ಸ್ಕ್ವಾಡ್ಸ್ ಚುನಾವಣೆ: ಸಹಕಾರ ಭಾರತಿ ಬೆಂಬಲಿತರ ಮೇಲುಗೈ
ಮಂಗಳೂರು: ದ.ಕ. ಕೃಷಿ ಅಭಿವೃದ್ಧಿ ಸಹಕಾರಿ ಸಂಘ(ಸ್ಕ್ವಾಡ್ಸ್) ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿ ಉಮೇಶ್ ರೈ ಮನವಳಿಕೆ ಸೋತಿದ್ದಾರೆ.
ಸಹಕಾರಿ ಭಾರತಿ ಬೆಂಬಲಿತ ವಿಜೇತರು: ಪುತ್ತೂರು-ಸುಭದ್ರಾ ಭಟ್, ಸುಳ್ಯ-ಜಯರಾಮ ರೈ, ಬಂಟ್ವಾಳ-ಕೆ.ರವೀಂದ್ರ(ವ್ಯಕ್ತಿ ಸದಸ್ಯ ಕ್ಷೇತ್ರ), ಬಂಟ್ವಾಳ-ಪ್ರಮೋದ್ ಕುಮಾರ್ ರೈ, ಕೊಡಗು-ರವಿ ಬಸಪ್ಪ, ಉಡುಪಿ-ಅಶೋಕ್ ಕುಮಾರ್ ಶೆಟ್ಟಿ(ಸಹಕಾರಿ ಕ್ಷೇತ್ರ).
ಕಾಂಗ್ರೆಸ್ ಬೆಂಬಲಿತರು
ಪುತ್ತೂರು-ಎಸ್.ಬಿ.ಜಯರಾಮ ರೈ, ಸುಳ್ಯ-ಸಿ.ಪಿ.ಜಯರಾಮ, ಬೆಳ್ತಂಗಡಿ-ಸೀತಾರಾಮ ರೈ, ಕಾರ್ಕಳ-ಭಾಸ್ಕರ ಕೋಟ್ಯಾನ್(ಸಹಕಾರಿ ಕ್ಷೇತ್ರ).
ಅವಿರೋಧ ಆಯ್ಕೆ
ಬೆಳ್ತಂಗಡಿ-ಪೆಲಪ್ಪಾರು ವೆಂಕಟ್ರಮಣ ಭಟ್, ಮಹಿಳಾ ಮೀಸಲು-ಹೇಮಕಾಂತಿ ಇಳಂತಿಲ ಮತ್ತು ವೃಂದ. ಮಂಗಳೂರು ಮೀಸಲು ಕ್ಷೇತ್ರ-ಗೋಪಾಲ ನೈಕ್, ಹಿಂದುಳಿದ ವರ್ಗ ಮೀಸಲು-ಮಹಾವೀರ ಆರಿಗ, ಉಡುಪಿ-ನಾರಾಯಣ ಬಲ್ಲಾಳ್, ಆನಂದ ನೈಕ್, ಕುಂದಾಪುರ-ರಾಜು ಪೂಜಾರಿ, ಮಂಗಳೂರು-ಮೋನಪ್ಪ ಶೆಟ್ಟಿ.
ದ.ಕ, ಉಡುಪಿ, ಕೊಡಗು ಜಿಲ್ಲಾ ವ್ಯಾಪ್ತಿಯ ಸ್ಕ್ವಾಡ್ಸ್ 'ಎ' ವರ್ಗ ಸದಸ್ಯ ಸಹಕಾರಿ ಸಂಘಗಳ ಕ್ಷೇತ್ರ(9 ಸ್ಥಾನ) ಹಾಗೂ 'ಬಿ' ವರ್ಗದ ವ್ಯಕ್ತಿ ಸದಸ್ಯ ಕ್ಷೇತ್ರ(10 ಸ್ಥಾನ)ಒಟ್ಟು 19 ಸ್ಥಾನ ಪೈಕಿ 9 ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿತ್ತು. ಮಂಗಳವಾರ 10 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳು 6 ಸ್ಥಾನ ಗೆದ್ದರೆ, ಕಾಂಗ್ರೆಸ್ ಬೆಂಬಲಿತರು 4 ಸ್ಥಾನಗಳಲ್ಲಿ ಜಯಿಸಿದರು. 4 ಮಂದಿ ಅವಿರೋಧ ಆಯ್ಕೆಯಾದ ನಿರ್ದೇಶಕರು ಸೇರಿದಂತೆ ಒಟ್ಟು 10 ಸ್ಥಾನ ಪಡೆಯುವಲ್ಲಿ ಸಹಕಾರ ಭಾರತಿ ಯಶಸ್ವಿಯಾಗಿದೆ.
ಪುತ್ತೂರು ಸಹಕಾರ ಸಂಘಗಳ ಕ್ಷೇತ್ರದಲ್ಲಿ ಸ್ಪರ್ಧಿಸಿದ ಬಿಜೆಪಿ ಬಂಡುಕೋರ ಅಭ್ಯರ್ಥಿ ಉಮೇಶ್ ರೈ ಮನವಳಿಕೆ ಪರಾಭವಗೊಂಡಿದ್ದಾರೆ. ಅವರಿಗೆ ಕಾಂಗ್ರೆಸ್ ಬೆಂಬಲ ಘೋಷಿಸಿತ್ತು. ಸ್ಕ್ವಾಡ್ಸ್ ಹಾಲಿ ಅಧ್ಯಕ್ಷ ಜಯರಾಮ ರೈ ಜಾಲ್ಸೂರು ಪುನರಾಯ್ಕೆಗೊಂಡಿದ್ದಾರೆ. ಅವರ ವಿರುದ್ಧ ಸ್ಪರ್ಧಿಸಿದ ಮಾಜಿ ಅಧ್ಯಕ್ಷ ವಾರಣಾಸಿ ಗೋಪಾಲಕೃಷ್ಣ ಭಟ್ ಪರಾಭವಗೊಂಡಿದ್ದಾರೆ.