ಸುದ್ದಿ ಸಂಕ್ಷೇಪ
ಮಂಗಳೂರು: ನಾಳೆ ರ್ಯಾಂಕ್ ವಿಜೇತರಿಗೆ ಸನ್ಮಾನ, ವೃತ್ತಿ ಮಾರ್ಗದರ್ಶನ ಶಿಬಿರ
ಮಂಗಳೂರು: ಮಂಗಳೂರಿನ ಎಕ್ಸ್ಪರ್ಟ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಅ.20ರಂದು ನಗರದ ಪುರಭವನದಲ್ಲಿ ಬೆಳಗ್ಗೆ 8.30ಕ್ಕೆ ರ್ಯಾಂಕ್ ವಿಜೇತರಿಗೆ ಸನ್ಮಾನ ಹಾಗೂ ವೃತ್ತಿ ಮಾರ್ಗದರ್ಶನ ಶಿಬಿರ ನಡೆಯಲಿದೆ. ನಿಟ್ಟೆ ವಿಶ್ವವಿದ್ಯಾಲಯ ಸಹಕುಲಪತಿ ಡಾ.ಶಾಂತರಾಮ ಶೆಟ್ಟಿ ಉದ್ಘಾಟಿಸುವರು. ಪದವಿಪೂರ್ವ ಶಿಕ್ಷಣ ಇಲಾಖೆ ಪರೀಕ್ಷಾ ವಿಭಾಗ ಸಹಾಯಕ ನಿರ್ದೇಶಕ ಪ್ರೊ.ಸುರೇಶ್ ತುಂಗ ಅಧ್ಯಕ್ಷತೆ ವಹಿಸುವರು. ಸುರತ್ಕಲ್ ಎನ್ಐಟಿಕೆ ಉದ್ಯೋಗ ತರಬೇತಿ ಮತ್ತು ವಿದ್ಯಾರ್ಥಿ ಕ್ಷೇಮ ವಿಭಾಗದ ನಿವೃತ್ತ ಪ್ರೊ.ಡಾ.ಪ್ರೇಮ್ ಕುಮಾರ್ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಪ್ರತಿಷ್ಠಾನ ಕಾರ್ಯದರ್ಶಿ ಉಷಾಪ್ರಭಾ ನಾಯಕ್ ತಿಳಿಸಿದ್ದಾರೆ. ಕಳೆದ ಸಾಲಿನ ಸಿಇಟಿ, ಕಾಮೆಡ್ಕೆ, ಜೆಇಇ ಪರೀಕ್ಷೆಗಳಲ್ಲಿ ಉತ್ಯುತ್ತಮ ರ್ಯಾಂಕ್ ಗಳಿಸಿದ ಎಕ್ಸ್ಪರ್ಟ್ನ 27 ವಿದ್ಯಾರ್ಥಿಗಳಿಗೆ ಚಿನ್ನ/ಬೆಳ್ಳಿ ಪದಕ ನೀಡಿ ಪುರಸ್ಕರಿಸಲಾಗುತ್ತದೆ. ಅಲ್ಲದೆ ರು. 2.94 ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ನೀಡಲಿದೆ. ಸಂಸ್ಥೆ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳು ವೃತ್ತಿ ಮಾರ್ಗದರ್ಶನ ನೀಡುವರು.
ಪೂರ್ವದ್ವೇಷ: ಇಬ್ಬರ ಮೇಲೆ ತಂಡದಿಂದ ಹಲ್ಲೆ
ಮೂಲ್ಕಿ: ಕಿನ್ನಿಗೋಳಿ ಸಮೀಪದ ಬಲವಿನಗುಡ್ಡೆಯ ಕಿಲೆಂಜೂರು ಹಾಲು ಸೊಸೈಟಿಯ ಬಳಿ ಗುರುವಾರ ರಾತ್ರಿ ಸಂಬಂಧಿಕರ ಮನೆಯಲ್ಲಿನ ಮೆಹಂದಿ ಕಾರ್ಯಕ್ರಮ ಮುಗಿಸಿ ಬರುತ್ತಿದ್ದ ವಸಂತ ಮತ್ತು ನಾಗರಾಜ ಎಂಬವರಿಗೆ ಹಳೆ ದ್ವೇಷದ ಹಿನ್ನೆಲೆಯಲ್ಲಿ ಶಿವಪ್ರಸಾದ್, ಅವಿನಾಶ್, ವೇಣುಗೋಪಾಲ್ ಮತ್ತಿತರರು ಹಲ್ಲೆ ನಡೆಸಿದ್ದಾಗಿ ವಸಂತ ದೂರು ನೀಡಿದ್ದಾರೆ.
ರು. 40 ಕೋಟಿ ಬಿಡುಗಡೆ: ರೈ
ಮಂಗಳೂರು: ಎಂಡೋಸಲ್ಫಾನ್ ಮತ್ತು ಕೊಳೆರೋಗ ಬಾಧಿತ ರೈತರಿಗೆ ಪರಿಹಾರವಾಗಿ ಒಟ್ಟು ರು. 40 ಕೋಟಿ ಮೊತ್ತವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ.
ಜಿಲ್ಲೆಯ ಸಚಿವರು, ಶಾಸಕರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನಿಯೋಗ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಆಗ್ರಹಿಸಿದ ಹಿನ್ನೆಲೆಯಲ್ಲಿ ಸಕಾರಾತ್ಮಕ ಸ್ಪಂದಿಸಿದ ಮುಖ್ಯಮಂತ್ರಿಗಳು ಈ ಮೊತ್ತ ಬಿಡುಗಡೆ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.