ಕಂಠಪೂರ್ತಿ ಕುಡಿದು ಯದ್ವಾತದ್ವ ಜೀಪು ಚಲಾಯಿಸಿ ಅವಾಂತರ ಸೃಷ್ಟಿಸಿದ ಯುವಕ
ಉಪ್ಪಿನಂಗಡಿ: ಮದ್ಯಪಾನ ಮಾಡಿದ ಯುವಕನೊಬ್ಬ ಪ್ರಯಾಣಿಕರ ಸೇವೆಗೆ ಸಿದ್ಧವಾಗಿದ್ದ ಜೀಪೊಂದನ್ನು ಯದ್ವಾತದ್ವ ಚಲಾಯಿಸಿ ಬೈಕೊಂದನ್ನು ಜಖಂಗೊಳಿಸಿದ್ದಲ್ಲದೆ, ಅಂಗಡಿಗೆ ನುಗ್ಗಿಸಲು ಯತ್ನಿಸಿದ ಘಟನೆ ಗುರುವಾರ ಉಪ್ಪಿನಂಗಡಿಯಲ್ಲಿ ನಡೆದಿದೆ.
ಕಂಠಪೂರ್ತಿ ಕುಡಿದಿದ್ದ ಬೆಳ್ತಂಗಡಿ ತಾಲೂಕು ಕುರಿಯ ಬಂದಾರು ನಿವಾಸಿ ನವೀನ ಎಂಬಾತ ಆತೂರು ಕಡೆಗೆ ಪ್ರಯಾಣಿಕರನ್ನು ಕೊಂಡೊಯ್ಯಲು ಸಿದ್ಧವಾಗಿದ್ದ ಜೀಪಿನಲ್ಲಿ ಚಾಲಕನ ಬಳಿ ಕುಳಿತ. ಚಾಲಕ ಜೀಪಿನ ಹಿಂಬದಿಯಲ್ಲಿ ಪ್ರಯಾಣಿಕರನ್ನು ಕೂರಿಸಿ ಜೀಪನ್ನು ಚಲಾಯಿಸಲೆಂದು ಬರುವಷ್ಟರಲ್ಲಿ ನವೀನ ಜೀಪನ್ನು ಸ್ಟಾರ್ಟ್ ಮಾಡಿ ಎಕ್ಸಲೇಟರ್ ಒತ್ತಿದ್ದು ಜೀಪು ಮಿಂಚಿನ ವೇಗದಲ್ಲಿ ಸಾಗಿ ಎದುರು ನಿಂತಿದ್ದ ಬೈಕೊಂದನ್ನು ಪುಡಿಗಟ್ಟಿ ಅಂಗಡಿಯೊಂದಕ್ಕೆ ನುಗ್ಗಲು ಮುಂದಾಯಿತು. ಕೂಡಲೇ ಜೀಪಿನ ಚಾಲಕ ಸುಂದರ ಗೌಡ ಓಡಿ ಬಂದು ಪ್ರಯಾಸದಿಂದ ಜೀಪನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಸಂಭವನೀಯ ಅಪಾಯ ತಪ್ಪಿಸಿದರು. ಬೈಕ್ ಸವಾರ ಸಮೀಪದ ಅಂಗಡಿಯಲ್ಲಿ ತಂಪು ಪಾನೀಯ ಕುಡಿಯಲೆಂದು ಹೋಗಿದ್ದ ಕಾರಣಕ್ಕೆ ಅವರ ಜೀವ ಉಳಿಯಿತು. ಜೀಪಿನಲ್ಲಿದ್ದ ನಾಲ್ವರು ಸಣ್ಣ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.