ಸರಕು ಸಾಗಾಟ ಕಂಟೈನರ್‌ನಿಂದ ನಾಲ್ಕು ಬಂಡಲ್ ನಿಗೂಢ ನಾಪತ್ತೆ
ಉಪ್ಪಿನಂಗಡಿ: ಸರಕು ಸಾಗಾಟದ ವಾಹನವೊಂದರಿಂದ ಅತ್ಯಮೂಲ್ಯ ದಾಖಲೆಗಳನ್ನು ಹೊಂದಿದ್ದ ನಾಲ್ಕು ಬಂಡಲ್‌ಗಳು ನಿಗೂಢ ನಾಪತ್ತೆಯಾಗಿರುವ ಬಗ್ಗೆ ತಿಳಿದು ಬಂದಿದೆ.
ಮಣಿಪಾಲದಲ್ಲಿ ಮುದ್ರಿತಗೊಂಡು ಬೆಂಗಳೂರಿಗೆ ಕೊಂಡೊಯ್ದು ಅಲ್ಲಿಂದ ಹೊರ ರಾಜ್ಯಕ್ಕೆ ಕಳುಹಿಸಬೇಕಾಗಿದ್ದ ಪ್ರಶ್ನೆಪತ್ರಿಕೆಗಳು ಈ ಬಂಡಲ್‌ಗಳಲ್ಲಿದ್ದವು ಎನ್ನಲಾಗಿದೆ. ಸರಕು ಸಾಗಾಟದ ಏಜೆನ್ಸಿಯ ವಾಹನದಲ್ಲಿ ಈ ಬಂಡಲ್‌ಗಳನ್ನು ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು. ಈ ಸಂದರ್ಭ ಹಲವು ಕಟ್ಟುಗಳು ಕಂಟೈನರ್‌ನಿಂದ ಅಚಾನಕ್ ಆಗಿ ಬಾಗಿಲು ತೆರೆಯಲ್ಪಟ್ಟು ಹೊರಗೆ ಬಿದ್ದಿದ್ದವು. ಇದರ ಅರಿವು ಬಾರದ ಚಾಲಕ ವಾಹನವನ್ನು ಬೆಂಗಳೂರು ತಲುಪಿಸಿದ ಬಳಿಕ ಪರಿಶೀಲಿಸಿದಾಗಲೇ ಹಲವು ಕಟ್ಟುಗಳು ಕಣ್ಮರೆಯಾಗಿರುವುದು ಕಂಡುಬಂದಿತ್ತು.
ಈ ಮಧ್ಯೆ, ಇದೇ ಸಂಸ್ಥೆಯ ಇನ್ನೊಂದು ವಾಹನ ಹಿಂದಿನಿಂದ ಬರುತ್ತಿದ್ದು, ಅದರ ಚಾಲಕ ರಸ್ತೆ ಮಧ್ಯೆ ಬಿದ್ದಿದ್ದ ಕಟ್ಟುಗಳನ್ನು ಪರಿಶೀಲಿಸಿದಾಗ ಅದು ತಮ್ಮ ಸಂಸ್ಥೆಗೆ ಸೇರಿದ ಸಾಗಾಟದ ಸರಕೆಂದು ತಿಳಿದು ಸುರಕ್ಷಿತವಾಗಿ ಬೆಂಗಳೂರಿನ ಕಚೇರಿಗೆ ತಲುಪಿಸಿದ್ದಾರೆ. ಆದರೂ ನಾಲ್ಕು ಕಟ್ಟುಗಳು ಕಣ್ಮರೆಯಾಗಿದ್ದು, ಅದು ಶಿರಾಡಿ ಪ್ರದೇಶದಲ್ಲಿ ಬಿದ್ದಿರುವ ಸಾಧ್ಯತೆಯನ್ನು ಅಂದಾಜಿಸಿ ಶನಿವಾರ ಪತ್ತೆ ಕಾರ್ಯ ನಡೆಸಲಾಯಿತು.
ಹೆದ್ದಾರಿಯಲ್ಲಿನ ಹೊಂಡಗಳಿಂದ ವಾಹನದೊಳಗೆ ಬಂಡಲ್‌ಗಳು ಅಲುಗಾಡುತ್ತಾ ಇದ್ದು, ಇದರಿಂದಾಗಿ ಬಾಗಿಲು ತೆರೆದು ಬಿದ್ದಿವೆ ಎನ್ನುವ ವಾಹನ ಸಿಬ್ಬಂದಿ ಹೇಳಿಕೆ ನಾನಾ ಶಂಕೆಗೆ ಕಾರಣವಾಗಿದೆ.