ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುದ್ದಿ ಸಂಕ್ಷೇಪ

Mainashree
Updated On : 18 Oct 2013, 11:20 am

ವ್ಯಾಪಾರಿ ಆತ್ಮಹತ್ಯೆ
ಪುತ್ತೂರು: ಇಲ್ಲಿನ ಬಸ್ ನಿಲ್ದಾಣ ಬಳಿ ಅಂಗಡಿ ಹೊಂದಿದ್ದ ಹಿರಿಯ ವ್ಯಾಪಾರಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ. ಇಲ್ಲಿನ ಮುಖ್ಯ ರಸ್ತೆಯಲ್ಲಿ ಪೀಠೋಪಕರಣದ ಅಂಗಡಿ ನಡೆಸುತ್ತಿದ್ದ ಮೋಹನ್ ಭಟ್ (72) ಮೃತರು. ಅವರು ಗುರುವಾರ ಬೆಳಗ್ಗೆಯಿಂದಲೇ ನಾಪತ್ತೆಯಾಗಿದ್ದರು, ಸಂಜೆ ವೇಳೆ ಅವರ ಮೃತದೇಹ ಮನೆ ಪಕ್ಕದಲ್ಲಿರುವ ಬಾವಿಯಲ್ಲಿ ಪತ್ತೆಯಾಯಿತು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತರು ಪತ್ನಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ. ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವ್ಯಕ್ತಿ ನಾಪತ್ತೆ
ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿಯ ಸದಾಶಿವ ಸದನದ ನಿವಾಸಿ ರಮೇಶ್ ಕೋಟ್ಯಾನ್(57) ಅಕ್ಟೋಬರ್ 14ರಂದು ಮನೆಯಿಂದ ಹೊರಟವರು ಮನೆಗೆ ವಾಪಾಸು ಬಾರದೇ ನಾಪತ್ತೆಯಾಗಿದ್ದು ಈ ಬಗ್ಗೆ ಸಂತೋಷ್ ಮೂಲ್ಕಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರಮೇಶ್ ಸಾಧಾರಣ ಮೈಕಟ್ಟು ಹೊಂದಿದ್ದು ಎಣ್ಣೆ ಕಪ್ಪು ಮೈ ಬಣ್ಣ, ಎಡ ಕೈ ಹೆಬ್ಬೆರಳು ಬಾಗಿದ್ದು ಮನೆಯಿಂದ ಹೋಗುವಾಗ ಅರ್ಧ ತೋಳಿನ ನೀಲಿ ಬಣ್ಣದ ಶರ್ಟು, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ತುಳು, ಕನ್ನಡ ಬಲ್ಲ ಅವರ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ಮೂಲ್ಕಿ ಪೋಲಿಸ್ ಠಾಣೆಗೆ ದೂರವಾಣಿ ಸಂಖ್ಯೆ 0824 2290533 ಸಂಪರ್ಕಿಸುವಂತೆ ಠಾಣಾಧಿಕಾರಿ ತಿಳಿಸಿದ್ದಾರೆ.
21ರಿಂದ ಪ್ರಾಣಾಯಾಮ ಉಚಿತ ಶಿಬಿರ
ಮೂಲ್ಕಿ: ಇಲ್ಲಿನ ಪತಂಜಲಿ ಯೋಗ ಸಮಿತಿ ಆಶ್ರಯದಲ್ಲಿ ಅ.21ರಿಂದ 26ರವರೆಗೆ ಪ್ರತಿದಿನ ಸಂಜೆ 5ರಿಂದ 6.30ರವರೆಗೆ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಪ್ರಾಣಾಯಾಮ ಯೋಗ ಉಚಿತ ಶಿಬಿರವು ಯೋಗ ಶಿಕ್ಷಕ ಎನ್.ಪಿ. ಶೆಟ್ಟಿ ಮತ್ತು ಜಯ ಶೆಟ್ಟಿ ಕೆಂಚನಕೆರೆ ಅವರಿಂದ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಉಡುಪಿ: ಬಾಲಕ ನಾಪತ್ತೆ
ಉಡುಪಿ: ಇಲ್ಲಿನ ಕುಕ್ಕಿಕಟ್ಟೆ ಸಮೀಪದ ಇಂದಿರಾನಗರದಿಂದ ಬಾಲಕನೊಬ್ಬ ಸೋಮವಾರ ನಾಪತ್ತೆಯಾಗಿರುವುದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ರೇವತಿ ಕಾಮತ್- ದಿನೇಶ್ ಶೆಣೈ ಎಂಬವರ ಮಗ ವಿನೀತ್ ಶೆಣೈ (11) ನಾಪತ್ತೆಯಾಗಿರುವ ಬಾಲಕ. ಸೋಮವಾರ ಬೆಳಗ್ಗೆ 10 ಗಂಟೆಗೆ ಮನೆ ಹತ್ತಿರದ ಕ್ಯಾಂಟೀನಿಗೆ ಹೋಗಿ ತಿಂಡಿಕೊಟ್ಟು ಬರುವಂತೆ ಕಳುಹಿಸಿಕೊಟ್ಟಿದ್ದು, ಮಧ್ಯಾಹ್ನ 1 ಗಂಟೆಯಾದರೂ ಮನೆಗೆ ಬರಲಿಲ್ಲ. ಆಗ ತಾಯಿ ರೇವತಿ ಕ್ಯಾಂಟಿನ್‌ಗೆ ಹೋಗಿ ವಿಚಾರಿಸಿದಾಗ ವಿನೀತ್ ತಿಂಡಿ ಕೊಟ್ಟು ರು. 700 ಪಡೆದುಕೊಂಡು ಹೋಗಿರುವುದಾಗಿ ತಿಳಿಸಿದ್ದಾರೆ. ಆದರೆ ಈವರೆಗೂ ವಿನೀತ್ ಮನೆಗೆ ಬಂದಿಲ್ಲ. ಈ ಬಗ್ಗೆ ರೇವತಿ ಕಾಮತ್ ನೀಡಿದ ದೂರಿನಂತೆ ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿಬಾಜೆ: ಮತ್ತೆರಡು ಹಲ್ಲೆ ಪ್ರಕರಣ
ಉಪ್ಪಿನಂಗಡಿ: ವಿವಾದಗ್ರಸ್ತ ಶಿಬಾಜೆಯಲ್ಲಿ ಮತ್ತೆರಡು ಅಪರಾಧ ಕೃತ್ಯಗಳು ನಡೆದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಬಾಜೆಯ ಟಿ.ಸಿ. ಅಬ್ರಾಹಂ ಎಂಬವರಿಗೆ ಸ್ಥಳೀಯ ನಿವಾಸಿಗರಾದ ಎ.ಸಿ. ಉಲ್ಲಾಹನ್, ಬೈಸಿಲ್, ಫೈಲಿ, ರಾಜು, ಸಿಬಿ ಎಂಬವರು ರಾಡ್ ಮತ್ತು ದೊಣ್ಣೆಯಿಂದ ಹೊಡೆದು ಹಲ್ಲೆ ನಡೆಸಿದ್ದಲ್ಲದೆ, ಅಬ್ರಾಹಾಂ ಅವರನ್ನು ಅಡಕೆ ಮರಕ್ಕೆ ಕಟ್ಟಿ ಹಾಕಿ ಅವರಲ್ಲಿದ್ದ ರು. ಹತ್ತು ಸಾವಿರ ನಗದು ದರೋಡೆ ನಡೆಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮತ್ತೊಂದು ಹಲ್ಲೆ: ಇದೇ ಪ್ರಕರಣಕ್ಕೆ ಸಂಬಂಧಿಸಿ ಶಿಬಾಜೆಯ ನಿವಾಸಿ ಎಂ.ವಿ. ಫೈಲಿ ಎಂಬವರಿಗೆ ಎ.ಸಿ. ಕುರಿಯನ್ ಎಂಬವರ ಕೆಲಸದಾಳುಗಳಾದ ಹರೀಶ, ಟಿ.ಸಿ. ಅಬ್ರಾಹಾಂ, ಜಯಂತ, ಚಿದಾನಂದ, ನವೀನ, ಐತ್ತೆ ಎಂಬವರು ದೊಣ್ಣೆಯಿಂದ ಹೊಡೆದು ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಗಾಯಾಳು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೆರೆಗೆ ಬಿದ್ದು ಯುವಕ ಸಾವು
ಕೋಟ: ಇಲ್ಲಿನ ಆವರ್ಸೆ ಗ್ರಾಮದ ಉಗ್ರಾಣಿ ಮನೆ ಎಂಬಲ್ಲಿ ಯುವಕನೊಬ್ಬ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಮೃತರು ಚಂದ್ರಶೇಖರ (30). ಬೆಳಿಗ್ಗೆ 9.45ಕ್ಕೆ ಮನೆ ಸಮೀಪದ ಕೆರೆಯಲ್ಲಿ ತಮ್ಮ ದನದ ಮೈ ತೊಳೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಕೆರೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಸಂಬಂಧಿ ದಿವಾಕರ ಗಾಣಿಗ ನೀಡಿದ ದೂರಿನಂತೆ ಕೋಟೆ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.
ಎದೆನೋವು: ಯುವಕ ಮೃತ
ಬ್ರಹ್ಮಾವರ: ಇಲ್ಲಿನ ಹಾವಂಜೆ ಗ್ರಾಮದ ಮುಗ್ಗೇರಿ ಎಂಬಲ್ಲಿ ಯುವಕನೊಬ್ಬ ಎದೆ ನೋವಿನಿಂದ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಮೃತರು ಪ್ರಭಾಕರ (22), ಈತ ಲಕ್ಷ್ಮೀ ಹಾವಂಜೆ ಎಂಬವರ ಸಹೋದರ. ಚಿಕ್ಕಂದಿನಿಂದಲೂ ಹೃದಯ ನೋವಿನಿಂದ ಬಳಲುತ್ತಿದ್ದ ಪ್ರಭಾಕರ, 5- 6 ದಿನಗಳಿಂದ ವಿಪರೀತ ನೋವಿನಿಂದ ಬಳಲುತ್ತಿದ್ದರು. ಗುರುವಾರ ಮುಂಜಾನೆ ಎದೆ ನೋವು ಜಾಸ್ತಿಯಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಬೆಳಗ್ಗೆ 7 ಗಂಟೆಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement