ಸೌಜನ್ಯ ಕೊಲೆ ಪ್ರಕರಣ ಸಿಬಿಐ ತನಿಖೆಗೆ ಆಗ್ರಹ
ಮಂಗಳೂರು: ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಬೆಳ್ತಂಗಡಿಯ ಹಿಂದೂ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೌಜನ್ಯ ಕೊಲೆ ನಡೆದು ಅ.9ಕ್ಕೆ ಒಂದು ವರ್ಷ ಕಳೆದಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೂವರೆಗೂ ಯೊವೊಬ್ಬ ಆರೋಪಿಯನ್ನೂ ಪೊಲೀಸರು ಬಂಧಿಸಿಲ್ಲ. ಅಲ್ಲದೇ ಆಕೆಯ ತಂದೆ, ತಾಯಿ ನೀಡಿದ ದೂರಿನ ಪ್ರಕಾರವೂ ಆರೋಪಿಗಳ ತನಿಖೆಯನ್ನು ನಡೆಸಿಲ್ಲ ಎಂದು ಆರೋಪಿಸಿದರು. ಪ್ರಕರಣದ ತನಿಖೆಯನ್ನು ಸಿಐಡಿ ಪೊಲೀಸರು ನಡೆಸಿದರೂ ಸರಿಯಾಗಿ ವಿಚಾರಣೆ ಮಾಡಿಲ್ಲ. ಜಾಗ ವಿಚಾರ ಹಿನ್ನೆಲೆಯಲ್ಲಿ ನಡೆದ ಕೊಲೆ ಪ್ರಕರಣ ಇದಾಗಿದ್ದು, ಆದ್ದರಿಂದ ಪ್ರಕರಣ ಕುರಿತು ಸರ್ಕಾರ ಸಿಬಿಐ ತನಿಖೆ ನಡೆಸಬೇಕು. ತಪ್ಪಿದಲ್ಲಿ ಬೃಹತ್ ಹೋರಾಟ ಕೈಗೆತ್ತಿಕೊಳ್ಳುವುದಾಗಿ ಎಚ್ಚರಿಸಿದರು. ಮೃತ ಸೌಜನ್ಯಳ ತಂದೆ ಚಂದಪ್ಪ ಗೌಡ, ತಾಯಿ ಕುಸುಮಾವತಿ ಮತ್ತು ಮಾವ ವಿಠಲ ಗೌಡ ಹಾಜರಿದ್ದರು.