ಮೋದಿ ಅಭಿನಂದನೆ ಬ್ಯಾನರ್ಗೆ ಹಾನಿ
ಮೂಲ್ಕಿ: ಕೆಂಚನಕೆರೆ ಸಮೀಪದ ಅಂಗರಗುಡ್ಡೆ ತಿರುವು ಬಳಿ ರಸ್ತೆ ಬದಿಯಲ್ಲಿ ಕಿಲ್ಪಾಡಿ ಪಂಚಾಯಿತಿ ಅನುಮತಿಯೊಂದಿಗೆ ನರೇಂದ್ರ ಮೋದಿ ಅಭಿಮಾನಿಗಳು ಅಳವಡಿಸಿದ ಬ್ಯಾನರನ್ನು ಬ್ಲೇಡಿನಲ್ಲಿ ಹರಿದು ಹಾನಿಗೊಳಿಸಿದ ಘಟನೆ ಸಂಭವಿಸಿದೆ. ಮೂಲ್ಕಿ ಪರಿಸರದಲ್ಲಿ ನರೇಂದ್ರ ಮೋದಿ ಅಭಿಮಾನಿ ಬಳಗದದವರು ಮೂಲ್ಕಿ, ಕಾರ್ನಾಡು, ಕಿನ್ನಿಗೋಳಿ,ಅಂಗರಗುಡ್ಡೆ, ಕೆರೆಕಾಡು ಸೇರಿದಂತೆ ಅಲ್ಲಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭಾವಚಿತ್ರ ಸಹಿತ ಬೃಹತ್ ಕಟೌಟ್ಗಳನ್ನು ಅಳವಡಿಸಲಾಗಿದೆ. ಈ ಮೂಲಕ, ಕಳೆದ ಹಲವಾರು ವರ್ಷಗಳಿಂದ ಬೂದಿ ಮುಚ್ಚಿದ ಕೆಂಡದಂತಿರುವ ಅತಿ ಸೂಕ್ಷ್ಮ ಪ್ರದೇಶ ಅಂಗರಗುಡ್ಡೆ ಪರಿಸರದಲ್ಲಿ ಕೋಮು ಸೌಹಾರ್ದತೆ ಕದಡುವ ದೃಷ್ಟಿಯಿಂದ ಇಂತಹ ಸಾಹಸಕ್ಕೆ ಕೈಹಾಕಿರಬೇಕೆಂದು ಶಂಕಿಸಲಾಗಿದೆ. ಘಟನೆಯನ್ನು ನರೇಂದ್ರ ಮೋದಿ ಅಭಿಮಾನಿ ಬಳಗ ಖಂಡಿಸಿದ್ದು ಮೂಲ್ಕಿ ಪೊಲೀಸರಿಗೆ ಮೌಖಿಕವಾಗಿ ದೂರು ನೀಡಿದ್ದು ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಆಗ್ರಹಿಸಲಾಗಿದೆ. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಲಾಗಿದೆ.