ಹಂಗಾರಕಟ್ಟೆ: 18ರಂದು ಐರೋಡಿ ಸದಾನಂದ ಹೆಬ್ಬಾರ್ ಸಂಸ್ಮರಣೆ
ಹಂಗಾರಕಟ್ಟೆ: ಇಲ್ಲಿನ ಯಕ್ಷಗಾನ ಕಲಾಕೇಂದ್ರದ ಸಂಸ್ಥಾಪಕ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಮುಖ್ಯೋಪಾಧ್ಯಾಯ, ದಿ. ಐರೋಡಿ ಸದಾನಂದ ಹೆಬ್ಬಾರ್‌ರ ಸಂಸ್ಮರಣಾ ದಿನಾಚರಣೆ 18 ರಂದು ಸಂಜೆ ಗಂಟೆ 5ಕ್ಕೆ ನಡೆಯಲಿದೆ.
ಅಂದು ದಿ. ಹೆಬ್ಬಾರ್‌ರ ನೆನಪಿನಲ್ಲಿ ಸದಾನಂದ ಪ್ರಶಸ್ತಿ ಪ್ರದಾನ ಸಮಾರಂಭವು ಜರಗಲಿದೆ. ಈ ವರ್ಷದ ಪ್ರಶಸ್ತಿಯನ್ನು ಶಿರಸಿಯ ನಿವೃತ್ತ ಪ್ರಾಂಶುಪಾಲ, ಸಾಹಿತಿ, ಎಂ.ಎ. ಹೆಗಡೆಗೆ ನೀಡಿ ಪುರಸ್ಕರಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್, ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ, ಸಂಸದ ಜಯಪ್ರಕಾಶ ಹೆಗ್ಡೆ, ಮುದ್ದಣ್ಣ ಪ್ರತಿಷ್ಠಾನದ ಆಡಳಿತ ನಿರ್ದೇಶಕ ನಂದಳಿಕೆ ಬಾಲಕೃಷ್ಣ ರಾವ್ ಭಾಗವಹಿಸಲಿದ್ದು, ಕೋಣಿ ಶಿವಾನಂದ ಕಾರಂತರು ಸಂಸ್ಮರಣಾ ಭಾಷಣ ಮಾಡಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ವಿನೂತನ ಶೈಲಿಯ ವಾದ್ಯ ವೈಭವ ಎಂಬ ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ಭಾಗವತ್, ಅವಿನಾಶ್ ಹೆಬ್ಬಾರ್ ಪಾಲ್ಗೊಳ್ಳಲಿದ್ದಾರೆ.