ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುದ್ದಿ ಸಂಕ್ಷೇಪ

Mainashree
Updated On : 15 Oct 2013, 11:16 am

ಬರೆಗೆ ಲಾರಿ ಡಿಕ್ಕಿ: ಚಾಲಕ ಗಂಭೀರ
ವಿಟ್ಲ: ಟಿಪ್ಪರ್ ಲಾರಿಯೊಂದು ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದು ಬಳಿಕ ರಸ್ತೆ ಬದಿಯ ಬರೆಗೆ ಡಿಕ್ಕಿ ಹೊಡೆದ ಪರಿಣಾಮ ಟಿಪ್ಪರ್ ಚಾಲಕ ಗಂಭೀರ ಗಾಯಗೊಂಡ ಘಟನೆ ಮಾಣಿ- ಪುತ್ತೂರು ರಸ್ತೆಯ ಮಿತ್ತೂರು ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ. ಗಾಯಗೊಂಡವರನ್ನು ಹನುಮಂತ ಎಂದು ಗುರುತಿಸಲಾಗಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಬಕ ಕಡೆಯಿಂದ ಮಾಣಿ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಲಾರಿ, ಮುಂದಿನಿಂದ ತೆರಳುತ್ತಿದ್ದ ವಾಹನವನ್ನು ಓವರ್‌ಟೇಕ್ ಮಾಡುವ ವೇಳೆ ಎದುರಿನಿಂದ ಬರುತ್ತಿದ್ದ ಈಚರ್ ಲಾರಿಯನ್ನು ತಪ್ಪಿಸುವ ಭರದಲ್ಲಿ ಆ ಲಾರಿಯ ಬದಿಗೆ ಡಿಕ್ಕಿ ಹೊಡೆದು ಬಳಿಕ ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆಯಿತು. ಅಪಘಾತದ ತೀವ್ರತೆಗೆ ಟಿಪ್ಪರ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಈಚರ್ ಲಾರಿ ಹಿಂಬದಿ ಕೂಡ ಹಾನಿಗೊಂಡಿದೆ. ಗಾಯಾಳುವನ್ನು ಸ್ಥಳೀಯರು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಟಿಪ್ಪರ್ ಲಾರಿ ರಸ್ತೆಗೆ ಅಡ್ಡವಾಗಿ ನಿಂತಿದ್ದರಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ವಿಟ್ಲ ಪೊಲೀಸರು ಧಾವಿಸಿ ಸಂಚಾರ ಸುಗಮಗೊಳಿಸಿದ್ದು, ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.
ರಕ್ಷಣೆಗೆ ಮನವಿ
ಮಂಗಳೂರು: ಬಕ್ರಿದ್ ಹಬ್ಬ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯ ನಿರ್ಭೀತಿಯಿಂದ ಹಬ್ಬ ಆಚರಿಸಲು ಮತ್ತು ಕಾನೂನು ಬದ್ಧವಾಗಿ ಪ್ರಾಣಿ ಬಲಿದಾನ ಕರ್ಮ ನಿರ್ವಹಿಸಲು ಸಂರಕ್ಷಣೆ ನೀಡುವಂತೆ ಮುಸ್ಲಿಂ ಜಮಾ ಅತ್ ಕೌನ್ಸಿಲ್ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಉಡುಪಿ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ದಿಲ್ಲೆಗಳ ಜಮಾತ್  ಕೌನ್ಸಿಲ್ ನಿಯೋಗ ಮನವಿ ಸಲ್ಲಿಸಿತು. ಸಂಯುಕ್ತ ಜಮಾಅತ್ ಖಾಝಿ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ನಿಯೋಗ ನೇತೃತ್ವ ವಹಿಸಿದ್ದರು.
ಕಲಾ ಗ್ಯಾಲರಿ,
ರಂಗಮಂದಿರ
ಪೂರ್ಣಗೊಳಿಸಲು ಒತ್ತಾಯ
ಮಂಗಳೂರು: 27 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲಾ ರಂಗಮಂದಿರ ಮತ್ತು ಕಲಾ ಗ್ಯಾಲರಿ ಶೀಘ್ರವಾಗಿ ನಿರ್ಮಿಸಿಕೊಡುವಂತೆ ಕರಾವಳಿ ಚಿತ್ರಕಲಾ ಚಾವಡಿ ಸಮಿತಿಯು ಇತ್ತೀಚೆಗೆ ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರಿಗೆ ಮನವಿ ಸಲ್ಲಿಸಿತು. ಕರಾವಳಿ ಚಿತ್ರ ಕಲಾವಿದರ ಹಲವಾರು ವರ್ಷಗಳ ಬಹು ಬೇಡಿಕೆಯ ಸರ್ಕಾರಿ ಸ್ವಾಮ್ಯದ 4 ಸಾವಿರ ಚದರ ಅಡಿ ವಿಸ್ತೀರ್ಣದ ಕಲಾ ಗ್ಯಾಲರಿಯನ್ನು ಬೊಂದೆಲ್‌ನಲ್ಲಿ ನಿರ್ಮಾಣವಾಗಲಿರುವ ರಂಗಮಂದಿರೊಂದಿಗೆ ಮಾಡಲಾಗುವುದು ಎಂದು ಈ ಹಿಂದೆ ಮನವಿ ಮಾಡಿದ್ದ ಸಂದರ್ಭ ಜಿಲ್ಲಾಧಿಕಾರಿಯಾಗಿದ್ದ ಡಾ.ಎನ್.ಎಸ್. ಚೆನ್ನಪ್ಪ ಗೌಡ ಭರವಸೆ ನೀಡಿದ್ದಾರೆ. ಆದರೆ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದ್ದರಿಂದ  ಸರ್ಕಾರಿ ಯೋಜನೆಯನ್ನು ಪೂರ್ಣಗೊಳಿಸುವಂತೆ ಸಮಿತಿ ಅಧ್ಯಕ್ಷ ವಿಷ್ಣು ಶೇವಗೂರ್ ಮನವಿ ಮಾಡಿದ್ದಾರೆ.
ಕುಸಿದು ಬಿದ್ದು ವ್ಯಕ್ತಿ ಸಾವು
ಉಡುಪಿ: ಕುಸಿದು ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಲ್ಲಿನ ಮಹಿಷಮರ್ದಿನಿ ದೇವಸ್ಥಾನ ಬಳಿ ಭಾನುವಾರ ನಡೆದಿದೆ. ಮೃತರು ಜಗದೀಶ (48), ಇವರು ಅಕ್ಕನ ಮಗುವಿನ ಹುಟ್ಟುಹಬ್ಬಕ್ಕೆ ಹೋಗಿದ್ದವರು ಮನೆಯ ಸಮೀಪದಲ್ಲಿರುವ ಮಹಿಷಮರ್ದಿನಿ ದೇವಸ್ಥಾನ ಬಳಿಯ ರಸ್ತೆಯಲ್ಲಿ ನಿಂತಿದ್ದವರು ಕುಸಿದು ಬಿದ್ದರು. ತಕ್ಷಣ ಅವರನ್ನು ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮೃತರ ಸಹೋದರ ಅಶೋಕ್ ರಾವ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಚರಂಡಿಗುರುಳಿದ ರಿಕ್ಷಾ: ಮೂವರಿಗೆ ಗಾಯ
ಕುಂದಾಪುರ: ಆಟೋರಿಕ್ಷಾ ಚರಂಡಿಗೆ ಬಿದ್ದು, ಚಾಲಕ ಹಾಗೂ ಆಟೋದಲ್ಲಿ ಕುಳಿತಿದ್ದ ಮೂವರು ಪ್ರಯಾಣಿಕರು ಗಾಯಗೊಂಡ ಘಟನೆ ಇಲ್ಲಿನ ಕಂದಾವರ ಗ್ರಾಮದ ಉಳ್ಳೂರು ಜನತಾ ಕಾಲೋನಿನ ಬಳಿ ಭಾನುವಾರ ನಡೆದಿದೆ. ಗಾಯಗೊಂಡವರನ್ನು ನಿತೀಶ್ ಮೊಗವೀರ, ರಾಮ ಪೂಜಾರಿ, ರೇವತಿ ಹಾಗೂ ಚಾಲಕ ಮಹಾಲಿಂಗ ಎಂದು ಗುರುತಿಸಲಾಗಿದೆ. ಮಹಾಲಿಂಗ ಅವರು ಆಟೋವನ್ನು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ರಸ್ತೆಗೆ ಅಡ್ಡಲಾಗಿ ಬಂದ ಜಿಂಕೆಯನ್ನು ತಪ್ಪಿಸಲು ಒಮ್ಮೆಗೇ ಬ್ರೇಕ್ ಹಾಕಿದ ಪರಿಣಾಮ ಆಟೋ ರಸ್ತೆಯ ಬಲಭಾಗದ ಚರಂಡಿಗೆ ಬಿದ್ದು ಈ ಆನಾಹುತ ಸಂಭವಿಸಿದೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಅಪಸ್ಮಾರ ಪೀಡಿತ ವ್ಯಕ್ತಿ ಸಾವು
ಕಾಪು: ಅಪಸ್ಮಾರ ಪೀಡಿತ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಡೆದಿದೆ. ಕಟಪಾಡಿ ಆಸುಪಾಸಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ, ಮೂಲತಃ ಹಾಸನ ಕಡೆಯವನಾದ ದೇವರಾಜ್ (40) ಮೃತರು. ಭಾನುವಾರ ಕೋಟೆ ಗ್ರಾಮದ ಎಸ್‌ವಿಎಸ್ ಶಾಲೆಯ ಬಳಿ ನಡೆದುಕೊಂಡು ಹೋಗುವಾಗ ಅಪಸ್ಮಾರದಿಂದಾಗಿ ರಸ್ತೆಯ ಬದಿಯ ನೀರಿಗೆ ಕವುಚಿ ಬಿದ್ದು, ಏಳಲಾಗದೆ ಅಲ್ಲಿಯೇ ಮೃತಪಟ್ಟಿದ್ದಾರೆ. ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಡಿಕ್ಕಿ: ಪಾದಚಾರಿಗೆ ಗಾಯ
ಕುಂದಾಪುರ: ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಕಾರು ಡಿಕ್ಕಿಯಾಗಿ ಗಾಯಗೊಂಡ ಘಟನೆ ಹಟ್ಟಿಯಂಗಡಿ ರೈಲ್ವೆ ಸೇತುವೆ ಸಮೀಪ ನಡೆದಿದೆ. ಗಾಯಗೊಂಡವರನ್ನು ಭಾಸ್ಕರ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರು ದಿನ ನಿತ್ಯದಂತೆ ತಮ್ಮ ಮನೆಯ ದನಗಳನ್ನು ಮೇಯಿಸಿಕೊಂಡು ಹಟ್ಟಿಯಂಗಡಿ ರೈಲ್ವೆ ಸೇತುವೆ ಬಳಿಯ ರಸ್ತೆ ದಾಟುತ್ತಿದ್ದಾಗ ತಲ್ಲೂರು ಕಡೆಯಿಂದ ಆರೋಪಿ ಚಂದ್ರಶೇಖರ ಎಂಬವರು ಕಾರನ್ನು ಅಜಾಗರೂಕತೆಯಿಂದ ರಸ್ತೆಯ ತೀರ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾರೆ. ತೀವ್ರವಾಗಿ ಗಾಯಗೊಂಡ ಭಾಸ್ಕರ್ ಅವರನ್ನು ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಭಾಸ್ಕರ ಶೆಟ್ಟಿ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ನದಿಯಲ್ಲಿ ಮುಳುಗಿ ಯುವಕ ಸಾವು
ಸುಬ್ರಹ್ಮಣ್ಯ: ಮೀನು ಹಿಡಿಯಲೆಂದು ತೆರಳಿದ ಯುವಕನೋರ್ವ ಕುಮಾರಧಾರ ನದಿಯಲ್ಲಿ ಮುಳುಗಿ ಸಾವಿಗೀಡಾದ ಘಟನೆ ಸೋಮವಾರ ನಡೆದಿದೆ. ನೂಚಿಲ ನಿವಾಸಿ ದಿ. ಸುಬ್ಬಪ್ಪ ನಾಯ್ಕರ ಪುತ್ರ ದಿನೇಶ್ (22) ಮೃತರು. ಕುಲ್ಕುಂದದ ಡಿಪೋ ಎಂಬಲ್ಲಿ ಸ್ನೇಹಿತರೊಂದಿಗೆ ಕುಮಾರಧಾರ ನದಿಯಲ್ಲಿ ಮೀನು ಹಿಡಿಯಲು ಹೋದಾಗ ಈ ಘಟನೆ ಸಂಭವಿಸಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃದ್ಧೆಯ  ಚಿನ್ನದ ಸರ ಸೆಳೆದು ಪರಾರಿ
ಮೂಲ್ಕಿ: ವೃದ್ಧೆಯ ಕುತ್ತಿಗೆಯಿಂದ ಚಿನ್ನದ ಸೆಳೆದು ಪರಾರಿಯಾದ ಘಟನೆ ಸೋಮವಾರ ಸಂಜೆ ಮೂಲ್ಕಿಯ ಕೊಕ್ಕರ್‌ಕಲ್ ಬಳಿಯ ಸಿಎಸ್‌ಐ ಚರ್ಚ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ ಸಮೀಪ ನಡೆದಿದೆ. ಆನಂದಿ ಅರಾನ್ಹ (77) ಎಂಬವರು ಚರ್ಚ್ ಬಳಿಯ ತಮ್ಮ ಮನೆಗೆ ಮೂಲ್ಕಿಯಿಂದ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿಕೊಂಡು ಬಂದ ಅಪರಿಚಿತ ವ್ಯಕ್ತಿಯೊಬ್ಬ ವಿಳಾಸ ಕೇಳುವ ನೆಪದಲ್ಲಿ ಆನಂದಿ ಅವರ ಕುತ್ತಿಗೆಯಲ್ಲಿದ್ದ ಒಂದೂವರೆ ಪವನ್‌ನ ಚಿನ್ನದ ಸರ ಎಳೆದು ಪರಾರಿಯಾಗಿದ್ದಾನೆ. ಚಿನ್ನದ ಸರ ರು. 40,000 ಮೌಲ್ಯದಾಗಿದ್ದು, ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರು ಮುಖಾಮುಖಿ: ತಾಯಿ-ಮಗ ಗಂಭೀರ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಉದನೆ ಎಂಬಲ್ಲಿ ಕಾರುಗಳೆರಡರ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ತಾಯಿ- ಮಗ ಗಂಭೀರವಾಗಿ ಗಾಯಗೊಂಡಿದ್ದಾರೆ. ಉದನೆಯ ಕುದ್ಕೋಳಿ ಮನೆ ಎಂಬಲ್ಲಿನ ಲಕ್ಷ್ಮಿ (55) ಮತ್ತವರ ಮಗ ಸುಜಯ್ (30) ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ತನ್ನ ಮನೆ ಕಡೆಗೆ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಬೆಂಗಳೂರು ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಪುತ್ತೂರು ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉರುಳಿದ ಟ್ಯಾಂಕರ್: ಇಬ್ಬರಿಗೆ ಗಾಯ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ರಾ.ಹೆ. 75ರಲ್ಲಿ ಅನಿಲ ಟ್ಯಾಂಕರ್ ಅಪಘಾತಕ್ಕೀಡಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ನಡೆದಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಟ್ಯಾಂಕರ್ ಬೆದ್ರೋಡಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಚರಂಡಿಗೆ ಮಗುಚಿ ಬಿತ್ತು. ಪರಿಣಾಮ ಟ್ಯಾಂಕರ್‌ನಲ್ಲಿದ್ದ ಚಾಲಕ ಷಣ್ಮುಗಂ (35) ಮತ್ತು ಮನೋಹರ್ ( 33) ಎಂಬಿಬ್ಬರು ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಾಳುಗಳಿಬ್ಬರೂ ತಮಿಳುನಾಡಿನ ನಿವಾಸಿಗರೆಂದು ತಿಳಿಯಲಾಗಿದೆ. ಪುತ್ತೂರು ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement