ವಿಧವೆಯರಿಗೆ ಸ್ವಾವಲಂಬನೆ ತರಬೇತಿ
ಮಂಗಳೂರು: ಕೇದಾರನಾಥ ಜಲಪ್ರಳಯ ಸಂದರ್ಭ ಇಡೀ ಹಳ್ಳಿಗಳಲ್ಲಿನ ಪುರುಷರು ಮೃತಪಟ್ಟಿದ್ದಾರೆ. ಅಲ್ಲಿನ ಎಲ್ಲ ಮಹಿಳೆಯರಿಗೆ ಸ್ವಾವಲಂಬಿ ಉದ್ಯೋಗ ತರಬೇತಿ, ವಿಧವೆಯರಿಗೆ ವಿವಾಹಕ್ಕೆ ರಾಷ್ಟ್ರ ಸೇವಿಕಾ ಸಂಸ್ಥೆ ಯೋಜನೆ ರೂಪಿಸಿದೆ ಎಂದು ರಾಷ್ಟ್ರೀಯ ಪ್ರಮುಖ ಸಂಚಾಲಕಿ ಶಾಂತ ಕುಮಾರಿ ಹೇಳಿದರು.
ಕೇದಾರನಾಥದಲ್ಲಿ ಅಕ್ಕಪಕ್ಕದ ಹಳ್ಳಿಗಳ ಪುರುಷರೆಲ್ಲ ಯಾತ್ರಾರ್ಥಿಗಳನ್ನು ಕುದುರೆಸಾರೋಟದಲ್ಲಿ ಕರೆದೊಯ್ಯುತ್ತಿದ್ದರು. ಎಲ್ಲರೂ ಮೃತಪಟ್ಟಿದ್ದಾರೆ. ಹೀಗಾಗಿ ಹಳ್ಳಿಗಳಲ್ಲಿ ಪುರುಷರೇ ಇಲ್ಲದಂತಾಗಿದೆ. ಅಂಥ 5 ಹಳ್ಳಿಗಳ ಮಹಿಳೆಯರಿಗೆ ನೆರವಿಗೆ ಯೋಜನೆ ಹಾಕಿದ್ದೇವೆ. ಎರಡು ಹಳ್ಳಿಗಳಿಗೆ ತೆರಿ ನೆರವು ನೀಡುತ್ತಿದ್ದೇವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಾತಿ, ಭೇದ ಇಲ್ಲದೆ ಮಹಿಳೆಯರಿಗೆ ವೇದಾಭ್ಯಾಸ, ಪೌರೋಹಿತ್ಯ ಕಲಿಸುತ್ತಿದ್ದೇವೆ. ಮಹಿಳೆಯರಿಗೆ ಆತ್ಮಸುರಕ್ಷಾ ಕಲೆ ಕಲಿಸುತ್ತೇವೆ. ಸಣ್ಣ ಪ್ರಾಯದವರಿಗೆ ಕಿಶೋರಿ ತರಬೇತಿ ನೀಡುತ್ತೇವೆ. ವಿಧವೆ ಮಹಿಳೆಯರು ಪೂಜೆ ಮಾಡುವುದು ಒಳ್ಳೆಯ ವಿಚಾರ ಎಂದರು.
ಡ್ಯಾನ್ಸ್ ಬಾರ್‌ಗಳಿಗೆ ತೆರಳುವುದರಿಂದ ಹೆಣ್ಣು ಮಕ್ಕಳ ಮೇಲಿನ ಅಪರಾಧ ಹೆಚ್ಚಾಗುತ್ತದೆ. ಹೆಣ್ಣುಮಕ್ಕಳು ಅರೆಬರೆ ಬಟ್ಟೆ ಹಾಕುವುದೂ ಕೂಡಾ ಅತ್ಯಾಚಾರಕ್ಕೆ ಒಂದು ಕಾರಣ. ಹಾಗೆಂದು ಅರೆಬರೆ ಬಟ್ಟೆ ಹಾಕಿದ್ದರೂ ಒಳ್ಳೆ ವ್ಯಕ್ತಿಗಳು ಅತ್ಯಾಚಾರ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸ್ವಾಮಿ ವಿವೇಕಾನಂದರು ಹೇಳಿದಂತೆ ಪುರುಷರು ಸ್ವಯಂ ನಿಯಂತ್ರಣ ಮಾಡಿಕೊಳ್ಳಬೇಕು ಎಂದರು.
ರಾಷ್ಟ್ರ ಸೇವಿಕಾ ಹಿಂದು ಮಹಿಳೆಯರ ಸಂಘಟನೆ. ಹಿಂದು ಎನ್ನುವುದು ಜೀವನ ಪದ್ಧತಿ. ಜೀವನ ಪದ್ಧತಿಯೇ ಧರ್ಮ. ನಮ್ಮ ಜೀವನ ಪದ್ಧತಿಯಲ್ಲಿ ಬದುಕುವ ಮುಸ್ಲಿಂ, ಕ್ರೈಸ್ತ ಮಹಿಳೆಯರೂ ಸಂಘಟನೆಯಲ್ಲಿದ್ದಾರೆ. ಸಂಘಟನೆ 3 ಸಾವಿರ ಶಾಖೆಗಳನ್ನು 5 ಲಕ್ಷ ಕಾರ್ಯಕರ್ತೆಯರಿದ್ದಾರೆ. 20 ದೇಶಗಳಲ್ಲಿ ಶಾಖೆಗಳಿವೆ. ಹೆಣ್ಣುಮಕ್ಕಳಿಗೆ ದೇಶದಲ್ಲಿ 22 ಕಡೆ ಉಚಿತ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿದ್ದೇವೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹೆಣ್ಣುಮಕ್ಕಳಿಗೆ ಆತ್ಮವಿಶ್ವಾಸ, ಕ್ಷಮತೆ ಹೆಚ್ಚಿಸಲು ಕಾರ್ಯಾಗಾರ ಆಯೋಜಿಸುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿಭಾಗ ಕಾರ್ಯವಾಹಿಕಾ ಗಿರಿಜಾ ಭಟ್, ಸುಧಾಮೂರ್ತಿ ಇದ್ದರು.