ಮೋಹನ್ ಆಳ್ವಗೆ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ
ಕೋಟ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಕನ್ನಡದ ಅಪರೂಪದ ಸಾಹಿತಿ ಕೋಟ ಶಿವರಾಮ ಕಾರಂತರ ಹುಟ್ಟೂರು ಕೋಟತಟ್ಟು ಗ್ರಾಪಂ ವತಿಯಿಂದ 'ಕಾರಂತ ಹುಟ್ಟೂರ ಪ್ರಶಸ್ತಿ'ಯನ್ನು ಡಾ. ಮೋಹನ್ ಆಳ್ವ ಅವರಿಗೆ ಗುರುವಾರ ಪ್ರದಾನ ಮಾಡಲಾಯಿತು.
ಕಾರಂತರ ಹುಟ್ಟುಹಬ್ಬ ದಿನದಂದು, ಕಾರಂತರು ಕಲಿತ ಕೋಟ ಶಾಂಭವಿ ಶಾಲೆಯಲ್ಲಿ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಚಿವ ಸೊರಕೆ, ಕಾರಂತರು ಸಾಮಾಜಿಕ ಪಿಡುಗುಗಳ ವಿರುದ್ಧ ಆರಂಭಿಸಿದ್ದ ಹೋರಾಟ ಅವರ ನಂತರ ಕ್ಷೀಣವಾಗಿದೆ, ಅದನ್ನು ಮತ್ತೊಮ್ಮೆ ಜೀವಂತಗೊಳಿಸಬೇಕಾಗಿದೆ, ಈ ಹಿನ್ನೆಲೆಯಲ್ಲಿ ಡಾ. ಮೋಹನ್ ಆಳ್ವರಂಥವರ ಮೇಲೆ ಬಹಳ ನಿರೀಕ್ಷೆ ಇದೆ ಎಂದರು.
ಡಿ.ವಿ. ಸದಾನಂದ ಗೌಡ ಮಾತನಾಡಿ, ಕಾರಂತರಿಗೆ ಮಕ್ಕಳು ಮತ್ತು ಪರಿಸರ ಅತ್ಯಂತ ಪ್ರಿಯವಾದ ವಿಷಯವಾಗಿತ್ತು. ಆದರೆ ಇಂದು ಮಕ್ಕಳ ಮನಸ್ಸನ್ನು ಮುದುಡಿಸುವ ಪರಿಸರ ನಿರ್ಮಾಣವಾಗುತ್ತಿದೆ, ಮಕ್ಕಳ ಮನಸ್ಸು ಮತ್ತೆ ಅರಳಿಸುವ ಸಾಮಾಜಿಕ ಪರಿಸರ ನಿರ್ಮಾಣವಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕೋಟತಟ್ಟು ಗ್ರಾಪಂ ಅಧ್ಯಕ್ಷೆ ಶೋಭಾ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಉಡುಪಿ- ಚಿಕ್ಕಮಗಳೂರು ಸಂಸದ ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಪಂ ಅಧ್ಯಕ್ಷ ಉಪೇಂದ್ರ ನಾಯಕ್, ತಾಪಂ ಅಧ್ಯಕ್ಷೆ ಗೌರಿ ಪೂಜಾರಿ, ಸ್ಥಳೀಯ ಜಿಪಂ ಸದಸ್ಯೆ ಸುನಿತಾ ರಾಜಾರಾಮ್, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಭಾಗವಹಿಸಿದ್ದರು.
ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ನಂತರ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಮಾರಂಭಕ್ಕೆ ಮೊದಲು ಪ್ರಶಸ್ತಿ ಪುರಸ್ಕೃತರನ್ನು ಮತ್ತು ಅತಿಥಿಗಳನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಇದೇ ಸಂದರ್ಭ ಅತಿಥಿಗಳು ಕಾರಂತ ಥೀಮ್ ಪಾರ್ಕ್ನಲ್ಲಿ ಕಾರಂತರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಿಸಿದರು.