ನದಿ ತಿರುವಿನ ಬಾಧಕ ಕುರಿತು ವಿಧಾನಸಭೆಯಲ್ಲಿ ಮಾಹಿತಿ
ಬೆಳ್ತಂಗಡಿ: ನೇತ್ರಾವತಿ ನದಿ ತಿರುವಿನ ಬಾಧಕಗಳ ಬಗ್ಗೆ ವಿಧಾನಸಭೆಯ ಎಲ್ಲ ಶಾಸಕರಿಗೆ ಜಲತಜ್ಞ ಶ್ರೀಪಡ್ರೆ ಮೂಲಕ ಮನವರಿಕೆ ಮಾಡಿಕೊಡಲಾಗುವುದು ಎಂದು ಶಾಸಕ ಕೆ.ವಸಂತ ಬಂಗೇರ ಹೇಳಿದ್ದಾರೆ.
ಸೋಮವಾರ ಬೆಳ್ತಂಗಡಿಯಲ್ಲಿ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ವತಿಯಿಂದ ನೇತ್ರಾವತಿ ನದಿ ಮತ್ತು ಉಪನದಿ ಎತ್ತಿನಹೊಳೆ ತಿರುವು ಯೋಜನೆ ವಿರುದ್ಧ ಬೃಹತ್ ಪ್ರತಿಭಟನಾ ಜಾಥಾ ಮತ್ತು ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ನದಿ ತಿರುವಿನ ಬಗ್ಗೆ ನಾನೊಬ್ಬನೇ ಮಾತನಾಡಿದರೆ ಸಾಲದು, ಉಭಯ ಜಿಲ್ಲೆಗಳ ಎಲ್ಲ ಶಾಸಕರು, ಸಂಸದರು ದನಿ ಎತ್ತಬೇಕು. ಹಾಗಾದರೆ ಮಾತ್ರ ಇಂತಹ ಯೋಜನೆಗಳು ನಮ್ಮ ಜಿಲ್ಲೆಗೆ ಕಾಲಿಡಲಾರವು. ನೇತ್ರಾವತಿ ನದಿ ತಿರುವಿನ ಬಗ್ಗೆ ಹಾಗೂ ಬರ ಪೀಡಿತ ಪ್ರದೇಶಗಳಲ್ಲಿ ಪರ್ಯಾಯ ನೀರಿನ ಯೋಜನೆಗಳ ಬಗ್ಗೆ ಶ್ರೀ ಪಡ್ರೆಯವರಿಗೆ ಸಮಗ್ರ ಮಾಹಿತಿ ಇದ್ದು, ಅವರಿಂದ ವಿಧಾನಸಭೆಯಲ್ಲಿ ಸಚಿತ್ರವಾಗಿ ಮಾಹಿತಿ ನೀಡುವ ವ್ಯವಸ್ಥೆ ಬಗ್ಗೆ ಮುಖ್ಯಮಂತ್ರಿಯಲ್ಲಿ ಚರ್ಚಿಸುತ್ತೇನೆ ಎಂದರು.
ವೈಜ್ಞಾನಿಕ ಅರಿವು ಅಗತ್ಯ: ಯೋಜನೆಯ ಭಾಧಕಗಳು ಮತ್ತು ಪರ್ಯಾಯಗಳ ಬಗ್ಗೆ ಮಾತನಾಡಿದ ಹಿರಿಯ ಪತ್ರಕರ್ತ ಜಲತಜ್ಞ ಶ್ರೀಪಡ್ರೆ, ಈ ಯೋಜನೆಯಿಂದ ನಮಗೂ ನೀರಿಲ್ಲ, ಘಟ್ಟ ಪ್ರದೇಶದವರಿಗೂ ನೀರಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಯೋಜನೆ ಬಗ್ಗೆ ಭಾವನಾತ್ಮಕವಾಗಿ ಮಾತನಾಡುವುದಕ್ಕಿಂತ ವೈಜ್ಞಾನಿಕ ಅರಿವು ಮುಖ್ಯ. ರಾಜಾಸ್ಥಾನದಲ್ಲಿ ನದಿ ಪುನರುಜ್ಜೀವನ ಮಾಡಿದಂತೆ ಇಲ್ಲಿಯೂ ಆಗಬೇಕು. ಮಳೆಯ ನೀರನ್ನು ಸಂಗ್ರಹಿಸುವ ಕಾರ್ಯ ಆಗಬೇಕು. ನೇತ್ರಾವತಿ ನದಿ ತಿರುವು ಯೋಜನೆ ಎಂಜಿನಿಯರ್‌ಗಳ ಕನಸಾಗಿದೆ ಅಷ್ಟೆ ಎಂದರು. ನೀರಿನ ಬವಣೆ ಬಂದಾಗ ನಾವು ಬದಲಿ ವ್ಯವಸ್ಥೆ ಬಗ್ಗೆ ಯೋಚನೆ ಮಾಡುತ್ತೇವೆ. ಆದರೆ ಶಾಶ್ವತ ವ್ಯವಸ್ಥೆ ಬಗ್ಗೆ ಯೋಚಿಸುವುದಿಲ್ಲ. ಅಂಕಿ ಅಂಶಗಳ ಮಾಯಾಲೋಕವನ್ನು ಮಾತ್ರ ಈ ಯೋಜನೆ ಸೃಷ್ಟಿಸುತ್ತದೆ ಎಂದರು.
ರಾಜಕಾರಣಿಗಳ ಕಿಸೆ ತುಂಬಿಸುವ ಯೋಜನೆ: ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್ ಮಾತನಾಡಿ, ಯೋಜನೆ ಕೇವಲ ರಾಜಕಾರಣಿಗಳು ಮತ್ತು ಎಂಜಿನಿಯರ್‌ಗಳ ಕಿಸೆ ತುಂಬಿಸುವ ಯೋಜನೆ ಆಗಿದೆಯೇ ಹೊರತು ಬರಗಾಲ ಪೀಡಿತ ಜನರಿಗೆ ನೀರುಣಿಸುವ ಯೋಜನೆಯಾಗಿಲ್ಲ. ಅಂದು ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭ ಬೆಳ್ತಂಗಡಿಗೆ ಬಂದಿದ್ದ ಸಿದ್ದರಾಮಯ್ಯ 'ಈ ಯೋಜನೆಗೆ ಸರ್ಕಾರದಲ್ಲಿ ಹಣವೆಲ್ಲಿದೆ? ಇದು ನಡೆಯುವ ಯೋಜನೆ ಅಲ್ಲ' ಎಂದಿದ್ದರು. ಈಗ ಮುಖ್ಯಮಂತ್ರಿ ಏನೆನ್ನುತ್ತಾರೆ ಎಂದು ಪ್ರಶ್ನಿಸಿದರು.
ಕೃಷಿಕರ ವೇದಿಕೆ ಅಧ್ಯಕ್ಷ ವಿಠಲ ಶೆಟ್ಟಿ ಪಾದೂರು ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಅಧ್ಯಕ್ಷ ಕೇಶವ ಎಂ., ಜಿ.ಪಂ. ಸದಸ್ಯೆ ಸಿ.ಕೆ.ಚಂದ್ರಕಲಾ, ಕರಾವಳಿ ಮಹಿಳಾ ಜಾಗೃತಿ ವೇದಿಕೆ ಅಧ್ಯಕ್ಷ ಮುಮ್ತಾಜ್, ತಾ.ಪಂ. ಮಾಜಿ ಸದಸ್ಯ ಮುಕುಂದ ಸುವರ್ಣ ಮತ್ತಿತರರು ಇದ್ದರು.
ದ.ಕ. ಪರಿಸರಾಸಕ್ತರ ಒಕ್ಕೂಟ ಅಧ್ಯಕ್ಷ ಉಮೇಶ್ ನಿರ್ಮಲ್ ಸ್ವಾಗತಿಸಿದರು. ಟ್ರಸ್ಟಿ ನಾರಾಯಣ ಕಿಲಂಗೋಡಿ ನಿರ್ಣಯ ಮಂಡಿಸಿದರು. ಟ್ರಸ್ಟ್ ಕಾರ್ಯದರ್ಶಿ ಜಯಪ್ರಕಾಶ್ ಭಟ್ ಸಿ.ಎಚ್. ವಂದಿಸಿದರು. ಉಪಾಧ್ಯಕ್ಷೆ ವಿದ್ಯಾ ನಾಯಕ್ ನಿರೂಪಿಸಿದರು.