ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮನೆಗೆ ಕನ್ನ; ನಗದು, ಬೆಳ್ಳಿ, ಟಿವಿ ಕಳವು

Mainashree
Updated On : 18 Oct 2013, 11:20 am

ಉಪ್ಪಿನಂಗಡಿ: ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದ ಮನೆಯೊಂದರ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಟಿವಿ, ನಗದು, ಬೆಳ್ಳಿ ಸಾಮಗ್ರಿಗಳನ್ನು ಕದ್ದೊಯ್ದ ಘಟನೆ ವರದಿಯಾಗಿದೆ.
ಪ್ರತಿಮಾ ಭಟ್ ಎಂಬವರ ಮನೆಯಲ್ಲಿ ಕಳ್ಳತನವಾಗಿದ್ದು, ಪ್ರತಿಮಾ ಭಟ್ ತವರು ಮನೆಗೆ ಹೋಗಿದ್ದ ಸಮಯದಲ್ಲಿ ಮನೆ ಮಂದಿ ಯಾರೂ ಇಲ್ಲದಿರುವುದನ್ನು ಗಮನಿಸಿ ಈ ಕಳ್ಳತನ ನಡೆದಿದೆ ಎನ್ನಲಾಗಿದೆ. ಮನೆಯ ಎದುರುಭಾಗದ ಬಾಗಿಲ ಬೀಗ ತುಂಡರಿಸಿ ಒಳ ನುಗ್ಗಿದ ಕಳ್ಳರು ಕಪಾಟಿನ ಬಾಗಿಲು ಮುರಿದು ಎಲ್ಲ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿಸಿ ಜಾಲಾಡಿದ್ದಾರೆ. ಬೆಳ್ಳಿ ಸಾಮಗ್ರಿಗಳು, ಇತ್ತೀಚೆಗಷ್ಟೇ ಖರೀದಿಸಿದ್ದ ಎಲ್‌ಸಿಡಿ ಟಿವಿ ಹಾಗೂ ಸುಮಾರು ರು. 2000 ನಗದು ಮತ್ತು ಠೇವಣಾತಿ ದಾಖಲೆಗಳನ್ನು ಕದ್ದೊಯ್ದಿದ್ದಾರೆಂದು ದೂರಲಾಗಿದೆ. ಕಳವುಗೀಡಾದ ವಸ್ತುಗಳ ಒಟ್ಟು ಮೌಲ್ಯ 50 ಸಾವಿರಕ್ಕೂ ಹೆಚ್ಚು ಎಂದು ಅಂದಾಜಿಸಲಾಗಿದೆ.
ಬುಧವಾರದಂದು ಮಧ್ಯಾಹ್ನದ ವೇಳೆ ಪ್ರತಿಮಾ ಭಟ್ ಅವರ ಮನೆಗೆ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ  ಸನಿಹದಲ್ಲೇ ನಿರ್ಮಾಣಗೊಳ್ಳುತ್ತಿರುವ ಕಟ್ಟಡ ನಿರ್ಮಾಣ ಕಾರ್ಮಿಕರಲ್ಲಿ ಮನೆಯವರು ಎಲ್ಲಿಗೆ ಹೋಗಿದ್ದಾರೆಂದು ವಿಚಾರಿಸಿದ್ದಾನೆ. ಎಲ್ಲಿಗೆ ಹೋಗಿದ್ದಾರೆಂದು ಗೊತ್ತಿಲ್ಲ ಎಂದು ಕಾರ್ಮಿಕ ಹೇಳಿದ್ದು, ತಾನು ಈ ಮನೆಯವರ ಸಂಬಂಧಿಕನೆಂದೂ, ತನ್ನ ದಾಖಲೆಗಳು ಈ ಮನೆಯಲ್ಲಿದೆ ಎಂದು ತಿಳಿಸಿದ ಅಪರಿಚಿತ ಅಲ್ಲೇ ಠಿಕಾಣಿಯೂಡಿದ್ದಾನೆ. ರಾತ್ರಿಯಾದರೂ ಅಲ್ಲೇ ಇದ್ದ ಆತ ಕಟ್ಟಡ ಕಾರ್ಮಿಕರೆಲ್ಲ ಮಲಗಿದ ಬಳಿಕ ಈ ಕಳವು ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಆತ ತುಳು, ಮತ್ತು ಕನ್ನಡ ಮಾತನಾಡುತ್ತಿದ್ದರೂ ಕಟ್ಟಡ ಕಾರ್ಮಿಕರೊಂದಿಗೆ ಪ್ರಯಾಸದಿಂದ ಹಿಂದಿಯಲ್ಲಿ ಮಾತನಾಡುತ್ತಿದ್ದ ಎನ್ನಲಾಗಿದೆ. ಕಾರ್ಮಿಕರಲ್ಲಿ ತಾನು ಬ್ಯಾಂಕ್ ಖಾತೆಗಳನ್ನು ಮಾಡಿಕೊಡುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement