ಎತ್ತಿನಹೊಳೆ ಯೋಜನೆಯಿಂದ ಜಿಲ್ಲೆಗೆ ತೊಂದರೆ ಆಗದು: ಡೀವಿ
ಮಂಗಳೂರು: ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಕುಡಿವ ನೀರು ಒದಗಿರುವ ಎತ್ತಿನಹೊಳೆ ಯೋಜನೆಯಿಂದ ಜಿಲ್ಲೆಯ ಜನತೆಗೆ ತೊಂದರೆಯಾಗದು ಎಂದು
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಕಲೇಶಪುರ ಭಾಗದಲ್ಲಿ ಹರಿಯುವ 11 ಉಪನದಿಗಳ ನೀರನ್ನು ಬರಪೀಡಿತ ಜಿಲ್ಲೆಗೆ ತಿರುಗಿಸಲಾಗುತ್ತದೆ. ಪಶ್ಚಿಮ ಘಟ್ಟದಿಂದ ಸಮುದ್ರ ಸೇರುವ 2 ಸಾವಿರ ಟಿಎಂಸಿ ನೀರಿನ ಪೈಕಿ 24 ಟಿಎಂಸಿ ನೀರನ್ನು ಮಾತ್ರ ತಿರುಗಿಸಲಾಗುತ್ತದೆ. ಘಟ್ಟದ ಕೆಳಗಿನ ಭಾಗದ ನೀರನ್ನು ಈ ಯೋಜನೆಗೆ ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಎತ್ತಿನಹೊಳೆ ಯೋಜನೆ ಕುರಿತು ನೀರಾವರಿ ಇಲಾಖೆಯ ಹಿರಿಯ ಅಧಿಕಾರಿ ಪಾಟೀಲ್ ಜತೆ ತಾನು ಮಾತುಕತೆ ನಡೆಸಿದ್ದು, ಅವರನ್ನು ಜಿಲ್ಲಾ ಪಂಚಾಯ್ತಿಗೆ ಕರೆಸಿ ವಿಶೇಷ ಸಮಾಲೋಚನೆ ನಡೆಸಲಾಗುವುದು ಎಂದು ಡೀವಿ ನುಡಿದರು.
ಈ ವಿಚಾರದಲ್ಲಿ ಜಿಲ್ಲಾ ಬಿಜೆಪಿ ನಿಲುವೂ ಸ್ಪಷ್ಟವಾಗಿದ್ದು, ಜಿಲ್ಲೆಯ ಹಿತಾಸಕ್ತಿಗೆ ಧಕ್ಕೆ ತರುವ ಯೋಜನೆಗೆ ಅವಕಾಶವಿಲ್ಲ. ಎತ್ತಿನಹೊಳೆ ಯೋಜನೆ ಜಾರಿಗೆ ಮುನ್ನ ಜನತೆಗೆ ಸಮಗ್ರ ಮಾಹಿತಿ ನೀಡಬೇಕು. ಇದನ್ನೇ ಮುಖ್ಯಮಂತ್ರಿಗೂ ಆಗ್ರಹಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಪ್ರತಾಪ್ಸಿಂಹ ನಾಯಕ್ ಸ್ಪಷ್ಟಪಡಿಸಿದರು.
ಕೊಳೆರೋಗ ಪರಿಹಾರ ನೀಡಿ: ರೈತರ ಸಮಸ್ಯೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಕಡೆಗಣಿಸುತ್ತಿರುವುದಕ್ಕೆ ಅಡಕೆ ಬೆಳೆಗಾರರಿಗೆ ಕೊಳೆರೋಗ ಪರಿಹಾರವನ್ನು ಸರಿಯಾಗಿ ನೀಡದಿರುವುದೇ ಸಾಕ್ಷಿ. ಜಾನುವಾರು ಕಾಲುಬಾಯಿ ಜ್ವರಕ್ಕೆ ತಕ್ಷಣ ಲಸಿಕೆ ನೀಡಲು ಕ್ರಮ ಕೈಗೊಂಡಿಲ್ಲ. ರು. 25 ಸಾವಿರ ಪರಿಹಾರ ಮೊತ್ತ ಘೋಷಿಸಿ, ನೀಡಿದ್ದು ರು. 16 ಸಾವಿರ ಮಾತ್ರ. ಕೊಳೆರೋಗದಲ್ಲಿ ರಾಜ್ಯದಲ್ಲಿ ಶೇ.65 ಅಡಕೆ ಫಸಲು ಹಾನಿ ಸಂಭವಿಸಿದ್ದು, ದ.ಕ.ಜಿಲ್ಲೆಯಲ್ಲಿ ಶೇ.70 ಹಾನಿ ಉಂಟಾಗಿದೆ. ಅವಿಭಜಿತ ಜಿಲ್ಲೆಯಲ್ಲಿ ನಾಲ್ವರು ಸಚಿವರಿದ್ದರೂ ಪರಿಹಾರ ಬಿಡುಗಡೆಗೊಳಿಸಲು ಸಾಧ್ಯವಾಗಿಲ್ಲ. ಪುತ್ತೂರು ಶಾಸಕಿ ರು. 16.50 ಕೋಟಿ ಪರಿಹಾರ ಬಿಡುಗಡೆಯಾಗಿದ್ದಾಗಿ ಹೇಳಿದ್ದು, ಆ ಬಗ್ಗೆ ದಾಖಲೆ ಪತ್ರ ಬಿಡುಗಡೆ ಮಾಡುವಂತೆ ಡೀವಿ ಆಗ್ರಹಿಸಿದರು.
29ರಂದು ಪುತ್ತೂರಲ್ಲಿ ಪ್ರತಿಭಟನೆ: ಕೊಳೆರೋಗ ಪರಿಹಾರಕ್ಕೆ ಒತ್ತಾಯಿಸಿ ಪುತ್ತೂರಿನಲ್ಲಿ ಅ.29ರಂದು ಬೃಹತ್ ಪ್ರತಿಭಟನೆಯನ್ನು ಬಿಜೆಪಿ ಹಮ್ಮಿಕೊಂಡಿದೆ. ಇದಕ್ಕೂ ಸರ್ಕಾರ ಬಗ್ಗದಿದ್ದರೆ ಹೋರಾಟವನ್ನು ಹಂತ ಹಂತವಾಗಿ ವಿಸ್ತರಿಸಲಾಗುವುದು ಎಂದು ಹೇಳಿದರು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ಗೆ ಸರ್ಕಾರದಿಂದ ಬರಬೇಕಾದ ರು. 162 ಕೋಟಿ ಮೊತ್ತವನ್ನು ಶೀಘ್ರವೇ ಬಿಡುಗಡೆ ಮಾಡಬೇಕುಎಂದು ಡೀವಿ ಆಗ್ರಹಿಸಿದರು.