ಚಂಡಮಾರುತ: ಕರಾವಳಿ ಕಟ್ಟೆಚ್ಚರ
ಮಂಗಳೂರು: ಒಡಿಶಾ ಮತ್ತು ಆಂಧ್ರಕ್ಕೆ ಫೈಲಿನ್ ಚಂಡಮಾರುತ ಆಗಮಿಸಿದ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿಯಲ್ಲೂ ಕಟ್ಟೆಚ್ಚರಕ್ಕೆ ಹವಾಮಾನ ಇಲಾಖೆ ಶನಿವಾರ ಎಚ್ಚರಿಕೆ ನೀಡಿದೆ.
ಮುಂದಿನ 24 ಗಂಟೆಯಲ್ಲಿ ಕರಾವಳಿಯ ಈಶಾನ್ಯ ಭಾಗದಲ್ಲಿ ಗಂಟೆಗೆ 44-45 ಕಿ.ಮೀ. ವೇಗದಲ್ಲಿ ಪ್ರಬಲ ಗಾಳಿ ಬೀಸುವ ಸಾಧ್ಯತೆ ಇದ್ದು, ಮೀನುಗಾರಿಕೆಗೆ ತೆರಳಿದವರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಕರಾವಳಿ ಜಿಲ್ಲಾಡಳಿತಗಳಿಗೆ ಮುನ್ನೆಚ್ಚರಿಕೆ ನೀಡಿದೆ. ಮೀನುಗಾರರಿಗೆ ದಡಕ್ಕೆ ಮರಳುವಂತೆ ಸೂಚನೆ ನೀಡಲಾಗಿದ್ದು, ಕರಾವಳಿ ಕಾವಲು ಪೊಲೀಸ್, ಕೋಸ್ಟ್ಗಾರ್ಡ್ನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ಚಂಡಮಾರುತ ಪ್ರಭಾವದಿಂದ ಜಿಲ್ಲೆಯಲ್ಲಿ ಶನಿವಾರ ದಿನವಿಡೀ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಮಧ್ಯಾಹ್ನ, ಸಂಜೆ ತುಂತುರು ಮಳೆ ಸುರಿದಿದೆ. ಬೆಳಗ್ಗೆ ಸ್ವಲ್ಪ ಹೊತ್ತು ಬಿಸಿಲು ಕಾಣಿಸಿದ್ದು ಬಿಟ್ಟರೆ ಮತ್ತೆ ಮೋಡ ಮುಸುಕಿದ ವಾತಾರಣ. ಗ್ರಾಮಾಂತರ ಪ್ರದೇಶಗಳ ಅಲ್ಲಲ್ಲಿ ತುಂತುರು ಹನಿ ಕಾಣಿಸಿದ ಬಗ್ಗೆ ವರದಿಯಾಗಿದೆ.