ಉಗ್ರರ ದಾಳಿ: ಅಣಕು ಕಾರ್ಯಾಚರಣೆ
ಮಂಗಳೂರು: ರೈಲು ನಿಲ್ದಾಣ, ಬಂದರು, ಬೀಚ್, ಪುಣ್ಯಕ್ಷೇತ್ರ, ಅಲ್ಲಲ್ಲಿ ರಸ್ತೆಗಳಲ್ಲಿ ಎಲ್ಲೆಡೆ ಗುರುವಾರ ಬಿಗು ಬಂದೋಬಸ್ತ್, ಕಟ್ಟೆಚ್ಚರ, ಉಗ್ರ ತಪಾಸಣೆ !
ತಪ್ಪಿಸಿಕೊಂಡ ಉಗ್ರರ ಪತ್ತೆಗೆ ಈ ರೀತಿ ಮಾಡುತ್ತಿಲ್ಲ. ಇದು ವರ್ಷಂಪ್ರತಿ ನಡೆಯುವ ವಿದೇಶಿಯ ಶಕ್ತಿಗಳಿಂದ ಕಡಲ ತೀರ ರಕ್ಷಣೆಗೆ ಸಾಗರ ಕವಚ ಕಾರ್ಯಾಚರಣೆ, ಉಗ್ರರ ಪತ್ತೆ ಅಣಕು ಕಾರ್ಯಾಚರಣೆ.
ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ ಮತ್ತು ಪೊಲೀಸರ ಸಹಕಾರದಲ್ಲಿ ಗುರುವಾರ, ಶುಕ್ರವಾರ ಕಾರ್ಯಾಚರಣೆ ನಡೆಯಲಿದೆ. ಭಯೋತ್ಪಾದಕರು ದಾಳಿ ಮಾಡಿದರೆ ಪೊಲೀಸರು ಹೇಗೆ ಎದುರಿಸಬಲ್ಲರು ಎಂಬುದನ್ನು ಪರೀಕ್ಷಿಸಲು ಈ ಕಾರ್ಯಾಚರಣೆ ನಡೆಯುತ್ತದೆ.
ರಾಜ್ಯದ ಕರಾವಳಿ ತೀರ ಉದ್ದಕ್ಕೂ ಕಾರ್ಯಾಚರಣೆ ನಡೆಯಲಿದೆ. ಜನ ಸಂದಣಿಯ ರೈಲು ನಿಲ್ದಾಣ, ಬಸ್ ನಿಲ್ದಾಣ, ಮಾಲ್‌ಗಳಲ್ಲಿ ಮಾತ್ರವಲ್ಲದೆ ವಿಮಾನ ನಿಲ್ದಾಣಗಳಲ್ಲಿಯೂ ಬಿಗು ತಪಾಸಣೆ ನಡೆಯಲಿದೆ. ಬ್ಯಾಗ್‌ಗಳಲ್ಲಿ ಸ್ಫೋಟಕಗಳಿವೆಯೊ ಎಂದು ಪರಿಶೀಲನೆ ನಡೆಸುತ್ತಿದ್ದಾರೆ. ಇದು ಪೊಲೀಸ್ ಇಲಾಖೆಗೆ ಸಣ್ಣ ಮಟ್ಟಿನ ವ್ಯಾಯಾಮ. ಪೊಲೀಸರೇ ಭಯೋತ್ಪಾದಕರಂತೆ ನಟಿಸಿ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ಹಿಡಿದುಕೊಂಡು ನಗರ ಪ್ರವೇಶಿಸುತ್ತಾರೆ. ಇವರನ್ನು ಪೊಲೀಸರು ಪತ್ತೆ ಹಚ್ಚಿ ಹಿಡಿಯಬೇಕು. ಈ ರೀತಿಯ ಅಣಕು ಕಾರ್ಯಾಚರಣೆಗೆ ಇದು 5ನೇ ವರ್ಷ.