ಶತೌಷಧಿ ಮಹಾ ಧನ್ವಂತರಿಯಾಗ
ಮಂಗಳೂರು: ಬಿಜೈಕಾಪಿಕ್ಕಾಡ್ ಗುರುವೈದ್ಯನಾಥ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಶುಕ್ರವಾರ ಶತೌಷಧಿ ಪ್ರಾಯೋಜಿತ ಮಹಾ ಧನ್ವಂತರಿ ಯಾಗ ನಡೆಯಿತು.
ದೇರೆಬೈಲ್ ವಿಠಲದಾಸ್ ತಂತ್ರಿ ಪೌರೋಹಿತ್ಯದಲ್ಲಿ 100ಕ್ಕೂ ಅಧಿಕ ಔಷಧೀಯ ವನಮೂಲಿಕೆಗಳನ್ನು ಮಹಾ ಯಾಗದಲ್ಲಿ ಸಮರ್ಪಿಸಲಾಯಿತು.
ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಔಷಧೀಯ ಸಸ್ಯಗಳು ನಶಿಸುತ್ತಿವೆ. ಇದನ್ನು ಸಂರಕ್ಷಿಸುವ ಕಾರ್ಯ ನಡೆಯಬೇಕು. ಅರಣ್ಯ ಇಲಾಖೆ ಗಿಡಗಳನ್ನು ನೆಡುವ ಕಾರ್ಯಕ್ರಮ ಮಾಡುವಾಗ ಔಷಧೀಯ ಗಿಡಗಳನ್ನು ನೆಡಲು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಮಾಹೆ ಮಾಜಿ ಕುಲಪತಿ ಡಾ.ಬಿ.ಎಂ.ಹೆಗ್ಡೆ ಮಾತನಾಡಿ, ನಾಟಿ ವೈದ್ಯರ ಔಷಧ ಪದ್ಧತಿ, ಚಿಕಿತ್ಸೆ ಪರಿಣಾಮಗಳನ್ನು ದಾಖಲಿಕರಣಗೊಳಿಸುವ ಕೆಲಸ ಮಾಗಬೇಕು ಎಂದರು.
ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಪರಂಪರೆ, ಸಂಸ್ಕೃತಿ, ಆಚರಣೆಯ ಹಿನ್ನೆಲೆ ಉದ್ದೇಶ ಮತ್ತು ಸಂದೇಶವನ್ನು ಮುಂದಿನ ಪೀಳಿಗೆಗೆ ತಿಳಿ ಹೇಳುವ ಕೆಲಸ ಆಗಬೇಕು ಎಂದರು.
ಆಡಳಿತ ಮಂಡಳಿ ಅಧ್ಯಕ್ಷ ಮಾಜಿ ಮೇಯರ್ ಶಶಿಧರ ಹೆಗ್ಡೆ, ಗುರಿಕಾರ ಮುರಲಿ ಕುಮಾರ್ ಯಾಗ ಕಾರ್ಯಕ್ರಮ ಸಂಘಟಿಸಿದರು.
ಈ ಸಂದರ್ಭದಲ್ಲಿ ಉದಯವಾಣಿ ಉಪಾಧ್ಯಕ್ಷ ಆನಂದ ಕೆ., ಕಾರ್ಪೊರೇಟರ್ ಅಶೋಕ್ ಕುಮಾರ್ ಡಿ.ಕೆ., ಹರೀಶ್ ಶೆಟ್ಟಿ, ರಜನೀಶ್, ರಾಧಾಕೃಷ್ಣ, ಕೆ.ಕೆ.ಪೇಜಾವರ, ಉಳ್ಳಾಲ ಪುರಸಭೆ ಅಧ್ಯಕ್ಷೆ ಗಿರಿಜಾ ಭಾಯಿ ಇದ್ದರು.