ಬಸವ ವಸತಿ ಫಲಾನುಭವಿಗಳಿಗೆ ಅನುದಾನ ಬಿಡುಗಡೆಗೆ ಒತ್ತಾಯ
ಬಂಟ್ವಾಳ: ನಿಯಮಾವಳಿ ಸರಳೀಕರಿಸಿ ಬಸವ ವಸತಿ ಫಲಾನುಭವಿಗಳ ಹಣ ಬಿಡುಗಡೆ ಮಾಡುವಂತೆ ಸಂಗಬೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಭಾಕರ ಪ್ರಭು, ವಸತಿ ಸಚಿವ ಅಂಬರೀಷ್ ಅವರಿಗೆ ಮನವಿ ಮೂಲಕ ಒತ್ತಾಯಿಸಿದ್ದಾರೆ.
3 ವರ್ಷ ಹಿಂದೆ ರಾಜೀವ ಗಾಂಧಿ ವಸತಿ ನಿಗಮ ಮುಖಾಂತರ ವಸತಿ ಸೌಲಭ್ಯ ಮಂಜೂರಾತಿಯಾಗಿ ನಿಯಮಾವಳಿಯಂತೆ ಪಂಚಾಂಗ, ಗೋಡೆ, ಛಾವಣಿ ಕಾಮಗಾರಿಗಳನ್ನು ಹಂತ ಹಂತವಾಗಿ ಪೂರೈಸಿದ್ದು, ನಂತರ ನಿಗಮ ವತಿಯಿಂದ ಎಲ್ಲ ಫಲಾನುಭವಿಗಳ ಪಟ್ಟಿಯನ್ನು ತಡೆ ಹಿಡಿಯಲಾಯಿತು. ಮತ್ತೆ ನಿಗಮದ ಸುತ್ತೋಲೆಯಂತೆ ಹಂತವಾರು ಛಾಯಾಚಿತ್ರಗಳನ್ನು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ದೃಢೀಕರಿಸಿ ನಿಗಮಕ್ಕೆ ಕಳುಹಿಸಿದ ನಂತರ ತಡೆ ತೆಗೆಸಲಾಗಿತ್ತು. ತಾಲೂಕು ನೋಡಲ್ ಅಧಿಕಾರಿಗಳಿಂದ ಜಿಪಿಎಸ್ ಮಾಡಿಸಿದ ನಂತರವೂ ಕೆಲವೊಂದು ಮನೆಗಳ ವಿಸ್ತೀರ್ಣ ಜಾಸ್ತಿಯಾಗಿದೆ ಎಂಬ ಕಾರಣಕ್ಕಾಗಿ ತಡೆ ತೆಗೆಯದೆ ಹಣ ಬಿಡುಗಡೆಯಾಗಿಲ್ಲ ಎಂದು ಮನವಿಯಲ್ಲಿ ವಿವರಿಸಿದ್ದಾರೆ. ಮನೆ ಕಟ್ಟಿಕೊಂಡ ಫಲಾನುಭವಿಗಳಿಗೆ ನಿಯಮಾವಳಿ ಸರಳೀಕರಿಸಿ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.