ಸಜಿಪನಡು: ಘನತ್ಯಾಜ್ಯ ಸಂಸ್ಕರಣೆ ಘಟಕಕ್ಕೆ ಡಿಸಿ ದಿಢೀರ್ ಭೇಟಿ
ಬಂಟ್ವಾಳ: ಇಲ್ಲಿನ ಪುರಸಭಾ ವತಿಯಿಂದ ಸಜಿಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ನಿರ್ಮಾಣವಾಗುತ್ತಿರುವ ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಮಂಗಳವಾರ ಜಿಲ್ಲಾಧಿಕಾರಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೈಕೋರ್ಟ್ ಆದೇಶದ ಪ್ರಕಾರ 2008ರಲ್ಲಿಯೇ ತ್ಯಾಜ್ಯ ಸಂಸ್ಕರಣಾ ಘಟಕದ ಕಾಮಗಾರಿ ಪೂರ್ಣಗೊಳ್ಳಬೇಕಿತ್ತಾದರೂ ಸ್ಥಳೀಯ ಪಂಚಾಯಿತಿ, ಸಾರ್ವಜನಿಕರ ವಿರೋಧ ಹಾಗೂ ಕೆಲವೊಂದು ರಾಜಕೀಯ ಜಂಜಾಟಗಳಿಂದ ಅದು ನೆನೆಗುದಿಗೆ ಬಿದ್ದಿತ್ತು. ಈ ಬಗ್ಗೆ ಸಜಿಪನಡು ಗ್ರಾಪಂನ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಧಾನಸೌಧದ ಸದನ ಸಮಿತಿಯನ್ನೂ ತಲುಪಿತ್ತು. ಇದೀಗ ಸದನ ಸಮಿತಿಯ ಸೂಚನೆಯಂತೆ ಡಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
2007ರಲ್ಲಿ ಸಜಿಪನಡು ಗ್ರಾಮ ಕಂಚಿನಡ್ಕ ಪದವು ಎಂಬಲ್ಲಿ ಸರ್ವೇ ಸಂಖ್ಯೆ 109 ಹಾಗೂ 110ರಲ್ಲಿ ಒಟ್ಟು 8 ಎಕರೆ ಸರ್ಕಾರಿ ಜಮೀನನ್ನು ಡಂಪಿಂಗ್ ಯಾರ್ಡ್‌ಗಾಗಿ ಪುರಸಭೆಯ ಹೆಸರಿನಲ್ಲಿ ಮೀಸಲಿರಿಸಲಾಗಿತ್ತು. ಇದಕ್ಕೆ ಈಗಾಗಲೇ 8 ಅಡಿ ಕಾಂಪೌಂಡ್ ಸೇರಿದಂತೆ ಸುಮಾರು 1.30 ಕೋಟಿ ಖರ್ಚು ಮಾಡಲಾಗಿದೆ. ಈ ಮಧ್ಯೆ ಸ್ಥಳೀಯ ಪಂಚಾಯಿತಿ ನಿವೇಶನ ರಹಿತರಿಗೆ ನಿವೇಶನ ಹಂಚಿದ್ದು, ನಿರ್ಗತಿಕರು ಅಲ್ಲಿ ಮನೆ ಕಟ್ಟಿ ವಾಸವಾಗಿದ್ದಾರೆ. ಸ್ಥಳದಲ್ಲಿ 150 ವಾಸ್ತವ್ಯದ ಮನೆಗಳು, ಮಸೀದಿ, ಶಾಲೆ ಇರುವ ಹಿನ್ನೆಲೆಯಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣಗೊಂಡರೆ ಪರಿಸರವಾಸಿಗಳಿಗೆ ತೀವ್ರ ತೊಂದರೆಯಾಗುತ್ತದೆ ಎಂದು ಆಕ್ಷೇಪಣಾ ಅರ್ಜಿಯನ್ನು ವಿಧಾನಸೌಧದ ಸದನ ಸಮಿತಿಯ ಮುಂದಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎನ್. ಪ್ರಕಾಶ್ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ್ದು, ಡಂಪಿಂಗ್ ಯಾರ್ಡ್‌ಗೆ ಮೀಸಲಾಗಿರಿಸಿದ್ದ ಸ್ಥಳದ 200 ಮೀಟರ್ ಸುತ್ತಳತೆಯಲ್ಲಿ ಸರ್ವೇ ಮಾಡಿಸಿ ವರದಿ ನೀಡುವಂತೆ ತಹಸೀಲ್ದಾರ್ ಬಿ.ಎಸ್. ಮಲ್ಲೇಸ್ವಾಮಿ ಅವರಿಗೆ ಸೂಚಿಸಿದ್ದಾರೆ. ತಹಸೀಲ್ದಾರ್ ವರದಿ ಆಧರಿಸಿ ಜಿಲ್ಲಾಧಿಕಾರಿ ಸದನ ಸಮಿತಿಗೆ ವರದಿ ಒಪ್ಪಿಸಲಿದ್ದಾರೆ.
ಜಿಪಂ ಸಿಇಒ ತುಳಸಿ ಮದ್ದಿನೇನಿ, ತಾಪಂ ಇಒ ವಿಶ್ವನಾಥ ಪೂಜಾರಿ, ಪುರಸಭಾ ಮುಖ್ಯಾಧಿಕಾರಿ ಆರ್.ವಿ. ಜತ್ತನ್ನ ಇದ್ದರು.
ಖಡ್ಗ ಪ್ರದರ್ಶನಕ್ಕೆ ಖಂಡನೆ
ಮಂಗಳೂರು: ಬಜಪೆ ಸುಂಕದಕಟ್ಟೆಯಲ್ಲಿ ನಡೆದ ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಖಡ್ಗ ಹಿಡಿದಿರುವುದನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಖಂಡಿಸಿದೆ. ಬಜಪೆ ಜನತೆಯನ್ನು ಭಯದ ವಾತಾವರಣದಲ್ಲಿರಿಸಲು, ಕೋಮು ಉದ್ವಿಗ್ನತೆಗೆ ಪ್ರಚೋದಿಸಲಾಗಿದೆ ಎಂದು ಪಿಎಫ್‌ಐ ಜಿಲ್ಲಾಧ್ಯಕ್ಷ ಎ.ಎ.ಅತಾವುಲ್ಲ ಆರೋಪಿಸಿದ್ದಾರೆ.