ಸುದ್ದಿ ಸಂಕ್ಷೇಪ
ದ.ಕ. ಜಿಲ್ಲೆ ವಿವಿಧೆಡೆ ಮಳೆ
ಮಂಗಳೂರು: ಜಿಲ್ಲೆಯ ಕೆಲವೆಡೆ ಶನಿವಾರವೂ ತುಂತುರು ಮಳೆ ಕಾಣಿಸಿದೆ. ಕೆಲವೆಡೆ ಉತ್ತಮ ಮಳೆ ಸುರಿದಿದೆ. ಮಂಗಳೂರಿನಲ್ಲಿ ಸಂಜೆ ಮಳೆ ಹನಿದಿದೆ. ಮಧ್ಯಾಹ್ನವರೆಗೆ ಬಿಸಿಲು ಕಂಡುಬಂದರೂ ಸಂಜೆ ಒಮ್ಮೆಲೇ ಮೋಡಕಾಣಿಸಿ ಗುಡುಗು ಸಹಿತ ಮಳೆ ಸುರಿಯಿತು. ರಾತ್ರಿವರೆಗೂ ತುಂತುರು ಹನಿ ಮುಂದುವರಿದಿತ್ತು. ಶನಿವಾರ ಬೆಳಗ್ಗಿನವರೆಗೆ ಜಿಲ್ಲೆಯ ಬಂಟ್ವಾಳದಲ್ಲಿ ಗರಿಷ್ಠ 60 ಮಿಲಿ ಮೀಟರ್ ಮಳೆ ದಾಖಲಾಗಿದೆ. ಬೆಳ್ತಂಗಡಿ 6.6 ಮಿ.ಮೀ, ಪುತ್ತೂರು 9.6 ಮಿ.ಮೀ, ಉಪ್ಪಿನಂಗಡಿ 10 ಮಿ.ಮೀ, ಸುಳ್ಯ 20.4 ಮಿ.ಮೀ ಮಳೆ ದಾಖಲಾಗಿದೆ.
ಮೂಲ್ಕಿ ಸುತ್ತಮುತ್ತ ಭಾರಿ ಮಳೆ: ಮೂಲ್ಕಿ, ಕಿನ್ನಿಗೋಳಿ, ಹಳೆಯಂಗಡಿ, ಕಟೀಲು ಪರಿಸರದಲ್ಲಿ ಶನಿವಾರ ಸಂಜೆಯಿಂದ ನಿರಂತರವಾಗಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದ್ದು ಯಾವುದೇ ಹಾನಿಯಾಗಿಲ್ಲ.
22ರಂದು ಏಳಿಂಜೆ ದೇವಳದಲ್ಲಿ ಅಂಗಾರಕ ಸಂಕಷ್ಟಿ ಪೂಜೆ
ಮೂಲ್ಕಿ: ಏಳಿಂಜೆಯ ಶ್ರೀ ಲಕ್ಷ್ಮೀ ಜನಾರ್ಧನ ಮಗಹಾಗಣಪತಿ ದೇವಳದಲ್ಲಿ ಅ. 22ರಂದು ಅಂಗಾರಕ ಸಂಕಷ್ಟಿ ಪೂಜೆಯು ಜರುಗಲಿದೆ. ಅಂದು ಬೆಳಗ್ಗೆ ಗಣಹೋಮ, ಶ್ರೀಲಕ್ಷ್ಮೀಜನಾರ್ಧನ ದೇವರಿಗೆ ವಿಷ್ಣು ನಾಮ ಹೋಮ, ಮಹಾಗಣಪತಿ ದೇವರಿಗೆ 108 ತೆಂಗಿನಕಾಯಿಯ ಗಣಹೋಮ, ಮಧ್ಯಾಹ್ನ ಮಹಾಪೂಜೆ, ಸಂಜೆ ಕಿನ್ನಿಗೋಳಿಯ ವಿಜಯ ಕಲಾವಿದರು ತಂಡದಿಂದ ಪಾಂಡು ಪಾತೆರುಜೆ ತುಳು ನಾಟಕ, ರಾತ್ರಿ ಶ್ರೀ ಲಕ್ಷ್ಮೀ ಜನಾರ್ಧನ ದೇವರಿಗೆ ರಂಗ ಪೂಜೆ, ಚಂದ್ರೋದಯ, ಮಹಾಗಣಪತಿ ದೇವರಿಗೆ ಮಹಾಪೂಜೆ, ಅನ್ನಸಂತರ್ಪಣೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.