ಭೂಮಾಪಕ ಲೋಕಾ ಬಲೆಗೆ
ಬೆಳ್ತಂಗಡಿ: ಇಲ್ಲಿನ ಭೂ ಮಾಪಕರೊಬ್ಬರು ಗುರುವಾರ ಸಂಜೆ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿದ್ದಾರೆ. ಪುತ್ತೂರು ನಿವಾಸಿ, ಹಾಸನ ಮೂಲದ ಈರೇಗೌಡ ಬಂಧಿತರು.
ಇವರು ಶಿಶಿಲದ ಪುರುಷೋತ್ತಮ ಗೌಡ ಅವರ ಐದು ಸೆಂಟ್ಸ್ ಜಾಗದ ಭೂ ಪರಿವರ್ತನೆಗೆ ನಕ್ಷೆ ಮಾಡಿಕೊಡಲು ರು. 25 ಸಾವಿರ ಬೇಡಿಕೆ ಇಟ್ಟಿದ್ದರು. ದಸ್ತಾವೇಜು ಬರಹಗಾರ ಕುಟ್ಟಿಚ್ಚ ಮುಗೇರ ಅವರ ಮೂಲಕ ಪುರುಷೋತ್ತಮ ಗೌಡರು ಅರ್ಜಿ ಸಲ್ಲಿಸಿದ್ದರು. ಈರೇಗೌಡರು ಕುಟ್ಟಿಚ್ಚ ಅವರ ಬಳಿ ಲಂಚದ ಬೇಡಿಕೆ ಇಟ್ಟಿದ್ದರು.
ನಂತರ ಲಂಚದ ಮೊತ್ತದ ಕುರಿತು ಚೌಕಾಸಿಯಾಗಿ ರು. 10 ಸಾವಿರ, 3 ಸಾವಿರ ಎಂದಾಗಿ ಕೊನೆಗೆ ಲಂಚದ ಪ್ರಮಾಣ ರು. 2 ಸಾವಿರಕ್ಕೆ ಬಂದು ನಿಂತಿತ್ತು.
ಇದೇ ಆಧಾರದಲ್ಲಿ ಕುಟ್ಟಿಚ್ಚ ಮುಗೇರ ಮಂಗಳೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮೂರು ದಿನಗಳಿಂದ ಬೆನ್ನು ಹಿಡಿದ ಪೊಲೀಸರು ಗುರುವಾರ ಸಂಜೆ ಲಂಚ ಸ್ವೀಕರಿಸುವಾಗ ಲಂಚದ ಹಣದ ಸಮೇತ ಆರೋಪಿ ಈರೇಗೌಡರನ್ನು ಬಂಧಿಸಿದರು. ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಶೇಟ್ಗೆ ಬಂದ ಮಾಹಿತಿಯನ್ವಯ ಲೋಕಾಯುಕ್ತ ಎಸ್ಪಿ ಮೋಹನದಾಸ್ ಶೆಟ್ಟಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವಿಠಲದಾಸ ಪೈ ತಂಡ ಕಾರ್ಯಾಚರಣೆ ನಡೆಸಿತ್ತು. ತಂಡದಲ್ಲಿ ಇನ್ಸ್ಪೆಕ್ಟರ್ಗಳಾದ ದಿಲೀಪ್, ಮಂಜಯ್ಯ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.