ಇಂದಿನಿಂದ ಕಟೀಲಿನಲ್ಲಿ ಬಾಲಮೇಳ ಯಕ್ಷಗಾನ
ಮೂಲ್ಕಿ: ಕಟೀಲಿನ ಶ್ರೀ ದುರ್ಗಾ ಮಕ್ಕಳ ಮೇಳದ 5ನೇ ವಾರ್ಷಿಕೋತ್ಸವ ಅ.18ರಿಂದ 20ವರೆಗೆ ಕಟೀಲು ದೇವಳ ಶಾಲಾ ಸರಸ್ವತಿ ಸದನದಲ್ಲಿ ಜರಗಲಿದ್ದು ಕಾರ್ಯಕ್ರಮದ ಅಂಗವಾಗಿ 13 ಬಾಲ ಯಕ್ಷಗಾನ ಮೇಳಗಳಿಂದ ಯಕ್ಷಗಾನ ಪ್ರದರ್ಶನ, ಸಂಮಾನ ಕಾರ್ಯಕ್ರಮ ಜರಗಲಿದೆ.
ಅಕ್ಟೋಬರ್ 18ರ ಬೆಳಗ್ಗೆ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಕಟೀಲು ದೇವಳದ ಅರ್ಚಕ ವೆಂಕಟರಮಣ ಆಸ್ರಣ್ಣ ಉದ್ಘಾಟಿಸಲಿದ್ದು ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಶುಭಾಶಂಸನೆಗೈಯಲಿದ್ದಾರೆ. ಮಧ್ಯಾಹ್ನದಿಂದ ಬಾಲ ಯಕ್ಷಗಾನ ಮೇಳಗಳ ತಲಾ 2 ಗಂಟೆಗಳ ಅವಧಿಯ ಯಕ್ಷಗಾನ ಪ್ರದರ್ಶನ ಜರಗಲಿದ್ದು ಮಧ್ಯಾಹ್ನ 2.30ರಿಂದ 4.30ರವರೆಗೆ ಸಜಿಪ ಮುನ್ನೂರಿನ ಚಿಣ್ಣರ ಲೋಕ ಸೇವಾ ಟ್ರಸ್ಟ್ನಿಂದ ಯಕ್ಷಗಾನ-ಪಾಂಚಜನ್ಯ, 4.30ರಿಂದ 6.30 ಕದ್ರಿ ಕಲಾ ಕೇಂದ್ರದಿಂದ ಕದ್ರಿ ಶ್ರೀ ಮಂಜುನಾಥ, 6.40ರಿಂದ 8.40 ಸುಳ್ಯ ಪೈಲಾರು ಫ್ರೆಂಡ್ಸ್ ಕ್ಲಬ್ನಿಂದ ವೀರಮಣಿ ಕಾಳಗ ನಡೆಯಲಿದೆ.
19ರಂದು ಬೆಳಗ್ಗೆ 9.30ರಿಂದ 11.30 ಸುರತ್ಕಲ್ ವಿದ್ಯಾದಾಯಿನಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಕೃಷ್ಣಾರ್ಜುನ, 11.35.ರಿಂದ 1.35 ಒಡಿಯೂರು ಸಾತ್ವಿಕ ಕಲಾ ತೇಜ ತಂಡದಿಂದ ಸುದರ್ಶನ ವಿಜಯ, ಮಧ್ಯಾಹ್ನ 2ರಿಂದ 4 ಕದ್ರಿ ಬಾಲ ಯಕ್ಷಕೂಟದಿಂದ ಶಕ್ರಾರಿ, 4ರಿಂದ 6ರವರೆಗೆ ಕಲ್ಲಡ್ಕದ ಚೈತನ್ಯ ಕಲಾ ವೇದಿಕೆ ಪ್ರತಿಷ್ಟಾನದಿಂದ ವೀರ ತರುಣೆ ಸೇನ, 6ರಿಂದ 8 ಬಂಟ್ವಾಳದ ಪ್ರಗತಿ ಹಿರಿಯ ಪ್ರಾಥಮಿಕ ಶಾಲೆಯಿಂದ ವಿದ್ಯಾಮಾತೆ ಶಾರದೆ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
20ರಂದು ಬೆಳಗ್ಗೆ 9.30ರಿಂದ 11.30 ಬೆಳುವಾಯಿಯ ಶ್ರೀ ಯಕ್ಷದೇವ ಮಿತ್ರ ಮಂಡಳಿಯಿಂದ ಶಶಿಪ್ರಭಾ ಪರಿಣಯ, 11.30ರಿಂದ 1.30 ಮಂಜನಾಡಿ ಶ್ರೀ ದುರ್ಗಾಪರಮೇಶ್ವರಿ ಕೃಪಾಶ್ರಿತ ಯಕ್ಷ ಕಲಾ ಮಂಡಳಿಯಿಂದ ಇಂದ್ರಜಿತು ಕಾಳಗ,1.50ರಿಂದ 3.50ರವರೆಗೆ ಪಾಣಾಜೆ ಅರ್ಲಪದವು ಶ್ರೀ ಸುಬ್ರಹ್ಮಣೇಶ್ವರ ಯಕ್ಷಕಲಾ ಸಂಘದಿಂದ ನರಕಾಸುರ ಮೋಕ್ಷ, 4ರಿಂದ 6ರವರೆಗೆ ಹಳುವಳ್ಳಿ ಶ್ರೀ ಕುಮಾರ ಸಾಂಸ್ಕ್ರತಿ ಪ್ರತಿಷ್ಠಾನದಿಂದ ವೀರ ಬಬ್ರುವಾಹನ ಪ್ರಸಂಗ ಪ್ರದರ್ಶಿಸಲ್ಪಡಲಿದೆ.
ಸಂಜೆ ಜರಗಲಿರುವ ಸಮಾರೋಪ ಸಮಾರಂಭದಲ್ಲಿ ಕಟೀಲು ಮೇಳದ ಹಿರಿಯ ಕಲಾವಿದ ಜರ್ನಾರ್ದನ ಜೋಗಿ ಮಂಜೇಶ್ವರರಿಗೆ ಸನ್ಮಾನ, ಅರ್ಥಧಾರಿ ಶ್ರೀಧರ್ ಡಿ.ಎಸ್ ಮತ್ತು ಕಲಾ ವಿಮರ್ಶಕ ಕೆ. ಎಲ್. ಕುಂಡಂತಾಯರಿಗೆ ಗೌರವಾರ್ಪಣೆ ಜರಗಲಿದ್ದು ಅಧ್ಯಕ್ಷತೆಯನ್ನು ಆನೆಗುಡ್ಡೆ ಶ್ರೀ ವಿನಾಯಕ ದೇವಳದ ಆಡಳಿತ ಮೊಕ್ತೇಸರ ಸೂರ್ಯನಾರಾಯಣ ಉಪಾಧ್ಯಾಯ ವಹಿಸಲಿದ್ದು ಉಡುಪಿ ಕಲಾರಂಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟರಿಗೆ ಗುರುವಂದನೆ ಜರಗಲಿದೆ.
ದೇವಳದ ಆಡಳಿತಾಧಿತಾರಿ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ, ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ,ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಸಮಾರೋಪ ಸಮಾರಂಭದ ಬಳಿಕ ರಥಬೀದಿಯಲ್ಲಿ ಶ್ರೀ ದುರ್ಗಾ ಮಕ್ಕಳದ ಮೇಳದಿಂದ ಪಂಚವಟಿ ಯಕ್ಷಗಾನ ಪ್ರದರ್ಶನ ಜರಗಲಿದೆಯೆಂದು ಶ್ರೀ ದುರ್ಗಾ ಮಕ್ಕಳ ಮೇಳದ ಅದ್ಯಕ್ಷ ಹರಿನಾರಾಯಣ ದಾಸ ಆಸ್ರಣ್ಣ ತಿಳಿಸಿದ್ದಾರೆ.