ಸೌಜನ್ಯಾ ಕೊಲೆ ಸಿಬಿಐ ತನಿಖೆಗೆ ಡೀವಿ ಒತ್ತಾಯ
ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣದಲ್ಲಿ ಸಿಐಡಿ ತನಿಖೆಯಲ್ಲಿ ತೃಪ್ತಿ ಸಿಗದಿದ್ದರೆ ಸಿಬಿಐ ತನಿಖೆ ನಡೆಸುವಂತೆ ರಾಜ್ಯ ಸರ್ಕಾರವನ್ನು ಡೀವಿ ಆಗ್ರಹಿಸಿದ್ದಾರೆ. ಸೌಜನ್ಯಾ ಕೊಲೆ ನಡೆದು ಒಂದು ವರ್ಷ ಸಂದಿದೆ. ಆಗಿನ ರಾಜ್ಯ ಸರ್ಕಾರ ಪ್ರಕರಣದ ತ್ವರಿತ ಇತ್ಯರ್ಥಕ್ಕೆ ಸಿಐಡಿ ತನಿಖೆಗೆ ವಹಿಸಿತ್ತು. ಇದೀಗ ಸೌಜನ್ಯಾ ಕುಟುಂಬ ಸಿಬಿಐ ತನಿಖೆಗೆ ಆಗ್ರಹಿಸುತ್ತಿದ್ದು, ಸರ್ಕಾರ ಕೂಡ ತಕ್ಷಣ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಈ ಬಗೆಗಿನ ಸಾರ್ವಜನಿಕ ಚರ್ಚೆಗೆ ಇತಿಶ್ರೀ ಹಾಕಬೇಕು ಎಂಬುದು ಜಿಲ್ಲಾ ಬಿಜೆಪಿ ಒತ್ತಾಯ ಎಂದರು. ಇದೇ ಘಟನೆಯನ್ನು ನೆಪವಾಗಿಸಿ ಧರ್ಮಸ್ಥಳ ಧರ್ಮಾಧಿಕಾರಿಗಳ ವೈಯಕ್ತಿಕ ಚಾರಿತ್ರ್ಯ ಹನನ ಮತ್ತು ಶ್ರದ್ಧಾ ಕೇಂದ್ರದ ಘನತೆ ಕುಗ್ಗಿಸುವ ಕೆಲಸ ನಡೆಯುತ್ತಿದೆ. ಧರ್ಮಸ್ಥಳ ಕ್ಷೇತ್ರ ಹಾಗೂ ಕೊಲೆ ಪ್ರಕರಣಕ್ಕೆ ಥಳಕು ಹಾಕುವುದು ಸರಿಯಲ್ಲ. ಪ್ರಕರಣದ ಕುರಿತು ತನಿಖೆಗೆ ಸರ್ಕಾರವನ್ನು ಆಗ್ರಹಿಸುವುದು ಬಿಟ್ಟು ವೃಥಾ ಆರೋಪ ಹೊರಿಸುವುದು ಮುಂದುವರಿದರೆ ಬಿಜೆಪಿ ಹೋರಾಟ ನಡೆಸಲು ಸಿದ್ಧವಿದೆ ಎಂದು ಹೇಳಿದರು.