ನಿಲ್ಲಿಸಿದ್ದ ಬೊಲೆರೋ ವಾಹನವನ್ನು ಯಾವುದೇ ಮುನ್ಸೂಚನೆ ನೀಡದೆ ಒಮ್ಮೆಲೇ ರಸ್ತೆಗೆ ನುಗ್ಗಿಸಿದ ಪರಿಣಾಮ ರಸ್ತೆಯಲ್ಲಿ ಬರುತ್ತಿದ್ದ ಕಾರ್ಕಳದ ಸತ್ಯನಾರಾಯಣ ನಗರ ನಿವಾಸಿ ದಿ. ಬಾಬು ನಾಯ್ಕ ಪುತ್ರ ನವ ನಾಯ್ಕ ಚಲಾಯುಸಿಕೊಂಡು ಹೋಗುತ್ತಿದ್ದ ನೋಂದಣಿಯಾಗದ ನೂತನ ಬೈಕ್ಗೆ ಡಿಕ್ಕಿಯಾಗಿದೆ. ಇದರಿಂದ ನವ ನಾಯ್ಕ ಅವರ ಮೊಣಕಾಲಿಗೆ ಏಟಾಗಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ
ಬಂಟ್ವಾಳ: ಶಂಭೂರು ಎ.ಎಂ.ಆರ್. ಅಣೆಕಟ್ಟಿನ ನೀರಿನಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ನೀರಿನಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸುಮಾರು 55-60 ವರ್ಷ ಪ್ರಾಯದ ಅಪರಿಚಿತ ಶವ ಕೊಳೆತ ಸ್ಥಿತಿಯಲ್ಲಿದೆ. ಸಾವು ಸುಮಾರು 4-5 ದಿನಗಳ ಹಿಂದೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶವದ ಗುರುತು ಪತ್ತೆಯಾದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆ (08255-235000)ಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.