ಶ್ರೀಕ್ಷೇತ್ರ ಧರ್ಮಸ್ಥಳ ತೇಜೋವಧೆ ವಿರುದ್ಧ ಕ್ರಮಕ್ಕೆ ಆಗ್ರಹ
ಬೆಳ್ತಂಗಡಿ: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಆರೋಪಿಗಳು ಯಾರೇ ಇರಲಿ, ಅವರನ್ನು ಬಂಧಿಸುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡಬೇಕು. ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಿಯಾದರೂ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಈ ಪ್ರಕರಣವನ್ನು ನೆಪವಾಗಿಸಿಕೊಂಡು ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ತೇಜೋವಧೆ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಸೋಮವಾರ ನಡೆದ ಗ್ರಾಮಸ್ಥರ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು, 'ಶ್ರೀಕ್ಷೇತ್ರದಲ್ಲಿ ಯಾವುದೇ ಅರಾಜಕತೆ ಇಲ್ಲ. ಇಲ್ಲಿ ಯಾವುದೇ ದುಷ್ಕೃತ್ಯಗಳು ನಡೆಯುತ್ತಿಲ್ಲ. ಇದು ಪವಿತ್ರ ಕ್ಷೇತ್ರವಾಗಿದ್ದು, ಕ್ಷೇತ್ರದ ಪಾವಿತ್ರ್ಯತೆ ಬಗ್ಗೆ ಅನಗತ್ಯ ಗೊಂದಲವೆಬ್ಬಿಸುತ್ತಿರುವ ಶಕ್ತಿಗಳ ವಿರುದ್ಧ ಐಕ್ಯತೆಯಿಂದ ಹೋರಾಟ ಮಾಡಲು ಧರ್ಮಸ್ಥಳದ ಗ್ರಾಮಸ್ಥರು ಸಿದ್ಧರಿದ್ದೇವೆ' ಎಂದು ಘೋಷಿಸಿದರು.
ಇಡೀ ಧರ್ಮಸ್ಥಳ ಗ್ರಾಮವು ಮೃತ ಸೌಜನ್ಯಳ ಪರವಾಗಿದ್ದರೂ, ವಿನಾಕಾರಣ ಧರ್ಮಸ್ಥಳದ ನಾಗರಿಕರು ಹಾಗೂ ಡಾ. ಹೆಗ್ಗಡೆಯವರ ಮೇಲೆ ಮತ್ತು ಅವರ ಕುಟುಂಬಸ್ಥರ ಮೇಲೆ ಮಾಡಿರುವ ವ್ಯವಸ್ಥಿತ ಸುಳ್ಳು ಆರೋಪಗಳನ್ನು ಸಭೆಯಲ್ಲಿ ಖಂಡಿಸಲಾಯಿತು. ಗ್ರಾಮಸ್ಥರ ಪರವಾಗಿ ಪ್ರಕರಣದ ಬಗ್ಗೆ ತನಿಖೆ ಮತ್ತು ಕಾನೂನು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಗ್ರಾಮ ಪಂಚಾಯಿತಿಯನ್ನು ಒತ್ತಾಯಿಸಛಲಾಯಿತು.
ಆರೋಪ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಲಾಯಿತು. ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷೆ ಗೀತಾ, ಗ್ರಾಮಸ್ಥರ ಪರವಾಗಿ ಉದ್ಯಮಿ ಚಂದ್ರಹಾಸ ವೇದಿಕೆಯಲ್ಲಿದ್ದರು. ನ್ಯಾಯವಾದಿ ಕೇಶವ ಗೌಡ ಬೆಳಾಲು, ಗ್ರಾ.ಪಂ. ಸದಸ್ಯ ಚಂದನ್ ಪ್ರಸಾದ್ ಕಾಮತ್, ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಶ್ರೀನಿವಾಸ ರಾವ್, ನಾರಾಯಣ ನೂರಿತ್ತಾಯ, ಬಾಲಕೃಷ್ಣ ಪೂಜಾರಿ, ವಿಶ್ವನಾಥ ಶೆಟ್ಟಿ ಅಭಿಪ್ರಾಯಗಳನ್ನು ಮಂಡಿಸಿದರು. ಬಳಿಕ ಗ್ರಾಮಸ್ಥರೆಲ್ಲರೂ ಶ್ರೀ ಮಂಜುನಾಥ ಸ್ವಾಮಿ ದೇವಾಲಯ, ಅಣ್ಣಪ್ಪ ಗುಡಿಯ ಎದುರು ಪ್ರಾರ್ಥನೆ ಸಲ್ಲಿಸಿದರು.