ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಿದೇಶ ಉದ್ಯೋಗನೆಪ: ಲಕ್ಷಾಂತರ ವಂಚನೆ ಆರೋಪ

Vishwanath S
Updated On : 12 Oct 2013, 12:09 pm

ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರುಪಾಯಿ ವಂಚಿಸಿದ ಘಟನೆ ಶುಕ್ರವಾರ ವರದಿಯಾಗಿದೆ.
ಬಲ್ಮಠ ಕ್ರಿಸ್ಟಲ್ ಆರ್ಕೆಡ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಎಂಐಟಿಎ ಮ್ಯಾನ್‌ಪವರ್ ಕನ್ಸಲ್ಟೆಂಟ್ ಸಂಸ್ಥೆ ಮಾಲಕ ಮಹೇಶ್‌ಚಂದ್ರ ಎಂಬಾತನ ವಿರುದ್ಧ ವಂಚನೆಗೊಳಗಾದವರು ಬಂದರು ಠಾಣೆಯ ಮೆಟ್ಟಿಲೇರಿದ್ದಾರೆ. ಮಲೇಶ್ಯಾ, ಅಫಘಾನಿಸ್ತಾನದಲ್ಲಿ ಉದ್ಯೋಗ, ತೆರಳಲು ವೀಸಾ ಕೊಡಿಸುವುದಾಗಿ ನಂಬಿಸಿ ಹಲವು ಮಂದಿಯಿಂದ ಲಕ್ಷಾಂತರ ಪಡೆದಿದ್ದ. ಕೆಲವರಿಗೆ ವಿದೇಶಕ್ಕೆ ತೆರಳಿದ ವೇಳೆ ತಾವು ಮೋಸ ಹೋಗಿರುವುದು ಅರಿವಾದರೆ, ಇನ್ನೂ ಕೆಲವರಿಗೆ ವೀಸಾ ಸಿಕ್ಕಿಲ್ಲ. ಹಣ ಪಡೆದುಕೊಂಡು ಉಡಾಫೆ ಮಾತನಾಡಿ ವಾಪಾಸ್ ಕಳುಹಿಸಿದ್ದಾನೆ ಎಂದು ವಂಚನೆಗೊಳಗಾದವರು ದೂರಿದ್ದಾರೆ.  ಡೊನಾಲ್ಡ್ ಡಿಸೋಜಾ ಎಂಬವರು ತನ್ನ ಸಹೋದರರಿಗೆ ವಿದೇಶದಲ್ಲಿ ಉದ್ಯೋಗ ನೀಡುವ ಸಲುವಾಗಿ ರು. 1.10 ಲಕ್ಷ ನೀಡಿದ್ದರು. ಮಲೇಶ್ಯಾದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದ ಆರೋಪಿ ವೀಸಾ ಕಳುಹಿಸಿದ್ದ. ಆದರೆ ಅಲ್ಲಿಗೆ ತೆರಳಿದ ಬಳಿಕ ಈತನ ವಂಚನೆ ಬಹಿರಂಗಗೊಂಡಿದೆ. ಹೀಗೆ ನಮ್ಮ ಪರಿಚಯದ 11 ಮಂದಿಗೆ ಮೋಸ ಮಾಡಿದ್ದಾನೆ ಎನ್ನುತ್ತಾರೆ ಡೊನಾಲ್ಡ್. ಡೊನಾಲ್ಡ್‌ರಿಂದ ರು. 1.10 ಲಕ್ಷ, ವಿಕ್ರಮ್ ಮಿನೇಜಸ್‌ರಿಂದ ರು. 1.5 ಲಕ್ಷ, ವಿಪಿನ್‌ರಿಂದ ರು. 1.65 ಲಕ್ಷ, ಫ್ರಾನ್ಸಿಸ್ ಮಿನೇಜಸ್‌ರಿಂದ ರು. 1.40 ಲಕ್ಷ, ಕಿರಣ್ ಕುಮಾರ್‌ರಿಂದ ರು. 1.5 ಲಕ್ಷ, ಕಾರ್ಕಳ ಶಬ್ಬೀರ್‌ರಿಂದ ರು. 20 ಸಾವಿರ ಪಡೆದುಕೊಂಡ ಮಹೇಶ್‌ಚಂದ್ರ ಮೋಸ ಮಾಡಿದ್ದಾಗಿ ದೂರಿದ್ದಾರೆ. ಈವರೆಗೆ ಪ್ರಕರಣ ದಾಖಲಾಗಿಲ್ಲ ಎಂದು ಬಂದರು ಪೊಲೀಸರು ತಿಳಿಸಿದ್ದಾರೆ.ರಾಮಣ್ಣ ಗೌಡ ಕೊಲೆ: 17ರಂದು ಶಿಕ್ಷೆ ಪ್ರಕಟ
ಪುತ್ತೂರು: ಕಳೆದ 7 ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದಂಪತಿಯನ್ನು ನ್ಯಾಯಾಲವು ಅಪರಾಧಿಗಳೆಂದು ತೀರ್ಮಾನಿಸಿದ್ದು, ಶಿಕ್ಷೆಯನ್ನು 17ರಂದು ಪ್ರಕಟಿಸಲಿದೆ.
2006 ಮಾ. 25 ರಂದು ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ನೇಮಾಜೆ ಎಂಬಲ್ಲಿ ನಡೆದ ಪ್ರಕರಣವೊಂದರಲ್ಲಿ ಇಲ್ಲಿನ ನಿವಾಸಿ ರಾಮಣ್ಣ ಗೌಡ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಧರ್ಮಣ್ಣ ಗೌಡ ಮತ್ತು ಮೋಹಿನಿ ಅವರ ಮೇಲಿನ ಅಪರಾಧ ಸಾಬೀತಾಗಿದ್ದು, ಪುತ್ತೂರು ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಶಿಕ್ಷೆಯನ್ನು ಪ್ರಕಟಿಸಲು ಗುರುವಾರಕ್ಕೆ ಕಾದಿರಿಸಿದೆ.
ಜಮೀನು ವಿವಾದಕ್ಕೆ ಸಂಬಂದಿಸಿದಂತೆ ಇವರ ನಡುವೆ ತಕರಾರು ನಡೆದು ಹೊಡೆದಾಟವಾಗಿತ್ತು. ಈ ಸಂದರ್ಭದಲ್ಲಿ ಆರೋಪಿ ಧರ್ಮಣ್ಣ ಗೌಡ ರಾಮಣ್ಣ ಗೌಡರ ತಲೆಗೆ ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ರಾಮಣ್ಣ ಗೌಡರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಹಲ್ಲೆ ವೇಳೆಯಲ್ಲಿ ಧರ್ಮಣ್ಣ ಗೌಡರ ಜೊತೆಗಿದ್ದ ಅವರ ಪತ್ನಿ ಮೋಹಿನಿ ಎಂಬವರು ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿತ್ತು. ದೂರಿನ ಕುರಿತು ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆರೋಪಿ ದಂಪತಿ ಮೇಲಿನ ಅಪರಾಧ ಸಾಬೀತಾಗಿದ್ದು ಅ. 17 ರಂದು ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ.
ಉಪ್ಪುಕಳ ಕೊಲೆ ಪ್ರಕರಣ: ಪತ್ತೆಗೆ 10 ದಿನ ಗಡುವು
ಸುಬ್ರಹ್ಮಣ್ಯ: ಬಾಳುಗೋಡು ಉಪ್ಪುಕಳ ಎಂಬಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಕಿರಿಭಾಗ ಪರಮೇಶ್ವರ ಗೌಡ ಅವರು ಸೆ. 16ರಂದು ಕೊಲೆಯಾಗಿದ್ದು, ಘಟನೆ ನಡೆದು ಹಲವು ದಿನಗಳು ಕಳೆದರೂ ಇನ್ನೂ ಹಂತಕರ ಪತ್ತೆಯಾಗಿಲ್ಲ. ಶೀಘ್ರವೇ ಹಂತಕರ ಪತ್ತೆ ಮಾಡುವಂತೆ ಗ್ರಾಮಸ್ಥರು ಮುಖ್ಯಮಂತ್ರಿ, ಗೃಹ ಸಚಿವ, ಉಸ್ತುವಾರಿ ಸಚಿವರಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಬಾಳುಗೋಡಿನಲ್ಲಿ ನಡೆದ ನಾಗರಿಕ ಹಿತರಕ್ಷಣಾ ವೇದಿಕೆ, ವಿಶ್ವಯುವಕ ಮಂಡಲ, ಸದಸ್ಯರು, ಆದಿವಾಸಿ ಮಲೆಕುಡಿಯ ಸೇವಾ ಸಂಘದವರು, ಗ್ರಾಮಸ್ಥರು ಸಭೆಯಲ್ಲಿ ಮುಂದಿನ 10 ದಿನದೊಳಗೆ ಆರೋಪಿಗಳನ್ನು ಪತ್ತೆ ಹಚ್ಚದಿದ್ದಲ್ಲಿ ಬೃಹತ್ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
ಈ ಪ್ರಕರಣವನ್ನು ಮುಚ್ಚಿ ಹಾಕಿ ನೈಜ ಆರೋಪಿಗಳನ್ನು ರಕ್ಷಿಸುವ ಹುನ್ನಾರ ನಡೆಯುತ್ತಿದೆ. ರಾಜಕೀಯ ಪ್ರಭಾವವನ್ನು ಬಳಸಿ ಸರ್ಕಾರ ಮಟ್ಟದಲ್ಲೇ ಒತ್ತಡ ತಂದು ಈ ಪ್ರಕರಣವನ್ನು ಹಾದಿ ತಪ್ಪಿಸಲಾಗುತ್ತಿದೆ. ಇದರಲ್ಲಿ ಸ್ಥಳೀಯ ರಾಜಕೀಯ ನಾಯಕರ ಕೈವಾಡವಿದೆ ಎಂಬ ಆರೋಪ ಸಭೆಯಲ್ಲಿ ವ್ಯಕ್ತವಾಯಿತು.
ಈ ಹಿಂದೆ ಒಂದು ಹಂತದ ಗ್ರಾಮಸ್ಥರ ಸಭೆ ನಾಗರಿಕ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ನಡೆದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ನೀಡಿ, ಹಂತಕರ ಪತ್ತೆಗೆ ಒತ್ತಾಯಿಸಲಾಗಿದೆ. ಆದರೆ, ಏನೂ ಫಲ ನೀಡಿಲ್ಲ ಎಂದು ತಿಳಿಸಿದ್ದಾರೆ.
ಶಿಬಾಜೆ ಗ್ರಾ.ಪಂ. ಅಧ್ಯಕ್ಷಗೆ ಹಲ್ಲೆ: ದೂರು ದಾಖಲು
ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ಶಿಬಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್ವರ ಪೂಜಾರಿ (28) ಎಂಬವರಿಗೆ ಕಾರಿನಲ್ಲಿ ಬಂದ ತಂಡವೊಂದು ಹಲ್ಲೆ ನಡೆಸಿ ಕೈಯಲ್ಲಿದ್ದ ರು. 16 ಸಾವಿರ ನಗದು ಹಣವನ್ನು ದರೋಡೆಗೈದ ಘಟನೆ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಶಿಬಾಜೆ ಗ್ರಾಮದ ಕುರುಂಬು ಮನೆ ನಿವಾಸಿ ಪರಮೇಶ್ವರ  ಪೂಜಾರಿಯವರು ಪಂಚಾಯಿತಿ ಅಧ್ಯಕ್ಷ ನೆಲೆಯಲ್ಲಿ ಬೆಳ್ತಂಗಡಿಯಲ್ಲಿನ  ಕೆಲಸ ಮುಗಿಸಿ ಗುರುವಾರ ಸಂಜೆ ಮನೆಗೆ ಹೋಗುವ ಸಲುವಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಐವರು ಪರಮೇಶ್ವರ ಅವರಿಗೆ ಹೊಡೆದು, ಕಾಲಿನಿಂದ ತುಳಿದು ಗಂಭೀರ ಸ್ವರೂಪದಲ್ಲಿ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಅವರಲ್ಲಿದ್ದ 16 ಸಾವಿರ ನಗದು ಹಣವನ್ನು ದರೋಡೆಗೈದಿರುತ್ತಾರೆ ಎಂದು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಪರಮೇಶ್ವರ ಪೂಜಾರಿ ತಿಳಿಸಿದ್ದಾರೆ.  ಹಲ್ಲೆಗೈದವರಲ್ಲಿ ಎ.ಸಿ. ಉಲ್ಲಾಹನನ್, ಕುರಿಯಕೋಸ್, ಎ.ಸಿ. ಮ್ಯಾಥ್ಯೂ, ಬೈಝಿಲ್, ಮತ್ತು ಎಂ.ವಿ. ಫೈಲಿ ತಮ್ಮ ಪರಿಚಯಸ್ಥರೂ ಸೇರಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
24 ಗಂಟೆ ಗಡುವು: ಕಳೆದ ಕೆಲವು ದಿನಗಳಿಂದ ಶಿಬಾಜೆಯಲ್ಲಿ ನಡೆಯುತ್ತಿರುವ ಘಟನಾವಳಿಯಲ್ಲಿ ಪೊಲೀಸ್ ಇಲಾಖೆ ರಾಜಕೀಯ ಹಸ್ತಕ್ಷೇಪಕ್ಕೆ ಸಿಲುಕಿ ನಿಷ್ಕ್ರಿಯವಾಗಿರುವುದನ್ನು ಮನಗಂಡ ಶಿಬಾಜೆಯ ಜನತೆ, ಗುರುವಾರ ರಾತ್ರಿ ನಡೆದ ಹಲ್ಲೆ, ದರೋಡೆ ಪ್ರಕರಣದಲ್ಲೂ ನಿಷ್ಕ್ರೀಯವಾಗಿದೆ ಎಂದು ಭಾವಿಸಿ ಶುಕ್ರವಾರ ಜೀಪ್‌ಗಳಲ್ಲಿ ಉಪ್ಪಿನಂಗಡಿಗೆ ಆಗಮಿಸಿ, ಠಾಣೆಗೆ ಧಾವಿಸಿ ಬಂದರಾದರೂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಬ್ಬಂದಿ ತಿಳಿಸಿದ ಬಳಿಕ ಠಾಣೆಗೆ ಮುತ್ತಿಗೆ ಯೋಜನೆ ಮುಂದೂಡಿದರು. 24 ಗಂಟೆಯೊಳಗೆ ಆರೋಪಿಗಳ ಬಂಧನವಾಗದಿದ್ದರೆ  ಪ್ರತಿಭಟನೆ ಅನಿವಾರ್ಯ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಗಂಧ ಅಕ್ರಮ ಸಾಗಾಟ:
ಐದು ವರ್ಷ ಸಜೆ
ಉಡುಪಿ: ಶ್ರೀಗಂಧದ ಕಳ್ಳಸಾಗಾಟದ ಅಪರಾಧಿಗಳಿಗೆ ಜಿಲ್ಲಾ ಸತ್ರ ನ್ಯಾಯಾಲಯ 5 ವರ್ಷ ಸಜೆ ಮತ್ತು ರು. 50 ಸಾವಿರ ದಂಡ ವಿಧಿಸಲಾಗಿದೆ.  ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮದ ಸುರೇಂದ್ರ ಕುಲಾಲ (33), ಪ್ರಶಾಂತ ಮೊಗವೀರ (30) ಹಾಗೂ ತಲ್ಲೂರು ಗ್ರಾಮದ ಸಂತೋಷ ದೇವಾಡಿಗ (26) ಎಂಬವರು ವಂಡ್ಸೆ ಹೋಬಳಿಯ ಅಗ್ರೆಬೈಲು ಕ್ರಾಸ್ ಎಂಬಲ್ಲಿ ಶಂಕರನಾರಾಯಣ ವಿಭಾಗ 1ರ ಮೀಸಲು ಅರಣ್ಯದಲ್ಲಿ 14 ಕೆ.ಜಿ. ಶ್ರೀಗಂಧದ ಕೊರಡುಗಳನ್ನು 2 ಬೈಕ್‌ಗಳಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ, ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ಗಸ್ತು ಸಂಚಾರಿ ಸಮಯದಲ್ಲಿ ಪತ್ತೆ ಹಚ್ಚಿದ್ದರು. ಈ ಸಂಬಂಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಪ್ರಕರಣ ಸಾಬೀತಾಗಿದ್ದರಿಂದ ಅಪರಾಧಿಗಳಿಗೆ ಅ. 5ರಂದು ಶಿಕ್ಷೆ ವಿಧಿಸಿದ್ದಾರೆ. ಸರ್ಕಾರಿ ಪರವಾಗಿ ಸರ್ಕಾರಿ ಅಭಿಯೋಜಕ ಟಿ.ಎಸ್. ಜಿತೂರಿ ವಾದಿಸಿದ್ದರು.
ಕಳವಾದ ಸ್ಕೂಟರ್ ಪಂಕ್ಚರ್ ಆಗಿ ಪತ್ತೆ
ವಿಟ್ಲ: ರಸ್ತೆ ಬದಿ ನಿಲ್ಲಿಸಿದ ಸ್ಕೂಟರ್ ಬುಧವಾರ ಕಳವಾಗಿ ನಂತರ ಟೈಯರ್ ಪಂಕ್ಚರ್ ಆದ ಸ್ಥಿಯಲ್ಲಿ ಪತ್ತೆಯಾದ ಘಟನೆ ಗುರುವಾರ ನಡೆದಿದೆ. ಮುಳಿಯದ ವೆಂಕಟಕೃಷ್ಣ ಶರ್ಮ ಬುಧವಾರ ಸಂಜೆ 3 ಗಂಟೆ ಸುಮಾರಿಗೆ ಕೇಪು ಗ್ರಾಮದ ಉಬರು ಎಂಬಲ್ಲಿ ರಸ್ತೆ ಬದಿಯಲ್ಲಿ ತಮ್ಮ ಸ್ಕೂಟರ್ ನಿಲ್ಲಿಸಿ, ಹತ್ತಿರದ ಮನೆಗೆ ತೆರಳಿದ್ದರು.  ಸಂಜೆ 5ರ ವೇಳೆಗೆ ವಾಪಾಸಾದಾಗ ಸ್ಕೂಟರ್ ನಾಪತ್ತೆಯಾಗಿತ್ತು. ಈ ಬಗ್ಗೆ ತಕ್ಷಣ ಠಾಣೆಗೆ ದೂರು ನೀಡಿದ್ದರು.  ಗುರುವಾರ ಸಂಜೆ ಅಳಿಕೆ ಗ್ರಾಮದ ಆದಾಳದಲ್ಲಿ ಹಿಂದಿನ ಟೈಯರ್ ಪಂಕ್ಚರ್ ಆದ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ಸ್ಕೂಟರ್ ನಿಂತಿತ್ತು ಎನ್ನಲಾಗಿದೆ. ಹತ್ತಿರದ ಮನೆಯವರು ವೆಂಕಟಕೃಷ್ಣ ಶರ್ಮಗೆ ಮಾಹಿತಿ ನೀಡಿದ್ದಾರೆ. ಆದರೂ ವಾಹನದ ಟೂಲ್ ಬಾಕ್ಸ್ ಕಳವಾಗಿದೆ.
ಸಾಬೂನು ದಾಸ್ತಾನು
ಕೊಠಡಿಯಿಂದ ಕಳವು
ಮಂಗಳೂರು: ಉಳ್ಳಾಲದ ಮರ್ಕೋನ್ ಓವರ್‌ಸೀಸ್ ಸಾಬೂನು ದಾಸ್ತಾನು ಕೊಠಡಿಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೊತ್ತದ ಸೊತ್ತು ಕಳವು ಮಾಡಿದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.  ಕಲ್ಲಾಪು ಬಳಿಯ ಚೆಂಬುಗುಡ್ಡೆ ಶಾಕೀರ್ ಅಹ್ಮದ್, ಇತರ ಮೂವರ ಮಾಲಕತ್ವದ ಸಾಬೂನು ದಾಸ್ತಾನು ಕಂಪನಿಯಲ್ಲಿ 35 ಮಂದಿ ಗುತ್ತಿಗೆಯಲ್ಲಿ, 15 ಮಂದಿ ಕಾಯಂ ಕೆಲಸಗಾರರಿದ್ದಾರೆ. ಕೆಲಸಗಾರರು ಬಕ್ರೀದ್ ಹಬ್ಬ ಸಮೀಪಿಸುತ್ತಿರುವುದರಿಂದ ತುರ್ತಾಗಿ ಸಾಬೂನು ವಿತರಿಸಿದ ರು. 9,24,000ನ್ನು ಗುರುವಾರ ಸಂಜೆ ಶಾಕೀರ್ ಅಹ್ಮದ್‌ಗೆ ನೀಡಿದ್ದರು. ಅದನ್ನು ಡ್ರಾಯರ್‌ನಲ್ಲಿಟ್ಟು ಬೀಗ ಹಾಕಿ ಹೋಗಿದ್ದರು.  ರಾತ್ರಿ ಕಿಟಕಿಯ ಕಬ್ಬಿಣದ ಬಲೆ ತುಂಡು ಮಾಡಿದ ಕಳ್ಳರು ಒಳಪ್ರವೇಶಿಸಿ ಮೂರು ಡ್ರಾಯರ್‌ನ್ನು ಜಾಲಾಡಿದ್ದಾರೆ. ಸಿಸಿ ಕ್ಯಾಮರಾದ ವಯರ್, ಸರ್ವರ್ ಸಂಪರ್ಕವನ್ನು ತುಂಡರಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಕಚೇರಿ ತೆರೆಯಲು ಶಾಕೀರ್ ಅಹ್ಮದ್ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಶಕೀರ್ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನದಳ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಹಣ ನೀಡಿದ ದಿನವೇ ಡ್ರಾಯರ್‌ನ್ನು ಜಾಲಾಡಿ ಕಳ್ಳತನ ಮಾಡಿರುವುದನ್ನು ಗಮನಿಸಿದರೆ ಈ ಬಗ್ಗೆ ಮಾಹಿತಿ ಇದ್ದವರೇ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.
ಪೆರೋಲ್‌ನಲ್ಲಿ ಹೊರಬಂದು ಜೈಲು ಸೇರದೆ ಪರಾರಿಯಾಗಿದ್ದ ಇಸುಬು ಮೈಲಾರ್ ಸೆರೆ
ಬಂಟ್ವಾಳ: ಪೆರೋಲ್‌ನಲ್ಲಿ ಬಂದು ಮರಳಿ ಜೈಲು ಸೇರದೆ ಪರಾರಿಯಾಗಿದ್ದ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಪಾಣೆಮಂಗಳೂರು ಸಮೀಪದ ಮೆಲ್ಕಾರ್ ರಂಗೇಲು ನಿವಾಸಿ ಇಸುಬು ಮೈಲಾರ್ ಯಾನೆ ಯೂಸುಫ್ ಮುಸ್ಲಿಯಾರ್‌ನನ್ನು ಕೇರಳದಲ್ಲಿ ಬಂಟ್ವಾಳ ಪೊಲೀಸರು  ಬಂಧಿಸಿದ್ದಾರೆ.  
ಇಲ್ಲಿನ ಪೊಲೀಸ್ ತಂಡ ಆತನನ್ನು ಕರೆತರಲು ಕೆಲ ದಿನಗಳ ಹಿಂದೆ ಕೇರಳಕ್ಕೆ ತೆರಳಿ ಅಲ್ಲಿನ ಪೊಲೀಸರ ಸಹಯೋಗದೊಂದಿಗೆ ಮಂಪುರದ ಮಸೀದಿ ಬಳಿ ನಿಂತಿದ್ದ ವೇಳೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.  ಇದೀಗ ಮತ್ತೆ ಪೊಲೀಸರಿಂದ ಬಂಧಿತನಾಗಿರುವ ಇಸುಬು ಮೈಲಾರ್‌ನನ್ನು ಶುಕ್ರವಾರ ಬಿ.ಸಿ. ರೋಡಿನ ನ್ಯಾಯಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು 15 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಇಸುಬು ಮೈಲಾರ್ 2005ರಲ್ಲಿ ತನ್ನ ಎರಡನೇ ಹೆಂಡತಿ ಮರಿಯಮ್ಮ ಎಂಬಾಕೆಯನ್ನು ಕೊಂದು ವಿವಸ್ತ್ರಗೊಳಿಸಿ ಬಜ್ಪೆ ಠಾಣಾ ವ್ಯಾಪ್ತಿಯ ಗುರುಪುರ ಫಲ್ಗುಣಿ ನದಿಗೆಸೆದಿದ್ದ. ಈ ಬಗ್ಗೆ ಬಜ್ಪೆ ಪೊಲೀಸರು ಐಪಿಸಿ 302, 201 ಅಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಪ್ರಕರಣದ ತನಿಖೆ ನಡೆಸಿದ ಮಂಗಳೂರು ಸೆಶನ್ಸ್ ನ್ಯಾಯಾಲಯ ಆರೋಪಿಯ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಹೊರಡಿಸಿತ್ತು. ನ್ಯಾಯಾಲಯದ ತೀರ್ಪಿನ ಪ್ರಕಾರ ಬೆಳಗಾವಿ ಹಿಂಡಲಗಾ ಜೈಲ್‌ನ ಶಿಕ್ಷೆ ಅನುಭವಿಸುತ್ತಿದ್ದ ಇಸುಬು ಇತ್ತೀಚೆಗೆ ತಾಯಿಗೆ ಸೌಖ್ಯವಿಲ್ಲ ಎಂಬ ನೆಪವೊಡ್ಡಿ 45 ದಿನಗಳ ಪೆರೋಲ್ ಮೇಲೆ ಜುಲೈ 20 ರಂದು ಊರಿಗೆ ಬಂದಿದ್ದ. ಸೆ. 4 ರಂದು ಮರಳಿ ಜೈಲು ಸೇರಬೇಕಾದ ಇಸುಬು ಜೈಲು ಸೇರದೆ ಪರಾರಿಯಾಗಿದ್ದ. ಈ ಬಗ್ಗೆ ಜೈಲು ಸುಪರಿಂಟೆಂಡೆಂಟ್ ಸೆ. 7 ರಂದು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ನಗರ ಪೊಲೀಸರು ಈತನ ಪತ್ತೆಗಾಗಿ ಬಲೆ ಬೀಸಿದ್ದರು.
ವೃತ್ತಿಯಲ್ಲಿ ಧರ್ಮಗುರುವಾಗಿದ್ದ ಇಸುಬು ಮೈಲಾರ್ ಕೈ ಹಿಡಿದ ಪತ್ನಿಯನ್ನೇ ಅಮಾನುಷವಾಗಿ ಕೊಂದು, ನಗ್ನಗೊಳಿಸಿ ನದಿಗೆಸೆಯುವಂತಹ ಹೇಯ ಕೃತ್ಯವೆಸಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. ಮೂರು ಬಾರಿ ಪೆರೋಲ್ ಪಡೆದು ಊರಿಗೆ ಬಂದಿದ್ದ ಈತ ನಾಲ್ಕನೇ ಬಾರಿ ಪೆರೋಲ್‌ನಲ್ಲಿ ಬಂದವ ಮರಳಿ ಜೈಲು ಸೇರದೆ ಪರಾರಿಯಾಗಿದ್ದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement