ರಾಮ ಬಲ್ಯಾಯಗೆ ಇಂದು ಶಾಂತ ಶ್ರೀ ಪ್ರಶಸ್ತಿ ಪ್ರದಾನ
ಬಂಟ್ವಾಳ: ಕಲ್ಲಡ್ಕ ಶ್ರೀ ಶಾರದಾ ಪೂಜಾ ಉತ್ಸವ ಸಮಿತಿ ಕೊಡಮಾಡುವ ಹಿರಿಯ ರಂಗಕಲಾವಿದ ದಿ. ಶಾಂತಾರಾಮ ಕಲ್ಲಡ್ಕರ ನೆನಪಿನ ಶಾಂತ ಶ್ರೀ ವಾರ್ಷಿಕ ಪ್ರಶಸ್ತಿಗೆ ಹಿರಿಯ ರಂಗಕಲಾವಿದ ರಾಮ ಬಲ್ಯಾಯ ಆಯ್ಕೆಯಾಗಿದ್ದಾರೆ.
1970 ರಿಂದ ನಾಟಕ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಇವರು ಮೂರು ದಶಕಗಳ ಕಾಲ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದರು. ತುಳುನಾಡಿನಾದ್ಯಂತ ಸುಮಾರು 150ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ ಇವರು, ನಾಟಕ ಕ್ಷೇತ್ರಕ್ಕೆ ಹೊಸ ರಂಗಕಲಾವಿದರನ್ನು ಪರಿಚಯಿಸಿದ ಹಿರಿಮೆ ಉಳ್ಳವರು.
ಪ್ರಸ್ತುತ ವಿಶ್ರಾಂತ ಜೀವನ ನಡೆಸುತ್ತಿರುವ ಇವರನ್ನು ರಂಗಭೂಮಿ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಸಾಧನೆಗಾಗಿ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಸಮಿತಿ ಅಧ್ಯಕ್ಷ ನಾಗರಾಜ ಬಲ್ಯಾಯ ತಿಳಿಸಿದ್ದಾರೆ.
ಇಂದು ಪ್ರದಾನ: ಶುಕ್ರವಾರ ಅಪರಾಹ್ನ 12 ಗಂಟೆಗೆ ಕಲ್ಲಡ್ಕ ಸ.ಹಿ.ಪ್ರಾ.ಶಾಲೆಯಲ್ಲಿ ನಡೆಯುವ 36 ನೇ ವರ್ಷದ ಶಾರದಾ ಪೂಜಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಾಜಿ ಶಾಸಕ ರುಕ್ಮಯ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಶ್ರೀರಾಮ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಿತೇಂದ್ರ ಎಸ್. ಕೊಟ್ಟಾರಿ ಭಾಗವಹಿಸುವರು. ಶ್ರೀರಾಮ ವಿದ್ಯಾಕೇಂದ್ರದ ಶಿಕ್ಷಕ ವಿನೋದ್ ಅಡ್ಕಸ್ಥಳ ಧಾರ್ಮಿಕ ಉಪನ್ಯಾಸ ನೀಡುವರು ಎಂದು ಶಾರದಾ ಪೂಜಾ ಉತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.