ಇನ್ನು ಅನಂತ ಸಂಪತ್ತಿನ ದೇವರಿಗೆ ದೇಶೀ ಗೋವಿನ ಕ್ಷೀರಾಭಿಷೇಕ
ಮಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯಾದ ಅನಂತ ಸಂಪತ್ತಿನ ಒಡೆಯ ತಿರುವನಂತಪುರ ಶ್ರೀಅನಂತಪದ್ಮನಾಭ ಸ್ವಾಮೀ ದೇವಸ್ಥಾನದಲ್ಲಿ ಇನ್ನು ಮುಂದೆ ಶ್ರೀಅನಂತಪದ್ಮನಾಭ ದೇವರಿಗೆ ಪ್ರತಿನಿತ್ಯ ದೇಶೀ ಗೋವಿನ ಹಾಲಿನ ಅಭಿಷೇಕ ನಡೆಯಲಿದೆ.
ತಿರುವನಂತಪುರ ಕೃಷ್ಣವಿಲಾಸ ಅರಮನೆಯಲ್ಲಿ ಗುರುವಾರ ನಡೆದ 'ಅನಂತ ಗೋ ರಥಯಾತ್ರೆ' ಸಮಾರೋಪದಲ್ಲಿ ಹೊಸನಗರ ಮಠಾಧೀಶ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ. ಅನಂತಪುರ, ತಿರುವನಂತಪುರ, ಕೇರಳ, ಕರ್ನಾಟಕದ ಸಂತ ರಾಜರನ್ನು ಈ ಗೋ ಯಾತ್ರೆ ಒಗ್ಗೂಡಿಸಿದೆ. ಇನ್ನು ಮುಂದೆ ಕೇರಳದ ಎಲ್ಲ ದೇವಸ್ಥಾನಗಳಲ್ಲಿ ದೇಶೀ ಗೋವಿನ ಕ್ಷೀರಾಭಿಷೇಕ ನಡೆಯಲಿ ಎಂದು ಹಾರೈಸಿದರು. ಕಾಸರಗೋಡು ಅನಂತಪುರ ದೇವಸ್ಥಾನದಿಂದ ಹೊರಟ 18 ದೇಶೀ ಗೋವುಗಳ ಅನಂತ ಗೋ ಯಾತ್ರೆ ಕೇರಳದ ಅನೇಕ ದೇವಸ್ಥಾನಗಳನ್ನು ಸಂದರ್ಶಿಸಿತು. ಈ ಸಂದರ್ಭ ತಿರುವಾಂಕೂರು ಸಂಸ್ಥಾನದ ರಾಜಾ ಉತ್ರಾಡ ತಿರುವಳ ಮಾರ್ತಾಂಡ ವರ್ಮ ಅವರಿಗೆ ಪೆರ್ಲ ಬಜಕೋಡ್ಲು ಅಮೃತಧಾರಾ ಗೋಶಾಲೆಯಿಂದ ತಂದ ಗೋವುಗಳನ್ನು ಶ್ರೀಗಳವರು ಹಸ್ತಾಂತರಿಸಿದರು.