ರಸ್ತೆ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರ ಅಸ್ತವ್ಯಸ್ತ
ಬಂಟ್ವಾಳ: ಲಾರಿಯೊಂದು ರಸ್ತೆ ಮಧ್ಯದಲ್ಲೇ ಕೆಟ್ಟು ನಂತ ಪರಿಣಾಮ ಹೆದ್ದಾರಿ ಸಂಚಾರಕ್ಕೆ ಅಡ್ಡಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಪಾಣೆಮಂಗಳೂರು ಸಮೀಪದ ಮೆಲ್ಕಾರ್ ಜಂಕ್ಷನ್ನಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಮಂಗಳೂರಿನಿಂದ ಪುತ್ತೂರು ಕಡೆಗೆ ಪ್ರಯಾಣಿಸುತ್ತಿದ್ದ ಲಾರಿಯೊಂದು ಹಠಾತ್ ತಾಂತ್ರಿಕ ವೈಫಲ್ಯಕ್ಕೀಡಾಗಿ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲೇ ನಿಂತುಬಿಟ್ಟಿದೆ. ಪರಿಣಾಮ ಮೊದಲೇ ಸಂಚಾರ ನಿಬಿಡ ಮೆಲ್ಕಾರ್ ಜಂಕ್ಷನ್ನಲ್ಲಿ ಹೆದ್ದಾರಿ ಸಂಚಾರಕ್ಕೆ ತೀವ್ರ ತೊಂದರೆಯಾಯಿತು. ಕಳೆದ ಕೆಲವು ತಿಂಗಳಿನಿಂದ ಇಲ್ಲಿನ ಹೆದ್ದಾರಿ ಮಧ್ಯೆ ಡಾಂಬರು ಎದ್ದು ಹೋಗಿ ಅಲ್ಲಲ್ಲಿ ಹೊಂಡಗಳು ನಿರ್ಮಾಣಗೊಂಡಿವೆ. ಈ ಹೆದ್ದಾರಿ ಹೊಂಡದಲ್ಲೇ ಲಾರಿ ಸಿಲುಕಿ ನಿಂತಿದೆ. ಭಾನುವಾರ ಆಯುಧ ಪೂಜೆ ಪ್ರಯುಕ್ತ ಜನ ಹಾಗೂ ವಾಹನ ಸಂಚಾರ ಹೆಚ್ಚಾಗಿದ್ದರಿಂದ ಮೆಲ್ಕಾರ್ ಜಂಕ್ಷನ್ನಲ್ಲಿ ಟ್ರಾಫಿಕ್ ಕಿರಿಕಿರಿ ಜಾಸ್ತಿಯಾಗಿತ್ತು. ಹೆದ್ದಾರಿ ಮಧ್ಯೆ ಲಾರಿ ನಿಂತಿದ್ದರಿಂದ ಮತ್ತಷ್ಟು ಟ್ರಾಫಿಕ್ ಅವ್ಯವಸ್ಥೆಗೆ ಕಾರಣವಾಯಿತು.