ಕಾಲೇಜು ವಿದ್ಯಾರ್ಥಿಗಳಿಂದ ಬುದ್ಧಿಮಾಂದ್ಯರಿಗೆ ಅಕ್ಕಿ ನೆರವು
ಬ್ರಹ್ಮಾವರ: ಇಲ್ಲಿನ ಕ್ರಾಸ್ ಲ್ಯಾಂಡ್ ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚೆಗೆ ಸ್ಥಳೀಯ ನೇಜಾರು ಗ್ರಾಮದಲ್ಲಿರುವ ವಿಶೇಷ ಮಕ್ಕಳ ಶಾಲೆಗೆ ಅಕ್ಕಿ ನೀಡಿ ಸಹೃದಯತೆಯನ್ನು ಮೆರೆದರು.
ಕಾಲೇಜಿನ ವಿದ್ಯಾರ್ಥಿ ಸಂಘದ ಕೋರಿಕೆಯಂತೆ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿನ ಸಂಸ್ಥಾಪಕರ ದಿನಾಚರಣೆಯಂದು ತಮ್ಮ ಕೈಲಾದಷ್ಟು ಅಕ್ಕಿಯನ್ನು ತಂದು ಸಂಗ್ರಹಿಸಿ ಕಲ್ಯಾಣಪುರ ನೇಜಾರಿನ ಸ್ಪಂದನ ಬುದ್ಧಿಮಾಂದ್ಯ ಮಕ್ಕಳ ವಸತಿ ನಿಲಯಕ್ಕೆ ನೀಡಿದರು. ಗ್ರಾಮೀಣ ಪ್ರದೇಶದಿಂದ ಬರುತ್ತಿರುವ ಈ ಎಲ್ಲಾ ವಿದ್ಯಾರ್ಥಿಗಳು ಸುಮಾರು 90 ಕೆ.ಜಿ.ಯಷ್ಟು ಕುಚ್ಚಲಕ್ಕಿ ಮತ್ತು ಬೆಳ್ತಿಗೆ ಅಕ್ಕಿ ಸಂಗ್ರಹಿಸಿದ್ದು ವಿಶೇಷವಾಗಿತ್ತು.
ಈ ಕಾಲೇಜಿನ ನೆರವಿನಿಂದ ತಮಗೆ ಬಹಳ ಸಹಾಯವಾಗಿದೆ. ಈ ವಿದ್ಯಾರ್ಥಿಗಳ ಈ ಸಹೃದಯತೆ ಇತರ ಕಾಲೇಜು ವಿದ್ಯಾರ್ಥಿಗಳಿಗೂ ಮಾದರಿಯಾಗಿದೆ ಎಂದು ಸ್ಪಂದನ ಸಂಸ್ಥೆಯ ವ್ಯವಸ್ಥಾಪಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.