ಹೆಣ್ಮಕ್ಕಳು ಸಮಾಜ ಗೌರವಕ್ಕೆ ಪಾತ್ರರಾಗಿ: ಶಾಂತಾ ಕುಮಾರಿ
ಮಂಗಳೂರು: ಹೆಣ್ಮಕ್ಕಳು ಕ್ಷಮತೆ, ಉನ್ನತ ಚಿಂತನೆಗಳನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜದ ಗೌರವಕ್ಕೆ ಪಾತ್ರರಾಗಬೇಕು ಎಂದು ರಾಷ್ಟ್ರ ಸೇವಿಕಾ ಸಮಿತಿ ಪ್ರಮುಖ ಸಂಚಾಲಿಕಾ ಶಾಂತಾ ಕುಮಾರಿ ಹೇಳಿದ್ದಾರೆ.
ನಗರದ ಸಂಘನಿಕೇತನದಲ್ಲಿ ಬುಧವಾರ ವಿಭಾಗ ಸಾಂಘಿಕ್ನಲ್ಲಿ ಬೌದ್ಧಿಕ್ ನೀಡಿದರು.
ಯಾವುದೇ ಸಮಸ್ಯೆ ಬಂದರೂ ಎದುರಿಸುವ ಶಕ್ತಿ ಹೆಣ್ಮಕ್ಕಳಿಗೆ ಬರಬೇಕು. ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಆಗಬೇಕು. ಹೆಣ್ಮಕ್ಕಳ ವಿಚಾರದಲ್ಲಿ ಪುರುಷರಲ್ಲಿ ದೃಷ್ಟಿಕೋನ ಬದಲಾಗಬೇಕು. ಹೆಣ್ಮಕ್ಕಳೂ ಸಾಮಾಜಿಕ ಸಭ್ಯತೆ ಬಗ್ಗೆ ತಿಳುವಳಿಕೆ ಹೊಂದಿರಬೇಕು. ದೇಶದಲ್ಲಿ ನಡೆಯುವ ಭಯೋತ್ಪಾದನೆ, ಮತಾಂತರ, ಆಕ್ರಮಣಗಳ ವಿರುದ್ಧ ಎದ್ದು ನಿಲ್ಲುವ ಶಕ್ತಿ ಹೆಣ್ಮಕ್ಕಳಲ್ಲಿ ಮೂಡಿಬರಬೇಕು ಎಂದು ಆಶಿಸಿದರು.
ಅನ್ಯಾಯದ ಹಣ ಮನೆಗೆ ತರುವುದನ್ನು ವಿರೋಧಿಸಿ, ಮಕ್ಕಳನ್ನು ಸರಿದಾರಿಗೆ ತರುವ ಕೆಲಸ ಮಹಿಳೆಯರಿಂದ ಆಗಬೇಕು. ಮಹಿಳೆಯರು ಸಮಾಜದ ಬಗ್ಗೆ ಯೋಚಿಸಬೇಕು. ತಮ್ಮ ಶಕ್ತಿಯನ್ನು ಸದ್ವಿನಿಯೋಗಿಸಬೇಕು ಎಂದು ಹೇಳಿದರು.
ಎಂಆರ್ಪಿಎಲ್ ಡಿಜಿಎಂ ಲಕ್ಷ್ಮೀ ಕುಮಾರನ್ ಅಧ್ಯಕ್ಷತೆ ವಹಿಸಿ, ಮಹಿಳಾ ಸಾರರ್ಥ್ಯದಲ್ಲಿ ಧರ್ಮ, ಸಂಸ್ಕೃತಿ ರಕ್ಷಣೆಗೆ ಮಾರ್ಗದರ್ಶನ ನೀಡಬೇಕು. ಮಹಿಳೆಯರು ವೇದೋಪನಿಷತ್ತು, ರಾಮಾಯಣ, ಮಹಾಭಾರತದ ಜೀವನ ಮೌಲ್ಯಗಳನ್ನು ಬಳಸಿಕೊಳ್ಳಬೇಕು.ಸ್ತ್ರೀಯರಲ್ಲಿ ಆತ್ಮವಿಶ್ವಾಸ ಮೂಡಿದಾಗ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು.
ವಿಭಾಗ ಸಹಕಾರ್ಯವಾಹಿಕಾ ಸವಿತಾ ಭಟ್ ಸ್ವಾಗತಿಸಿದರು. ದಕ್ಷಿಣ ಕರ್ನಾಟಕ ಸಂಚಾಲಿಕ ಸುಧಾಮೂರ್ತಿ ಹಾಜರಿದ್ದರು. ಇದೇ ಸಂದರ್ಭ ಆಕರ್ಷಕ ಶಾರೀರಿಕ ಪ್ರದರ್ಶನ, ಯೋಗವ್ಯಾಯಾಮ ನಡೆಯಿತು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಕಲ್ಪ ಕೈಗೊಳ್ಳಲಾಯಿತು.