ಸುದ್ದಿ ಸಂಕ್ಷೇಪ
ನವರಾತ್ರಿ ಆಚರಣೆ: ಪ್ರಾಣಿ ಹಿಂಸೆ ನಿಷೇಧ
ಮಂಗಳೂರು: ಪ್ರಾಣಿಜೀವಿ ಕಾಯ್ದೆ ಸೆಕ್ಷನ್ 11 ಪ್ರಕಾರ ನವರಾತ್ರಿ ಆಚರಣೆ ವೇಳೆ ಯಾವುದೇ ಹಾವು ಅಥವಾ ಪ್ರಾಣಿಯನ್ನು ಹಿಂಸಾತ್ಮಕವಾಗಿ ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ವ್ಯಕ್ತಿಗತ ಅಥವಾ ಮೆರವಣಿಗೆಯಲ್ಲಿ ಇಂಥದ್ದೇನಾದರೂ ಕಂಡುಬಂದರೆ ತಕ್ಷಣ ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ಮಂಗಳೂರಿನ ಎನಿಮಲ್ ಕೇರ್ ಟ್ರಸ್ಟ್ ಜಿಲ್ಲಾಡಳಿತವನ್ನು ವಿನಂತಿಸಿದೆ.
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಲ್ಲಿಕಾ ಪ್ರಸಾದ್
ಮಂಗಳೂರು: ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆಯಾಗಿ ಪುತ್ತೂರಿನ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಆಯ್ಕೆಯಾಗಿದ್ದಾರೆ. ಶನಿವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಪ್ರತಾಪ್‌ಸಿಂಹ ನಾಯಕ್ ಈ ಆಯ್ಕೆ ಪ್ರಕಟಿಸಿದರು. ಮುಂದಿನ 3 ವರ್ಷ ಅವಧಿಗೆ ಮಲ್ಲಿಕಾ ಪ್ರಸಾದ್ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುವರು ಎಂದು ಜಿಲ್ಲಾ ವಕ್ತಾರ ಸತೀಶ್ ಪ್ರಭು ತಿಳಿಸಿದ್ದಾರೆ.
ಇಂದು ಆಯುಧ ಪೂಜೆ, ವಾಹನ ಪೂಜೆ
ಪುತ್ತೂರು: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ಬಾರಿಗೆ ಸಾಮೂಹಿಕ ಆಯುಧ ಪೂಜೆ ಮತ್ತು ವಾಹನ ಪೂಜೆಯನ್ನು ಹಮ್ಮಿಕೊಳ್ಳಲಾಗಿದ್ದು, ಅ.13ರಂದು 12 ಗಂಟೆಗೆ ಇಲ್ಲಿನ ದೇವರ ಗದ್ದೆಯಲ್ಲಿ ನಡೆಸಲಾಗುವುದು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಲವು ದೇವಸ್ಥಾನದಲ್ಲಿ ಈಗಾಗಲೇ ವಾಹನ ಪೂಜೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿಯೂ ವ್ಯವಸ್ಥಾಪನಾ ಸಮಿತಿ ವತಿಯಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸಂತೋಷ್ ಕುಮಾರ್, ಬುಜಂಗ ಗೌಡ, ಡಾ. ಸುಧಾ ಎಸ್ ರಾವ್, ಪ್ರಭಾ ಆಚಾರ್ಯ, ರಾಜೇಶ್ ಬನ್ನೂರು ಮತ್ತು ಕಾರ್ಯನಿರ್ವಹಣಾಧಿಕಾರಿ ಸಿ.ಯು. ಪೂವಪ್ಪ ಉಪಸ್ಥಿತರಿದ್ದರು.