ಇಂದು ಹೃದಯ ರೋಗ ತಪಾಸಣೆ
ಬೆಳ್ತಂಗಡಿ: ಯೆನಪೋಯ ಆಸ್ಪತ್ರೆ ಮಂಗಳೂರು, ರೋಟರಿ ಕ್ಲಬ್ ಬೆಳ್ತಂಗಡಿ, ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನ, ಪ್ರಾಥಮಿಕ ಆರೋಗ್ಯ ಕೇಂದ್ರ ಇಂದಬೆಟ್ಟು, ಹಾಲು ಉತ್ಪಾದಕರ ಸಂಘ ಮಿತ್ತಬಾಗಿಲು ಮತ್ತು ಸಿಂಡಿಕೇಟ್ ಬ್ಯಾಂಕ್ ಬಂಗಾಡಿ ಇದರ ಆಶ್ರಯದಲ್ಲಿ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ವಠಾರದಲ್ಲಿ ಅ.12ರಂದು ಉಚಿತ ಹೃದಯರೋಗ ತಪಾಸಣೆ ಹಾಗೂ ಸ್ತ್ರೀರೋಗ ಮತ್ತು ಕ್ಯಾನ್ಸರ್ ರೋಗದ ಬಗ್ಗೆ ಮಾಹಿತಿ ಶಿಬಿರ ಎಂದು ಯೇನಪೋಯ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಉಮೇಶ್ ಗೌಡ ತಿಳಿಸಿದ್ದಾರೆ.
ಅವರು ಸೋಮವಾರ ಇಲ್ಲಿನ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಶಿಬಿರದ ಮಾಹಿತಿ ನೀಡಿದರು. ಶಿಬಿರದ ಉದ್ಘಾಟನೆಯನ್ನು ಯೆನಪೋಯ ಗ್ರೂಪ್ನ ನಿರ್ದೇಶಕ ಅಬ್ದುಲ್ ಜಾವೇದ್ ನೆರವೇರಿಸಲಿದ್ದು, ರೊಟರಿ ಕ್ಲಬ್ ಅಧ್ಯಕ್ಷ ಯಶವಂತ ಪಟವರ್ದನ್ ಅಧ್ಯಕ್ಷತೆ ವಹಿಸಲಿದ್ದಾರೆ.
ರೋಗಿಗಳಿಗೆ ವೈದ್ಯರಿಂದ ಸೂಕ್ತ ಮಾರ್ಗದರ್ಶನವೂ ದೊರೆಯಲಿದೆ. ಯಾವುದೇ ಹೆಚ್ಚಿನ ಚಿಕಿತ್ಸೆ ಬೇಕಾದವರಿಗೆ ಯೆನಪೋಯ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು. ಆಸ್ಪತೆಯಲ್ಲಿ ವಿವಿಧ ವಿಮಾ ಸೌಲಭ್ಯಗಳು ಲಭ್ಯವಿರುತ್ತವೆ ಎಂದರು.
ಅತ್ಯಂತ ಗ್ರಾಮೀಣ ಪ್ರದೇಶವಾಗಿರುವ ಕೊಲ್ಲಿಯಲ್ಲಿ ಮಹಿಳೆಯರಿಗಾಗಿ ವಿಶೇಷ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸ್ತ್ರೀ ರೋಗ ತಜ್ಞರು ಮತ್ತು ಕ್ಯಾನ್ಸರ್ನ ತಜ್ಞ ವೈದ್ಯರು ರೋಗಗಳ ಬಗ್ಗೆ ಪೂರ್ಣ ಮಾಹಿತಿ ನೀಡಲಿದ್ದಾರೆ.
ಗೋಷ್ಠಿಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಯಶವಂತ ಪಟವರ್ದನ್, ಕಾರ್ಯದರ್ಶಿ ನಾರಾಯಣ ಭಿಡೆ, ಯೇನಪೋಯ ಆಸ್ಪತ್ರೆಯ ಪಿಆರ್ಓ ದಯಾನಂದ್, ಶಶಿಧರ್ ಇದ್ದರು.
ಇಂದು ರಕ್ತದಾನ ಶಿಬಿರ
ವಿಟ್ಲ: ದ.ಕ. ಜಿಲ್ಲಾ ಎನ್.ಎಸ್.ಯು.ಐ, ಮಂಗಳೂರು ಕಾಲೇಜು ವಿದ್ಯಾರ್ಥಿ ಸಂಘ ಮತ್ತು ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮತ್ತು ವೆನ್ಲಾಕ್ ಆಸ್ಪತ್ರೆ ಮಂಗಳೂರು ಇವುಗಳ ಸಹಕಾರದೊಂದಿಗೆ ಅ.12 ರಂದು ಶನಿವಾರ ಬೆಳಗ್ಗೆ ಸಾಲೆತ್ತೂರು ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ರಕ್ತದಾನ ಶಿಬಿರ ಮತ್ತು ಉಚಿತ ವೈದ್ಯಾಕೀಯ ಶಿಬಿರ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಶಿಬಿರ ಉದ್ಘಾಟಿಸಲಿದ್ದು, ಕೊಳ್ನಾಡು ಗ್ರಾ.ಪಂ. ಅಧ್ಯಕ್ಷೆ ಮಂಜುಳ ಮಾಧವ ಮಾವೆ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಎಸ್. ಮಹಮ್ಮದ್, ಮಮತ ಡಿ.ಎಸ್. ಗಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ.
ವೈದ್ಯಕೀಯ ಶಿಬಿರದಲ್ಲಿ ಸಾಮಾನ್ಯ ರೋಗ, ಕಿವಿ, ಮೂಗು ಗಂಟಲು, ಮೂಳೆ ರೋಗ ಹಾಗೂ ಮಕ್ಕಳ, ಸ್ತ್ರೀರೋಗ ಮೊದಲಾದವುಗಳು ಲಭ್ಯವಿರುತ್ತದೆ ಎಂದು ಆಯೋಜಕರ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಪುತ್ತೂರು: ಇಂದು ಡಯಾಲಿಸಿಸ್ ಯಂತ್ರ ಉದ್ಘಾಟನೆ
ಮಂಗಳೂರು: ಕ್ಯಾಂಪ್ಕೋ ಪ್ರಾಯೋಜನೆಯಲ್ಲಿ ಪುತ್ತೂರಿನ ಸಿಟಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರ ಉದ್ಘಾಟನೆ 12ರಂದು ನೆರವೇರಲಿದೆ. ಬೆಳಗ್ಗೆ 10ಕ್ಕೆ ಆರ್ಎಸ್ಎಸ್ ದಕ್ಷಿಣ ಮಧ್ಯಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ.ಪ್ರಭಾಕರ ಭಟ್ ಉದ್ಘಾಟಿಸಲಿದ್ದು, ಹಿರಿಯ ಸಹಕಾರಿ, ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಅಧ್ಯಕ್ಷತೆ ವಹಿಸುವರು. ಸಹಕಾರ ಭಾರತಿ ರಾಜ್ಯ ಸಂಚಾಲಕ ಸತೀಶ್ಚಂದ್ರ ಎಸ್.ಆರ್, ಕೆಎಸ್ಹೆಗ್ಡೆ ವೈದ್ಯಕೀಯ ಶಿಕ್ಷಣ ಸಂಸ್ಥೆಯ ನೆಪ್ರೋಲಜಿ ವಿಭಾಗ ಮುಖ್ಯಸ್ಥ ಡಾ.ಶಶಿಧರ್ ಬೈಕುಂಜೆ ಆಗಮಿಸುವರು. ಕ್ಯಾಂಪ್ರೋ ಸದಸ್ಯ ಬೆಳೆಗಾರರಿಗೆ ಮತ್ತು ನೌಕರರಿಗೆ ರಿಯಾಯ್ತಿ ದರದಲ್ಲಿ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುವುದು.
ಡಿ.14ರಂದು ಕೆಮ್ತೂರು ನಾಟಕ ಸ್ಪರ್ಧೆ:
ತಂಡಗಳ ಆಹ್ವಾನ
ಉಡುಪಿ: ತುಳುಕೂಟ ಉಡುಪಿ ವತಿಯಿಂದ 12ನೇ ವರ್ಷದ ಕೆಮ್ತೂರು ದೊಡ್ಡಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪರ್ಧೆಯು ಡಿ.14ರಂದು ಉಡುಪಿಯಲ್ಲಿ ನಡೆಯಲಿದ್ದು, ದೇಶದ ಯಾವುದೇ ಪ್ರದೇಶದ ಯೋಗ್ಯ ತುಳು ಹವ್ಯಾಸಿ ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ವಿಜೇತ ತಂಡಗಳಿಗೆ ಪ್ರಥಮ ರು. 15 ಸಾವಿರ, ದ್ವಿತೀಯ ರು. 10 ಸಾವಿರ, ತೃತೀಯ ರು. 7 ಸಾವಿರ ನಗದು ಬಹುಮಾನ. ನಿರ್ದೇಶನ, ಸಂಗೀತ, ರಂಗವಿನ್ಯಾಸ, ನಟ, ನಟಿ ವಿಭಾಗಗಳಲ್ಲಿ ಪ್ರಥಮ ರು. 1 ಸಾವಿರ, ಹಾಗೂ ದ್ವಿತೀಯ, ತೃತೀಯ ಬಹುಮಾನ ಕೊಡಲಾಗುವುದು. ಸ್ಪರ್ಧೆಗೆ ಆಯ್ಕೆಯಾದ ರಾಜ್ಯದೊಳಗಿನ ತಂಡಗಳಿಗೆ ರು. 5 ಸಾವಿರ ಹಾಗೂ ಹೊರ ರಾಜ್ಯದ ತಂಡಗಳಿಗೆ ರು. 10 ಸಾವಿರ ಭತ್ಯೆಯೊಂದಿಗೆ ಊಟ, ಉಪಚಾರ ಮತ್ತು ಉತ್ತಮ ಸೌಕರ್ಯ ಒದಗಿಸಲಾಗುವುದು. ಆಸಕ್ತ ತುಳು ಹವ್ಯಾಸಿ ರಂಗ ತಂಡಗಳು ಮುದ್ರಿತ ಪ್ರವೇಶ ಪತ್ರ ಹಾಗೂ ನಿಯಮಾವಳಿಗಳ ಬಗ್ಗೆ ಬಿ. ಪ್ರಭಾಕರ ಭಂಡಾರಿ, ಪ್ರಕೃತಿ 5- 94ಎ, 76ನೇ ಬಡಗುಬೆಟ್ಟು, ಬೈಲೂರು, ಉಡುಪಿ - 576101, ಮೊ.ಸಂ. 9880825626 ಇವರಿಗೆ ಅರ್ಜಿ ಬರೆಯಬೇಕು. ಪ್ರವೇಶ ಪತ್ರಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ ನ.11 ಎಂದು ತುಳುಕೂಟ ಉಡುಪಿಯ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಕಾಶವಾಣಿಯಲ್ಲಿ
ಅಗರಿ ಯಕ್ಷಗಾನ ಸರಣಿ
ಮಂಗಳೂರು: ಮಂಗಳೂರು ಆಕಾಶವಾಣಿಯು ಸರಣಿ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ಪ್ರಸಾರದ ಅಂಗವಾಗಿ ಅ. 27 ರಂದು ಮಧ್ಯಾಹ್ನ 2.35 ರಿಂದ 3.35ರವರೆಗೆ ಅಗರಿ ಶ್ರೀನಿವಾಸ ಭಾಗವತರ ವಿವಿಧ ಯಕ್ಷಗಾನ ಪ್ರಸಂಗಗಳನ್ನಾಧರಿಸಿದ 'ಯಕ್ಷಲೋಕದ ಗರಿ ಅಗರಿ' ಎಂಬ ವಿಶೇಷ ಸರಣಿ ಕಾರ್ಯಕ್ರಮ ನಡೆಯಲಿದೆ. ಅ. 9 ರಿಂದ ಡಿ. 11ರವರೆಗೆ 'ಮೇದಿನಿ ನಿರ್ಮಾಣ' ಆಕಾಶವಾಣಿ ರಾಷ್ಟ್ರೀಯ ಸಂಗೀತ ಸಮ್ಮೇಳನ ಕಾರ್ಯಕ್ರಮ ನಡೆಯಲಿರುವುದರಿಂದ ಯಕ್ಷಗಾನದ ಪ್ರಸಾರ ಸಮಯದಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ಆಕಾಶವಾಣಿ ಮಂಗಳೂರು ಪ್ರಕಟಣೆ ತಿಳಿಸಿದೆ.
ವಸಂತ ಗೌಡಗೆ
ಸಿಎಂ ಚಿನ್ನದ ಪದಕ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಅಗ್ನಿಶಾಮಕ ದಳದ ಪ್ರಮುಖ ಅಗ್ನಿಶಾಮಕರಾಗಿರುವ ಎಸ್. ವಸಂತ ಗೌಡ ಅವರ ಉತ್ತಮ ಕರ್ತವ್ಯ ನಿರ್ವಹಣೆ, ಪ್ರಾಮಾಣಿಕ ಸೇವೆ ಇವುಗಳನ್ನು ಪರಿಗಣಿಸಿದ ಸರ್ಕಾರ ಅವರನ್ನು 2012- 13 ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆ ಮಾಡಿದ್ದು ಸೆ. 28ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ಬೆಳ್ತಂಗಡಿ ತಾಲೂಕು ಮಿತ್ತಬಾಗಿಲು ಗ್ರಾಮದ ಶೆಟ್ಟಿಹಿತ್ಲು ಮನೆಯ ದಿ. ಡೀಕಯ್ಯ ಗೌಡ ಮತ್ತು ಲಿಂಗಮ್ಮ ದಂಪತಿ ಪುತ್ರರಾಗಿರುವ ಎಸ್. ವಸಂತ ಗೌಡ ಅವರು 1988ರಲ್ಲಿ ಅಗ್ನಿಶಾಮಕ ದಳದಲ್ಲಿ ಅಗ್ನಿಶಾಮಕರಾಗಿ ಸೇರಿದ್ದರು. ಬಳಿಕ ಪದೋನ್ನತಿ ಹೊಂದಿ ಪ್ರಮುಖ ಅಗ್ನಿಶಾಮಕರಾಗಿ ಮಂಗಳೂರು, ಬೆಳ್ತಂಗಡಿ ಮತ್ತು ಉಡುಪಿಯಲ್ಲಿ ಕರ್ತವ್ಯ ಸಲ್ಲಿಸಿದ್ದಾರೆ. 25 ವರ್ಷಗಳ ಸೇವಾವಧಿಯಲ್ಲಿ ಅಗ್ನಿ ಕರೆ ಹಾಗೂ ವಿಶೇಷ ಕರೆಗಳಲ್ಲಿ ನಿರ್ವಹಿಸಿರುವ ಉತ್ತಮ ಕೆಲಸಕ್ಕಾಗಿ 27 ಬಾರಿ ನಗದು ಬಹುಮಾನ ಹಾಗೂ ಒಂದು ಬಾರಿ ಉತ್ತಮ ಸೇವೆಗೆ ಅವರು ಪಾತ್ರರಾಗಿದ್ದರು.
ಲಕ್ಷಾಂತರ ಮೌಲ್ಯದ
ನಗ ನಗದು ಕಳವು
ಬ್ರಹ್ಮಾವರ: ಇಲ್ಲಿನ ಹಾವಂಜೆ ಗ್ರಾಮದ ಕಾರ್ತಿಬೈಲು ಎಂಬಲ್ಲಿನ ಮನೆಯೊಂದರಲ್ಲಿ ಲಕ್ಷಾಂತರ ಮೌಲ್ಯದ ನಗನಗದು ಕಳವು ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಇಲ್ಲಿನ ನಿವಾಸಿ ರೋಶನ್ ಡಿ' ಸೋಜ ಎಂಬವರ ಮನೆಯವರೆಲ್ಲರೂ ಮಲಗಿದ ಮೇಲೆ ಕಳ್ಳರು ಮನೆಯ ಕೋಣೆಯ ಕಿಟಕಿಯ ಮೂಲಕ ಕೈ ಹಾಕಿ ಅವರ ಸಹೋದರಿ ನಿರ್ಮಲಾ ಮೆನೆಜಸ್ ಅವರ ವೆನಿಟಿ ಬ್ಯಾಗಿನಲ್ಲಿದ್ದ 5 ಪವನ್ ತೂಕದ ಚಿನ್ನದ ಕರಿಮಣಿ ಸರ, ಟೈಟಾನ್ ವಾಚ್, ಪರ್ಸ್, ಅದರಲ್ಲಿದ್ದ ರು. 1500 ನಗದು ಸೇರಿ ಒಟ್ಟು ರು. 10 ಲಕ್ಷ ಮೌಲ್ಯದ ಸ್ವತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಸ್ಥಳೀಯ ನಿವಾಸಿ ಮಿಲ್ಟನ್ ಎಂಬವರ ಮೇಲೆ ಸಂಶಯ ಇರುತ್ತದೆ ಎಂದು ರೋಶನ್ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಬಸ್ ಡಿಕ್ಕಿ:
ಪಾದಚಾರಿ ಗಾಯ
ಮೂಲ್ಕಿ: ಖಾಸಗಿ ಸರ್ವಿಸ್ ಬಸ್ ಡಿಕ್ಕಿಯಾಗಿ ಪಾದಚಾರಿ ಗಾಯಗೊಂಡ ಘಟನೆ ಮೂಲ್ಕಿ-ಮೂಡುಬಿದಿರೆ ರಾಜ್ಯ ಹೆದ್ದಾರಿಯ ನಂಬಿಯಾರ್ ಕ್ಲಿನಿಕ್ ಬಳಿ ಗುರುವಾರ ಸಂಭವಿಸಿದೆ. ಕಿನ್ನಿಗೋಳಿಯ ಫ್ಲೋರಿನ್ ಡಿ'ಸೋಜ ಗಾಯಾಳು. ಫ್ಲೋರಿನ್ ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಬಸ್ಸಿನ ಚಾಲಕ ಅಪಘಾತದ ಬಳಿಕ ಪೊಲೀಸರಿಗೆ ಮಾಹಿತಿ ನೀಡದೆ ವಾಹನ ಚಲಾಯಿಸಿದ್ದಾನೆ. ಈ ಬಗ್ಗೆ ಮೂಲ್ಕಿ ಠಾಣೆಗೆ ಶುಕ್ರವಾರ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ವ್ಯಕ್ತಿ ಆತ್ಮಹತ್ಯೆ
ಉಡುಪಿ: ಕಳತ್ತೂರು ಗ್ರಾಮದ ಬಸ್ತಿಗುಡ್ಡೆ ಎಂಬಲ್ಲಿ ಅಪರಿಚಿತ ವ್ಯಕ್ತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇಲ್ಲಿನ ನಿವಾಸಿ ರವೀಂದ್ರ ಶೆಟ್ಟಿ ಗುರುವಾರ ಸಂಜೆ ಬಸ್ತಿಗುಡ್ಡೆ ಎಂಬಲ್ಲಿ ಹಾಡಿಯಲ್ಲಿ ಸುಮಾರು 45-50 ವರ್ಷ ಪ್ರಾಯದ ಅಪರಿಚಿತ ಗಂಡಸು ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿ ಶಿರ್ವ ಠಾಣೆಗೆ ಮಾಹಿತಿ ನೀಡಿದ್ದಾರೆ.