ದೇವಳ ಸಮಿತಿಯಿಂದ ಅಗೌರವ: ಸಚಿವ ರೈ ಕಿಡಿ
ಉಪ್ಪಿನಂಗಡಿ: ಕಳೆದ ವಿಧಾನಸಭೆ ಚುನಾವಣೆ ವೇಳೆ ತಮ್ಮ ಆಪ್ತವರ್ಗ ಹೇಳಿಕೊಂಡಿದ್ದ ಹರಕೆಯನ್ವಯ ಸೇವೆ ಸಲ್ಲಿಸಲೆಂದು ಶನಿವಾರ ರಾಜ್ಯ ಅರಣ್ಯ ಸಚಿವ ರಮಾನಾಥ ರೈ ಸೌತಡ್ಕಕ್ಕೆ ಭೇಟಿ ನೀಡಿ ಮಹಾಗಣಪತಿ ದೇವರಿಗೆ ಅಷ್ಟೋತ್ತರ ಮತ್ತು ರಂಗಪೂಜೆ ಸೇವೆ ನೆರವೇರಿಸಿದರು.
ಸಚಿವರು ಶನಿವಾರ ಬೆಳಗ್ಗೆ 9 ಗಂಟೆಗೆ ಶ್ರೀ ಕ್ಷೇತ್ರಕ್ಕೆ ಸೇವೆ ಸಲ್ಲಿಸಲು ಬರುವುದಾಗಿ ಮುಂಜಾನೆಯೇ ಕಚೇರಿಗೆ ತಿಳಿಸಿದ್ದರೂ ಯಾವುದೇ ಪೂರ್ವ ಸಿದ್ಧತೆ ಮಾಡಿರಲಿಲ್ಲ. ಸಚಿವರು ಬರುವ ಅಲ್ಪ ಸಮಯದ ಮೊದಲು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ಈ ಬಗ್ಗೆ ತಿಳಿಸಲಾಯಿತು.
ಸಚಿವರು ಕ್ಷೇತ್ರಕ್ಕೆ ಆಗಮಿಸಿದ ಮೇಲೂ ಇಲ್ಲಿನ ಪೂಜಾ ವಿಧಿ ವಿಧಾನಗಳ ಬಗ್ಗೆ ಯಾವುದೇ ಶಿಷ್ಟಾಚಾರ ತಿಳಿಸದೆ ಇರುವ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ತುರ್ತು ಕಾರ್ಯ ನಿಮಿತ್ತ ಸಚಿವರು ಬೇರೆ ಕಡೆಗೆ ತೆರಳಲಿರುವುದನ್ನು ಮೊದಲೇ ತಿಳಿಸಿದ್ದರಾದರೂ ಯಾವುದೇ ಪೂರಕ ಸ್ಪಂದನ ನೀಡದ್ದನ್ನು ಗಮನಿಸಿದ ಸಚಿವರು ಕ್ಷೇತ್ರದಿಂದ ತೆರಳಲನುವಾದರು.
ಭಕ್ತರ ನಿರ್ಲಕ್ಷಿಸಬೇಡಿ: 'ಕ್ಷೇತ್ರದಲ್ಲಿ ಬರುವ ಯಾವುದೇ ಭಕ್ತಾದಿಗಳನ್ನು ಅಲಕ್ಷಿಸಬೇಡಿ. ಸಚಿವರಿಗೆ ಈ ರೀತಿ ಅಗೌರವ ತೋರುವವರು ಇತರ ಭಕ್ತರನ್ನು ಎಷ್ಟು ನಿರ್ಲಕ್ಷಿಸಲಾರರು? ಮುಂದೆ ಈ ರೀತಿ ಕ್ಷೇತ್ರಕ್ಕೆ ಬರುವ ಭಕ್ತಾದಿಗಳನ್ನು ನಿರ್ಲಕ್ಷಿಸಬೇಡಿ' ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ಸಚಿವರು ಕಿವಿ ಮಾತು ಹೇಳಿದರು. ಬಳಿಕ ತನಗಾಗಿ ಹೇಳಿದ ಸೇವೆ ಸಲ್ಲಿಸಿ ನಿರ್ಗಮಿಸಿದರು.