ಪೊಲೀಸ್ ಸರ್ಕಲ್
ಪರಮೇಶ್ವರ ಗೌಡ ಕೊಲೆ ಆರೋಪಿಗಳ ಪತ್ತೆಗೆ 15 ದಿನ ಗಡುವು
ಸುಳ್ಯ: ಬಾಳುಗೋಡು ಗ್ರಾಮದ ಉಪ್ಪುಕಳ ಪರಮೇಶ್ವರ ಗೌಡರ ಹತ್ಯೆ ನಡೆದು 25 ದಿನ ಕಳೆದರೂ ಆರೋಪಿಗಳ ಪತ್ತೆಯಾಗಿಲ್ಲ. ಇನ್ನು 15 ದಿನಗಳ ಒಳಗಾಗಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬಾಳುಗೋಡಿನ ನಾಗರಿಕ ಹಿತರಕ್ಷಣಾ ಸಮಿತಿ ಎಚ್ಚರಿಕೆ ನೀಡಿದೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಮುಖಂಡರಾದ ವಸಂತ ಕುಮಾರ್ ಕಿರಿಭಾಗ ಮತ್ತು ದಯಾನಂದ ಕಟ್ಟೆಮನೆ, ಕುಗ್ರಾಮದಲ್ಲಿ ನಡೆದಿರುವ ಈ ಕೊಲೆಯಿಂದ ಮತ್ತು ಕೊಲೆಗಾರರ ಪತ್ತೆಯಾಗದೆ ಇರುವುದರಿಂದ ಊರವರಿಗೆ ಆತಂಕವುಂಟಾಗಿದೆ. ಈಗಾಗಲೇ ಪೊಲೀಸ್ ಅಧಿಕಾರಿಗಳಿಗೆ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಲು ಮನವಿ ಸಲ್ಲಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ನಿತಿನ್ ಬಾಳುಗೋಡು, ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಅಚ್ಚುತ ಗುತ್ತಿಗಾರು, ಜಯರಾಮ ಆಲ್ಕಬೆ, ತೇಜಕುಮಾರ್ ಮಂಡೋಕಜೆ, ಆನಂದ ಉಪ್ಪುಕಳ, ಉಮೇಶ್ ಕೊತ್ನಡ್ಕ, ವಸಂತ ಬೆಟ್ಟುಮಕ್ಕಿ ಇದ್ದರು.
ಪರಮೇಶ್ವರ ಗೌಡ ಕೊಲೆ ಆರೋಪಿಗಳ ಪತ್ತೆಗೆ 15 ದಿನ ಗಡುವು
ಸುಳ್ಯ: ಬಾಳುಗೋಡು ಗ್ರಾಮದ ಉಪ್ಪುಕಳ ಪರಮೇಶ್ವರ ಗೌಡರ ಹತ್ಯೆ ನಡೆದು 25 ದಿನ ಕಳೆದರೂ ಆರೋಪಿಗಳ ಪತ್ತೆಯಾಗಿಲ್ಲ. ಇನ್ನು 15 ದಿನಗಳ ಒಳಗಾಗಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬಾಳುಗೋಡಿನ ನಾಗರಿಕ ಹಿತರಕ್ಷಣಾ ಸಮಿತಿ ಎಚ್ಚರಿಕೆ ನೀಡಿದೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಮುಖಂಡರಾದ ವಸಂತ ಕುಮಾರ್ ಕಿರಿಭಾಗ ಮತ್ತು ದಯಾನಂದ ಕಟ್ಟೆಮನೆ, ಕುಗ್ರಾಮದಲ್ಲಿ ನಡೆದಿರುವ ಈ ಕೊಲೆಯಿಂದ ಮತ್ತು ಕೊಲೆಗಾರರ ಪತ್ತೆಯಾಗದೆ ಇರುವುದರಿಂದ ಊರವರಿಗೆ ಆತಂಕವುಂಟಾಗಿದೆ. ಈಗಾಗಲೇ ಪೊಲೀಸ್ ಅಧಿಕಾರಿಗಳಿಗೆ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಲು ಮನವಿ ಸಲ್ಲಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ನಿತಿನ್ ಬಾಳುಗೋಡು, ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಅಚ್ಚುತ ಗುತ್ತಿಗಾರು, ಜಯರಾಮ ಆಲ್ಕಬೆ, ತೇಜಕುಮಾರ್ ಮಂಡೋಕಜೆ, ಆನಂದ ಉಪ್ಪುಕಳ, ಉಮೇಶ್ ಕೊತ್ನಡ್ಕ, ವಸಂತ ಬೆಟ್ಟುಮಕ್ಕಿ ಇದ್ದರು.
ಅನಿಲ ಟ್ಯಾಂಕರ್- ಪಿಕಪ್ ಡಿಕ್ಕಿ
ಉಪ್ಪಿನಂಗಡಿ: ಇಲ್ಲಿನ ಸಮೀಪದ ನೆಲ್ಯಾಡಿಯ ಕೋಲ್ಪೆ ಎಂಬಲ್ಲಿ ರಾ.ಹೆ. 75 ರಲ್ಲಿ ಶನಿವಾರ ಅಡುಗೆ ಅನಿಲದ ಟ್ಯಾಂಕರ್ ಮತ್ತು ಪಿಕಪ್ ವಾಹನದ ನಡುವೆ ಡಿಕ್ಕಿ ಸಂಭವಿಸಿ, ಪಿಕಪ್ ಚಾಲಕ ಗಾಯಗೊಂಡ ಘಟನೆ ನಡೆದಿದೆ. ಘಟನೆಯಿಂದ ವಾಹನ ಜಖಂಗೊಂಡಿದ್ದು, ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಿಗೆ ಹಾಲಿನ ವಾಹನ ಡಿಕ್ಕಿ: ಸಾವು
ಮಂಗಳೂರು: ಕಣ್ಣೂರು ವೀರನಗರ ಬಳಿ ಕಾರ್ನಲ್ಲಿ ಕುಳಿತುಕೊಳ್ಳುತ್ತಿದ್ದ ವೇಳೆ ಹಾಲಿನ ವಾಹನ ರಿವರ್ಸ್ ಚಲಿಸಿ ಡಿಕ್ಕಿಯಾಗಿ ಜಯಾನಂದ ಮೇಲಾಂಟ (66) ಮೃತಪಟ್ಟಿದ್ದಾರೆ. ಜಯಾನಂದ ಕಾರ್ ಬಾಗಿಲು ತೆರೆದು ಒಳಗೆ ಇನ್ನೇನು ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ಹಾಲಿನ ವಾಹನ ಚಾಲಕ ನಿರ್ಲಕ್ಷ್ಯದಿಂದ ಹಿಮ್ಮುಖವಾಗಿ ಚಲಿಸುತ್ತಿದ್ದ, ಬೊಬ್ಬೆ ಹೊಡೆಯುತ್ತಿದ್ದಂತೆ ಡಿಕ್ಕಿ ಹೊಡೆದಿದ್ದಾನೆ.
ಬಸ್- ಕಾರು ಡಿಕ್ಕಿ
ಉಪ್ಪಿನಂಗಡಿ: ಇಲ್ಲಿನ ಸಮೀಪದ ನೇಲ್ಯಡ್ಕ ಎಂಬಲ್ಲಿ ರಾ.ಹೆ. 75 ರಲ್ಲಿ ಶನಿವಾರ ಖಾಸಗಿ ಬಸ್ ಮತ್ತು ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡ ಘಟನೆ ನಡೆದಿದೆ. ಧರ್ಮಸ್ಥಳದಿಂದ ಬೆಂಗಳೂರಿನತ್ತ ಸಂಚರಿಸುತ್ತಿದ್ದ ಖಾಸಗಿ ಬಸ್ ನೇಲ್ಯಡ್ಕದಲ್ಲಿ ಎದುರುಗಡೆಯಿಂದ ಬಂದ ಕಾರಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಘಟನೆಯಿಂದ ಯಾರಿಗೂ ಗಂಭೀರ ಸ್ವರೂಪದ ಗಾಯಗಳಾಗಿಲ್ಲ ಎನ್ನಲಾಗಿದ್ದು, ಈ ಬಗ್ಗೆ ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.
ಯುವಕ ಆತ್ಮಹತ್ಯೆ
ಮಣಿಪಾಲ: ಸಾಲ ಬಾಧೆಯಿಂದ ಇಲ್ಲಿನ ಹೆರ್ಗ ಗ್ರಾಮದ ವಿಜಯನಗರ ಕೋಡಿ ಎಂಬಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಮುಂಜಾನೆ ನಡೆದಿದೆ. ಮೃತರು ರಮೇಶ್ (30), ಈತ ಇಲ್ಲಿನ ನಿವಾಸಿ ಸುಶೀಲಬಾಯಿ ಎಂಬವರ ಮಗ, ಅವರು ಸೊಸೈಟಿಯೊಂದರಲ್ಲಿ ಆಟೋ ರಿಕ್ಷಾ ಖರೀದಿಸಲು ಸಾಲ ಪಡೆದಿದ್ದು, ಹಿಂದಕ್ಕೆ ಕಟ್ಟಲಾಗದೆ ತನ್ನ ಮನೆಯಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತರ ತಾಯಿ ಸುಶೀಲಬಾಯಿ ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಶವ ಪತ್ತೆ
ಕೋಟ: ಇಲ್ಲಿನ ಕೋಡಿ ಕನ್ಯಾನ ಗ್ರಾಮದ ಕೋಡಿತಲೆ ಅಳಿವೆಬಾಗಿಲಲ್ಲಿ ಶನಿವಾರ ಸಂಜೆ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಮೃತ ವ್ಯಕ್ತಿಗೆ ಸುಮಾರು 35 ರಿಂದ 45 ವರ್ಷ ಪ್ರಾಯವಾಗಿದ್ದು, 2- 3 ದಿನಗಳ ಹಿಂದೆ ಸಮುದ್ರಕ್ಕೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರು ನೀಡಿದ ದೂರಿನಂತೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಿಗೆ ಹಾನಿ: ದೂರು
ವಿಟ್ಲ: ಬಾಗಿದ ತೆಂಗಿನ ಮರವನ್ನು ನೇರ ನಿಲ್ಲಿಸಿ ಕೊಡುತ್ತೇವೆ ಎಂದು ಅಧಿಕ ದರ ವಸೂಲಿ ಮಾಡಲು ಸಿದ್ಧರಾಗಿ, ಕೊನೆಗೆ ಅಷ್ಟು ಹಣ ಸಿಗದೆ ಇದ್ದಾಗ ಕಾರಿಗೆ ಹಾನಿ ಮಾಡಿ ಸೇಡು ತೀರಿಸಿಕೊಂಡ ಘಟನೆ ಗುರುವಾರ ಇಲ್ಲಿನ ವೈದ್ಯರೊಬ್ಬರ ಮನೆಯಲ್ಲಿ ನಡೆದಿದೆ. ಮಲಯಾಳಂ ಭಾಷೆ ಮಾತನಾಡುವ ಮನು ಮತ್ತು ಇನ್ನೊಬ್ಬ ವ್ಯಕ್ತಿ ವಿಟ್ಲದ ವೈದ್ಯರ ಮನೆಗೆ ಬಂದು, ಬಾಗಿದ ತೆಂಗಿನ ಮರ ನೆಟ್ಟಗೆ ಮಾಡಿಕೊಡುತ್ತೇವೆ. ಒಂದು ಅಡಿಗೆ ರು. 22 ದರ ನೀಡಬೇಕು ಎಂದಿದ್ದರು. ಮರುದಿನ ಬೆಳಗ್ಗೆ ಅವರಿಬ್ಬರು ತಂತಿಯೊಂದಿಗೆ ಬಂದಿದ್ದರು. ಒಟ್ಟು ರು. 1000 ಮೀರಲಾರದು ಎಂದು ವೈದ್ಯರು ಹೇಳಿ ಆಸ್ಪತ್ರೆಗೆ ತೆರಳಿದ್ದರು. ಕೇವಲ ಒಂದೇ ಗಂಟೆಯಲ್ಲಿ ತಂತಿಯನ್ನು ಕಟ್ಟಿಕೊಟ್ಟು ರು. 4250 ಕೊಡಿ ಎಂದು ಇಬ್ಬರು ವ್ಯಕ್ತಿಗಳು ಬೇಡಿಕೆ ಸಲ್ಲಿಸಿದರು. ಚರ್ಚೆ, ಮಾತುಕತೆ ನಡೆಸಿ ರು. 1500 ನೀಡಲಾಗಿತ್ತು. ವೈದ್ಯರು ಬೆಳಗ್ಗೆ ಎದ್ದು ಕಾರಿನ ಬಳಿಗೆ ಬಂದಾಗ ಕಾರಿನ ಹಿಂಭಾಗಕ್ಕೆ ಬರೆ ಎಳೆದು ಹಾನಿ ಮಾಡಲಾಗಿತ್ತು. ಪೊಲೀಸರಿಗೆ ದೂರು ನೀಡಲಾಗಿದೆ.
ಹೋರಿಗಳ ಸಾಗಾಟ: ಮೂವರ ಸೆರೆ
ವಿಟ್ಲ: ಕಸಾಯಿಖಾನೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಐದು ಹೋರಿಗಳನ್ನು ಪತ್ತೆ ಹಚ್ಚಿದ ವಿಟ್ಲ ಠಾಣಾಧಿಕಾರಿ ಮಾಧವ ಕೂಡ್ಲು ನೇತೃತ್ವದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಮಾಣಿ ಗ್ರಾಮದ ಬುಡೋಳಿ ಎಂಬಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಕೆ. ಹೊಸೂರು ಸಮೀಪದ ಬೇಲೂರು ನಿವಾಸಿ ರಿಜ್ವಾನ್ (25), ನಯಝ್ (23) ಹಾಗೂ ಚೆಂಬಗುಡ್ಡೆ ನಿವಾಸಿ ಶೌಕತ್ (26) ಬಂಧಿತ ಆರೋಪಿಗಳು. ಇವರು ಹಾಸನ ಜಿಲ್ಲೆಯ ಹಳೆಬೀಡು ಎಂಬಲ್ಲಿದ್ದ ಐದು ಹೋರಿಗಳು ಖರೀದಿಸಿ ಪಿಕಪ್ ಮಾದರಿಯ ವಾಹನದಲ್ಲಿ ಸಾಗಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ವಿಟ್ಲ ಠಾಣಾಧಿಕಾರಿ ಮಾಧವ ಕೂಡ್ಲು, ಸಿಬ್ಬಂದಿ ಚಿದಾನಂದ ರೈ, ಪ್ರವೀಣ್ ಕುಮಾರ್, ಪ್ರವೀಣ್ ರೈ, ವೆಂಕಟೇಶ್, ಚಾಮಯ್ಯ, ಜನಾರ್ದನ ಹಾಗೂ ಚಾಲಕ ನಾರಾಯಣ ಅವರನ್ನೂಳಗೊಂಡ ತಂಡ ಮಾಣಿ ಗ್ರಾಮದ ಬುಡೋಳಿ ಎಂಬಲ್ಲಿ ಪತ್ತೆ ಹಚ್ಚಿದ್ದಾರೆ. ಹಾಸನದಿಂದ ತೊಕ್ಕೂಟ್ಟು ಎಂಬಲ್ಲಿಯ ಕಸಾಯಿಖಾನೆಗೆ ಮಾಂಸದ ಉದ್ದೇಶದಿಂದ ಈ ಹೋರಿಗಳನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ.
ಬಸ್ಗಳೆರಡು ಮುಖಾಮುಖಿ: ಹಲವು ಮಂದಿಗೆ ಗಾಯ
ಪುತ್ತೂರು: ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ಸುಗಳ ನಡುವೆ ಡಿಕ್ಕಿ ಸಂಭವಿಸಿ ಹಲವು ಮಂದಿ ಗಾಯಗೊಂಡ ಘಟನೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಕಬಕ ಸಮೀಪದಲ್ಲಿ ಶನಿವಾರ ಸಂಜೆ ನಡೆದಿದೆ. ಪುತ್ತೂರಿನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಹಾಗೂ ಮಂಗಳೂರಿನಿಂದ ಪುತ್ತೂರಿಗೆ ಆಗಮಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಗಳು ಮುಖಾಮುಖಿ ಡಿಕ್ಕಿಯಾಗಿತ್ತು. ಅಪಘಾತದಲ್ಲಿ ಉಭಯ ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 40ನ ಮಂದಿಗೆ ಗಾಯಗಳಾಗಿದ್ದು, ಈ ಪೈಕಿ 7 ಮಂದಿಗೆ ಗಂಭೀರ ಗಾಯಗಳಾಗಿದೆ. ಪ್ರೇಮಾ, ಖಾಸಗಿ ಬಸ್ನ ಚಾಲಕ ನಿತಿನ್, ಕೃತಿ ಬೆಳ್ಳಾರೆ, ಇಸ್ಮಾಯಿಲ್ ಇರ್ದೆ, ಹರೀಶ್ ರಾವ್ ಮೂಡುಬಿದಿರೆ, ಪವನ್ ಪಂಜ ಗಂಭೀರ ಗಾಯಗೊಂಡವರು. ಮಮತಾ ಬಂಟ್ವಾಳ, ಸುಜಾತ ಕೊಡ್ಡಪ್ಪಾಡಿ, ಜಯಶ್ರೀ ಬುಳೇರಿಕಟ್ಟೆ, ಯಶೋಧಾ, ಜಾವಿದ್ ಕೂರ್ನಡ್ಕ, ಅಸ್ಮಾ ಮಂಜಿ ಹಾಗೂ 3 ವರ್ಷದ ಬಾಲಕಿ ಫಾತಿಮತ್ ಸಫೀರಾ ಮತ್ತಿತರರು ಸಣ್ಣ ಪುಟ್ಟ ಗಾಯಗೊಳಿಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶಾರ್ಟ್ ಸರ್ಕ್ಯೂಟ್: ಆಕಸ್ಮಿಕ ಬೆಂಕಿ
ಮೂಲ್ಕಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ ಕೊಪ್ಪಲದ ಚೀಂಕ್ರ ಪೂಜಾರಿಯವರ ಮನೆಯ ಮೇಲಂತಸ್ತಿನಲ್ಲಿ ಶನಿವಾರ ಬೆಳಗ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಹತ್ತಿಕೊಂಡಿದ್ದು ಮೇಲಂತಸ್ತಿನಲ್ಲಿದ್ದ ಅಡಕೆ, ತೆಂಗಿನಕಾಯಿ ಮತ್ತು ಮಕ್ಕಳ ಹಳೆಯ ಪುಸ್ತಕಗಳು ಬೆಂಕಿಗೆ ಅಹುತಿಯಾಗಿದೆ. ಬೆಂಕಿ ಹತ್ತಿಕೊಂಡಿದ್ದ ಕೂಡಲೇ ಸ್ಥಳೀಯರು ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಮನೆಯವರು ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದ್ದು ಅಗ್ನಿಶಾಮಕದಳದವರು ಆಗಮಿಸಿ ಬೆಂಕಿ ನಂದಿಸಿದರು.