ಜನಪದ ಕ್ರೀಡೆ 'ಕಂಬಳ' ಮಾಹಿತಿ ದಾಖಲೀಕರಣಕ್ಕೆ ಸಿದ್ಧತೆ
ಕಾರ್ಕಳ: ಕರಾವಳಿಯ ರೈತಾಪಿ ವರ್ಗದ ಮನರಂಜನೆಯ ಅತ್ಯಾಕರ್ಷಕ ಜಾನಪದ ಕ್ರೀಡೆ ಕಂಬಳ ಕುರಿತು ದಾಖಲೆಗಳು ಅತೀ ವಿರಳ. ಈ ನಿಟ್ಟಿನಲ್ಲಿ ಮಾಹಿತಿ ದಾಖಲಿಸಲು ಅಗತ್ಯ ಸಿದ್ಧತೆ ಮಾಡಲಾಗಿದೆ. ಛಾಯಾಚಿತ್ರಗಾಹಕ, ತಂತ್ರಜ್ಞಾನಿ ರತ್ನಾಕರ್ ಸಹಯೋಗದೊಂದಿಗೆ ಕಂಬಳದ ಉಗಮ, ಸಾಧಕರು, ಅವರ ಜೀವನ ಶೈಲಿ, ಕಂಬಳಕ್ಕೆ ಕೊಡುಗೆಗಳ ಕುರಿತು ಮಾಹಿತಿ ಸಂಗ್ರಹದೊಂದಿಗೆ, ದಾಖಲೀಕರಣ ನಡೆಸಿ ಸಂಕ್ಷಿಪ್ತ ಪರಿಚಯದೊಂದಿಗೆ ಪ್ರಚಾರವನ್ನು ನೀಡುವುದರ ಮೂಲಕ ಮುಂದಿನ ಯುವಪೀಳಿಗೆಗೆ ಮಾಹಿತಿ ಹಾಗೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನೈಜ ಅರ್ಥದಲ್ಲಿ ಕಂಬಳವನ್ನು ಪರಿಚಯಿಸುವ ಸದುದ್ದೇಶದಿಂದ, ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಕಂಬಳದ ಸಾಧನೆಗಳೊಂದಿಗೆ, ಸುತ್ತಣ ಪರಿಸರದ, ದೈವ- ದೇವರುಗಳು, ಉದ್ಯೋಗ ವ್ಯವಹಾರಗಳನ್ನು ದಾಖಲೀಕರಿಸುವುದು ನಮ್ಮ ಉದ್ದೇಶ. ಹೀಗೆ ದಾಖಲೀಕರಿಸಿದ ವಿಷಯಗಳಲ್ಲಿ ಅತಿ ಮುಖ್ಯ ಘಟನೆಗಳನ್ನು ಸಂಗ್ರಹಿಸಿ ಆಯ್ದ ಸುಮಾರು 5 ರಿಂದ 6 ಕಂಬಳಗಳಲ್ಲಿ ಪ್ರಾಯೋಗಿಕವಾಗಿ, ಆಧುನಿಕ ತಂತ್ರಜ್ಞಾನಗಳ ಮೂಲಕ ಕಂಬಳೋತ್ಸವದ ಸಂದರ್ಭಗಳಲ್ಲಿ ಪ್ರಚಾರ ಮಾಡುವ ಉದ್ದೇಶವನ್ನು ಹೊಂದಿದೆ. ಈ ದಾಖಲೀಕರಣಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕಂಬಳ ಸಾಧಕರು ಮಾಲಿಕೆಯಲ್ಲಿ ವಸ್ತು ಸಂಗ್ರಹಾಲಯವೊಂದನ್ನು ಸ್ಥಾಪಿಸಿ ಶಾಶ್ವತವಾಗಿ ನೆನಪಿಸಿಕೊಳ್ಳುವಂತೆ ಮಾಡಬೇಕಿದೆ ಎಂದು ಕಂಬಳ ಅಕಾಡೆಮಿ ಸಂಚಾಲಕ ಕೆ. ಗುಣಪಾಲ ಕಡಂಬ ತಿಳಿಸಿದ್ದಾರೆ.